Friday, April 11, 2008

20.ಜಲ ಪ್ರಳಯ-ಭೂಸಂರಕ್ಷಕ ವರಹಾಸ್ವಾಮಿಯ ದರ್ಶನ

ಶ್ರೀಹರಿಯ ತಲೆಗೆ ದೊಡ್ಡ ಪೆಟ್ಟು! ಹೌದು, ಯಾವ ರೀತಿಯಲ್ಲೇ ಅಗಲಿ ಇಲ್ಲಿ ಸ್ವತಃ ನೋವುಂಡು ಅರಗಿಸಿ ಕೊಂಡರೇನೆ ಇತರರ ನೋವನ್ನೂ ಅರಿಯಲು ಸಾಧ್ಯವಾದೀತು. ಅಂತೆಯೆ, ಜನರ ಸಂಕಷ್ಟಗಳಿಗೆ ಸ್ವತಃ ಸ್ಪಂದಿಸದವನು ಸಾತ್ವಿಕನೆನಿಸಲಾರನಲ್ಲ.. ಸ್ವಾರ್ಥಕ್ಕಾಗಿಯೆ ಬದುಕುವವರು  ಸಾವಿನಲ್ಲೂ ನೆಮ್ಮದಿ ಕಾಣಲಾರರು.  ಅಷ್ಟಕ್ಕೂ ಈ ನಿರ್ದಯಿ ಬದುಕಿನಲ್ಲಿ ಮೊದಲು ತಾನು ಬದುಕಬೇಕಾಗುವುದೂ ನ್ಯಾಯವೇ.  ಆನಂತರವೇ ಇತರರ ಬದುಕಿಗೆ ತಾನು ಬೇಕಾಗುವುದೂ ಸತ್ಯವೇ. 

ಇದೇ ಸಮಸ್ಯೆ ಶ್ರೀಹರಿಯನ್ನೂ ಕಾಡದಿರಲಿಲ್ಲ. ಆದರೆ, ಆ ದೇವನಿಗಾದ ಗಾಯಕ್ಕೆ  ಔಷಧಿ ಚಿಕಿತ್ಸೆ  ನೀಡುವರಾರು? ಯಾರೂ ಇಲ್ಲದವರಿಗೆ ದೇವರೇ ಇರುವನಲ್ಲ... ಎಂದರೆ, ದೇವರಿಗೇ ಪೆಟ್ಟು ತಗುಲಿದರೆ ಇನ್ನೇನ! ದೇವಾನು ದೇವತೆಗಳು ಸುಮ್ಮನಿರುವರೇನು? ಅಷ್ಟ ದಿಕ್ಪಾಲಕರಾದಿಯಾಗಿ ದೇವಗಣವನ್ನೆಲ್ಲ ಕಾಡಿತ್ತು ಚಿಂತೆ..

ಆಗ ದೇವಗುರು ಬೃಹಸ್ಪತಿ ನಾನಿರುವಾಗ ಏಕೆ ಚಿಂತೆ?  ಎಂದನು. ಶ್ರೀಹರಿಗೆ ಅಲ್ಲಲ್ಲ, ವೈಕುಂಠದಿಂದ ಧರೆಗಿಳಿದು ಬಂದ ಆ ದೇವ ದೇವನ ಮೈಮನವೆಲ್ಲ ಶ್ರೀಲಕ್ಷ್ಮಿಯ ಆವಾಸಸ್ಥಾನವೆ ಆಗಿರುವುದರಿಂದ ಆತನೀಗ ಶ್ರೀನಿವಾಸನು. ತನ್ನಾಕೆ ಅಗಲಿಕೆಯಿಂದ ನೊಂದಿರುವ ಆ ಶ್ರೀನಿವಾಸನಿಗೆ ಆರೈಕೆ ಮಾಡುವರಾರು? ಎಂಬ ಪ್ರಶ್ನೆ ಅಷ್ಟ ದಿಕ್ಪಾಲಕರಾದಿಯಾಗಿ ದೇವಗಣವನ್ನೆಲ್ಲ ಕಾಡಿತ್ತು.

Monday, July 23, 2007

19.ಮಹಾವಿಷ್ಣುವು ಶ್ರೀನಿವಾಸನಾಗಿ ಪ್ರಕಟಗೊಂಡದ್ದು.

ಮಹಾವಿಷ್ಣುವು ಈ ಸಪ್ತಗಿರಿ ಧಾಮವನ್ನು ಸೇರಿ ಸಾಧುಸಂತರಿಗಿಂತಲೂ ಮಿಗಿಲಾದ ವಿರಾಗಿಯಾಗಿದ್ದನು. ವಲ್ಮೀಕ ವಾಸಿಯಾಗಿದ್ದು ಕುಳಿತಲ್ಲೆ ಕ್ಷೀರಸುಧೆಯನ್ನು ಸವಿಯುತ್ತ ಹೊರ ಜಗತ್ತಿಗೆ ಅವ್ಯಕ್ತನಾಗಿಯೆ ಯಳಿದಿದ್ದನು.

ಈ ಬೆಟ್ಟಕ್ಕೆ ಸಮೀಪದಲ್ಲೆ ಇದ್ದ ಚೋಳರಾಜನ ರಾಜ್ಯವು ಸುಭಿಕ್ಷವಾಗಿತ್ತು. ಕಾಲಕಾಲಕ್ಕೆ ಮಳೆಬೆಳೆಯಾಗುತ್ತಿತ್ತು. ಗೋವುಗಳು ಕೊಡಗಳ ತುಂಬ ಹಾಲು ಕರೆಯುತ್ತಿದ್ದವು. ಸ್ತ್ರೀಯರು ತಮ್ಮ ತಮ್ಮ ಗೃಹಕೃತ್ಯ, ಪಾವಿತ್ರ್ಯತೆ, ನೈರ್ಮಲ್ಯಕ್ಕಾಗಿ ಶ್ರಮಿಸುತ್ತಿದ್ದರು. ತಮ್ಮ ಪತಿದೇವರುಗಳ ಪ್ರೀತಿ, ಮೆಚ್ಚುಗೆಗೆ ಪಾತ್ರರಾಗಿದ್ದರು. ಅನೇಕ ಬ್ರಾಹ್ಮಣರು ಗೋಧಾನ್ಯ, ದ್ರವ್ಯದಾನಗಳಿಗೆ ಆಸೆ ಪಡೆದೆ ತಮ್ಮ ಕಾಮ್ಯ ಕರ್ಮಗಳಲ್ಲಿ ನಿರತರಾಗಿದ್ದರು. ಜೀವನದಲ್ಲಿ ಅಪರಿಗ್ರಹ ತತ್ವಪಾಲಿಸಿಕೊಂಡು ಬರುತ್ತಿದ್ದರು. ಕಡು ಬಡವರೂ ಜೀವನ ಸೌಖ್ಯಕ್ಕಾಗಿಯೆ ಕಷ್ಟಪಟ್ಟು ದುಡಿಯುತ್ತಿದ್ದರು. ಕಷ್ಟಸಹಿಷ್ಣುತೆಯಲ್ಲೆ ಸಂತೃಪ್ತಿಯನ್ನೂ ಕಾಣಬಲ್ಲವರಾಗಿದ್ದರು. ಅವರಿಗೆ ಕರ್ಮಫಲಗಳಲ್ಲಿ ನಂಬಿಕೆ ಬಹಳವಿದ್ದಿತ್ತು. ಆದರೇನು! ಕಲಿಯುಗ ಧರ್ಮವೆಂಬುದು ಅಂದಿಗೂ ಇಂದಿಗೂ ಬೆಂಬಿಡದಿರುವುದೇನು? ಎಷ್ಟು ಮಳೆಬೆಳೆಯಾದರೇನು? ದುಷ್ಟರು, ದೇಶದ್ರೋಹಿಗಳು, ಕಳ್ಳಕಾಕರು, ಖದೀಮರು, ಅತ್ಯಾಚಾರಿಗಳು ಇದ್ದೇ ಇರುವರು, ಜನಸಾಮನ್ಯರ ಜೀವನವನ್ನೆ ದುರ್ಭರಗೊಳಿಸಿಬಿಡುವರು. ಚೋಳರಾಜನ ರಾಜ್ಯದಲ್ಲೂ ಪರಿಸ್ಥಿತಿ ಹಾಗೇ ಇದ್ದಿತು. ಆ ರಾಜನು ಕೇವಲ ಭೋಗವಿಲಾಸಗಳಲ್ಲಿಯೆ ಮೈಮರೆತಿದ್ದನು. ತನ್ನ ಪ್ರಜೆಗಳ ಹಿತ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಆಲಸ್ಯದಿಂದ ಕಾಲಕಳೆಯುತ್ತದ್ದನು. ಯಾವುದೇ ವಿಷಯವನ್ನೂ ಸುದ್ದಿ ಸಂಗತಿಗಳನ್ನೂ ಸ್ವತಃ ಪರೀಕ್ಷಿಸಿ ಪರಾಂಬರಿಸದೇ ಹೇಳಿಕೆಯ ಮಾತುಗಳಿಗೇ ಬೆಲೆಕೊಡುತ್ತಿದ್ದನು. ಬಡಪಾಯಿ ಪ್ರಜೆಗಳಿಗೆ ಪರಮಾತ್ಮನೆ ಕಾಪಾಡ ಬೇಕಿತ್ತು.

ಅದಾಗಲೆ ಯುಗಧರ್ಮ ರೀತ್ಯ ಕಾಲಿಯುಗದಲ್ಲಾಗುತ್ತಿರುವಗ ಅನ್ಯಾಯ, ಅತ್ಯಾಚಾರ, ಅನಾಹುತ, ಅನರ್ಥಗಳ ಬಗೆಗೇ ಬಹು ಚಿಂತಿತನಾಗಿದ್ದನಲ್ಲವೆ ಬ್ರಹ್ಮದೇವ! ಪ್ರಾಯಶಃ ಆ ಪರಬ್ರಹ್ಮನೂ ಇಂಥ ಚೋಳರಾಜನನ್ನೇ ಸತ್ವಃ ಪರೀಕ್ಷೆಗೊಳಗಾಗುವಂತೆ ಮಾಡಿದನೋ ಅಥವಾ ಲೋಕಕಲ್ಯಾಣದಲಿ ಭೂಪಾಲಕರಿಗೆ ಪಾಠವೊಂದು ಹೀಗಿರಬೇಕೆಂಬುದೇ ನಿಗಮಗೋಚರನ ನಿರ್ಣಯವೋ ಅಂತು ಬ್ರಹ್ಮದೇವನು ಹಸು ವೇಷ ಧರಿಸಿ ಬಂದವನು ಗೋಪಿಕೆಯ ವೇಷದ ಮಹಾಲಕ್ಷ್ಮಿಯ ಮೊಲಕ ಚೋಳ ರಾಜನ ಪಶುಸಂಗೋಪನಾಲಯ ಸೇರಿದ್ದನು. ಚೋಳರಾಣಿಯು ತನ್ನ ಮಗುವಿಗೆ ಹಾಲು ಕುಡಿಸುಲು ಇದೇ ಹಸುವಿನ ಹಾಲನ್ನು ಇಷ್ಟಪಟ್ಟಳಲ್ಲ! ಆದದ್ದಾದರೂ ಏನು? ಈ ಹಸುವು ಅರಮನೆಯ ಒಳಗೂ ಹೊರಗೂ ಮೇವುಂಡು ಸೊಂಪಾಗಿದ್ದಿತಷ್ಟೇ ಹೊರತು ಅಂತಃ ಪುರ ದಾಸಿಯರಿಗೆ ಕೆಚ್ಚಲಿಡಿದು ಕರೆಯಲು ಹೋದರೆ ಹಾಲನ್ನೇ ಕೊಡದಾಯಿತು. ಹಾಗಾದರೆ, ಇದನ್ನು ಮಾರಿದ ಗೋಪಿಕೆಯು ನೀಡಿದ ಆಶ್ವಾಸನೆಯೆ ಸುಳ್ಳೇನು? ಉಹೂಂ, ಖಂಡಿತ ಇರಲಾರದು. ಇಲ್ಲೇ ಏನೋ ಮೋಸ ನಡೆಯುತ್ತಿರುವುದು ಎಂದೇ ರಾಣಿಯು ಚಿಂತಿಸಿದಳು. ಮೊದಲು ಅರಮನೆಯ ಗೋಪಾಲಕನನ್ನು ವಿಚಾರಿಸಬೇಕೆಂದು ಅವನನ್ನೇ ಕರೆಸಿದಳು. ಗೋಪಾಲಕನು ಈ ಹಸುವು ಒಂದು ತೊಟ್ಟೂ ಹಾಲು ಕೊಡುವುದಿಲ್ಲವೆಂಬುದನ್ನು ಕೇಳಿದಾಗ ದಿಗ್ಭ್ರಾಂತನಾದನು. ರಾಣಿಯ ಮುಂದೆ ನಿಂತವನು ಥರಥರ ನಡುಗಿದನು.

“ಮಹಾರಾಣಿಯವರು ತಪ್ಪು ತಿಳಿಯಬಾರದು. ನಾನು ಈ ಆಕಳನ್ನೂ ಎಲ್ಲ ದನಗಲ ಜತೆ ಮೇಯಲೆಂದು ಬೆಟ್ಟದಡವಿಗೆ ಹೊಡೆದುಕೊಂಡು ಹೋಗುವುದು ನಿಜವೇ. ಮುಂದೆ ಅಲ್ಲೇನಾಗುವುದೋ ನಾನರಿಯೆ” ಎಂದನು ತಗ್ಗಿದ ದನಿಯಲ್ಲೇ.

ಗೋಪಾಲಕನ ಮಾತು ಕೇಳಿ ಕುಪಿತಳಾದ ರಾಣಿಯು,
“ಈ ಆಕಳೂ ಬೆಟ್ಟದಡವಿಯಲ್ಲೆಲ್ಲಿ ಮೇಯುತ್ತಿರುತ್ತದೆ? ಅದೇನು ಮಾಡುತ್ತದೆ? ಎಂಬುದನ್ನು ನೋಡಿಕೊಳ್ಳೂವ ಜವಾಬ್ದಾರಿ ನಿನ್ನದೇ ಅಲ್ಲವೇ...” ಗದರಿಸಿದಳು.
“ಹೌದು ಮಹಾರಾಣಿ. ಆ...ದ...ರೆ...”
“ಆದರೇನು! ನೀನೆ ಏಕೆ ಈ ಹಸುವಿನ ಹಾಲನ್ನು ಕರೆದು ಕುಡಿಯುತ್ತಿರಬಾರದು? ಉಳಿದುದನ್ನು ಮಾರಾಟ ಮಾಡುತ್ತಲೂ ಇರಬಹುದಲ್ಲ...” ಎಂದಳು ರಾಣಿ.
“ಇಲ್ಲ ಮಹಾರಾಣಿ, ನನ್ನನ್ನು ನಂಬಿ. ಈ ಹಸುವು ಬೆಟ್ಟ ತಲುಪುತ್ತಿದ್ದಂತೆ ಎಲ್ಲಿಗೆ ಹೋಗುತ್ತದೋ ನಾನು ಗಮನಿಸಿಲ್ಲ. ಕ್ಷಮಿಸಬೇಕು. ನಾನು ಹಾಲನ್ನು ಕದ್ದು ಕುಡಿಯುವ ಅಥವಾ ಮಾರಾಟ ಮಾಡುವಂಥ ನೀಚನಲ್ಲ” ಅವನೆಂದನು.
“ನೋಡು, ಇದು ನಮ್ಮ ಅರಮನೆಯ ಎಲ್ಲಾ ಹಸುಗಳಿಗಿಂತ ವಿಶಿಷ್ಟ ಜಾತಿಯ ಹಸು. ತುಂಬಾ ಬೆಲೆಕೊಟ್ಟು ನಾವು ಕೊಂಡಿದ್ದೇವೆ. ಇದನ್ನು ನೀನು ಮುಂಜಾಗ್ರತೆಯಿಂದ ನೋಡಿಕೊಳ್ಳಬೇಕು ತಿಳಿಯಿತೇ? ನಾಳೆಯಿಂದ ಈ ಹಸು ಅರಮನೆಯಲ್ಲಿ ಕೊಡತುಂಬ ಹಾಲು ಕೊಡುವಂತಾಗಬೇಕು. ಇಲ್ಲದಿದ್ದರೆ ನಿನಗೆ ಶಿಕ್ಷೆ ಎಚ್ಚರ!” ಎಂದು ಚೋಳರಾಣಿಯು ಕಟ್ಟಾಜ್ಞೆ ವಿಧಿಸಿದಳು.

ಈ ಗೋಪಾಲಕನು ಮಾರನೆಯ ದಿನ ತಂದ ಸುದ್ದಿಯು ತೀರ ವಿಚಿತ್ರವು ಅತ್ಯಾಶ್ಚರ್ಯಕರವೂ ಆಗಿದ್ದಿತು.

“ಅರಮನೆಯ ಈ ಕಾಮಧೇನುವು ಬೆಟ್ಟದಡವಿಗೆ ಹೋಗುತ್ತಿದ್ದಂತೆ ಮಂದೆಯಿಂದ ಕಣ್ ತಪ್ಪಿಸಿಕೊಂಡು ದೂರ ಹೋಗುತ್ತದೆ. ಅಲ್ಲೊಂದು ಹುತ್ತಕ್ಕೆ ಕೆಚ್ಚಲು ಆನಿಸಿ ತಾನೇ ಹಾಲೆರೆಯುತ್ತದೆ! ಮಹಾರಾಣಿ.”
“ಏನೆಂದೆ?! ನಮ್ಮ ಕಾಮಧೇನು ದಿನವೂ ಹೋಗಿ ಹುತ್ತಕ್ಕೆ ಹಾಲೆರೆಯುವುದೇನು? ಅದೂ ತನ್ನಷ್ಟಕ್ಕೆ ತಾನೇ ಯಾರೂ ಕೆಚ್ಚಲಿಗೆ ಕೈಹಾಕದೇನೇ… ಏನಿದೀ ವಿಚಿತ್ರ? ಗೋಪಾಲಕ ನಿನ್ನ ಕಣ್ಣು ಗಳಿಗೇನಾದರು ಮಂಕು ಕವಿದಿರಬೇಕಷ್ಟೇ. ಇಲ್ಲ, ನಿನ್ನ ತಲೆಯೆ ಕೆಟ್ಟು ಹೋಗಿದೆಯೇ” ರಾಣಿ ಅಬ್ಬರಿಸಿದಳು.
“ಇಲ್ಲ ಮಹಾರಾಣಿ, ನಾನು ಹೇಳತಿರೊದೆಲ್ಲ ಸತ್ಯ. ನೀವೇ ಬಂದು ನೋಡಬಹುದು ತಾಯಿ...” ಅವನೆಂದನು.
“ಏನು? ನಾನು ಚೋಳರಾಜ್ಯದ ಮಹಾರಾಣಿ ಆ ಬೆಟ್ಟದ ಕಾಡಿಗೆ ಬಂದು ನೋಡುವುದೆಂದರೇನು? ಇಂತಹದೊಂದು ಸಣ್ಣ ವಿಷಯಕ್ಕೇ...” ಗರ್ವದಿಂದ ಹೇಳಿದಳು ರಾಣಿ. “ಹೂಂ, ಈ ಸುದ್ದಿಯನ್ನು ಮಹಾರಾಜರಿಗೆ ಮುಟ್ಟಿಸಿದರೆ ಅವರಿಗೆ ನಿನ್ನನ್ನು ಕರೆಸಿ ನೋಡಿಕೊಳ್ಳುತ್ತಾರೆ” ಅಂದಳು.

ಕೂಡಲೆ ರಾಜಭಟರನ್ನು ಕರೆದು ಗೋಪಾಲಕನನ್ನು ಅವರಿಗೊಪ್ಪಿಸಿದಳು ಮಹಾರಾಣಿ.
ಅನಂತರ, ಗೋಪಾಲಕನನ್ನು ರಾಜಭಟರು ಮಹಾರಾಜನ ಎದುರಿಗೇ ಒಯ್ದು ನಿಲ್ಲಿಸಿದಾಗಲೂ ಅವನು, “ಮಹಾರಾಜ, ನಾನು ಹೇಳತಿರೊದೆಲ್ಲ ಸತ್ಯ. ಅರಮನೆಯ ಕಾಮಧೇನುವು ಹುತ್ತಕ್ಕೇ ಹಾಲೆರೆಯುತ್ತದೆ” ಎಂದೇ ಹೇಳಿದನು.

ಅವನ ಮಾತನ್ನು ಕೇಳಿ ಚೋಳರಾಜನು ಪಕಪಕನೆ ನಕ್ಕುಬಿಟ್ಟನು.
“ಮಹಾರಾಜಾ, ಇದು ನಗುವ ಸಮಾಚಾರವಲ್ಲ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನನ್ನನ್ನು ಬಿಟ್ಟುಬಿಡಿ. ನನ್ನದೇನೂ ತಪ್ಪಿಲ್ಲ” ಗೋಪಾಲಕನು ತೀರ ಕಳಿಕಳಿಯಿಂದಲೆ ಬೇಡಿಕೊಂಡನು.
ಪಕ್ಕದಲ್ಲೆ ಇದ್ದ ರಾಜನ ಆಪ್ತ ಅನುಚರನೊಬ್ಬನು,
“ಪ್ರಭು! ಈ ಗೊಲ್ಲನಿಗೆಲ್ಲೊ ಹುಚ್ಚೇ ಹಿಡಿದಿರಬೇಕು. ಹೋಗಲಿ ಬಿಡಿ ಬದುಕಿಕೊಳ್ಳಲಿ. ನಾವು ಬೇರೊಬ್ಬ ಗೋಪಾಲಕನನ್ನು ನೇಮಿಸಿದರಾಯಿತು” ಎಂದನು.
ತಾನೆ ಪ್ರತ್ಯಕ್ಷ ಕಂಡು ಪರೀಕ್ಷಿಸಲಾರದೇನೆ ಇತರರ ಮಾತಿಗಷ್ಟೇ ಮನ್ನಣೆ ಕೊಡುವ ಚೋಳರಾಜನು.
“ಹೌದ್ಹೌದು, ಈತನಿಗೆ ಹುಚ್ಚೇ ಹಿಡಿದಿರಬೇಕು. ಈ ಹಸುವು ತಾನೇ ಹುತ್ತಕ್ಕೆ ಹಾಲೆರೆಯುವುದೆಂದರೇನು?!” ವಿಕಟನಗೆ ನಕ್ಕನು.”ಇವನನ್ನು ಬಿಟ್ಟುಬಿಡಿ. ಪಾಪ ಬದುಕಿಕೊಳ್ಳಲಿ” ಎಂದೇ ಆಜ್ಞಾಪಿಸಿದನು.
“ಇಲ್ಲ, ನನಗೆ ಹುಚ್ಚು ಹಿಡಿದಿಲ್ಲ ನನ್ನ ಮಾತು ನಂಬಿ. ಆ ಹಸೂ ಹುತ್ತಕ್ಕೇ ಹಾಲೆರೆಯುತ್ತದೆ”
ಹೀಗೆ ಗೋಪಾಲಕನು ಒಂದೇ ಸಮನೆ ಕೂಗಿ ಹೇಳುತ್ತಿದ್ದರೂ ಚೋಳರಾಜನಿಗೆ ಅರಿವು ಮೊಡಲಿಲ್ಲ. ತನ್ನ ಆಪ್ತ ಅನುಚರನ ಮಾತೇ ರಾಜನಿಗೆ ವೇದವಾಕ್ಯವೆನಿಸಿತ್ತು.
ಹಾವಿಗೇ ಹಾಲೆರೆಯುವ ಹಾಳು ಹಸುವಿನಿಂದ ತನಗೆ ಅರಮನೆಯ ಕೆಲಸವೂ ಹೋಯಿತೆಂದು ಆ ಗೋಪಾಲಕನು ನಿಜಕ್ಕೂ ಹುಚ್ಚನಂತೇ ಅದನು. ರಾಜನು ಮರುದಿವಸದಿಂದಲೆ ಹೊಸ ಗೋಪಾಲಕನನ್ನು ನೇಮಿಸಿದ್ದರೂ ಆ ಹಳಬನಿಗೇ ಚೆನ್ನಾಗಿ ಗೊತ್ತಿತ್ತು; ಹಸುವು ಅದೆಲ್ಲಿಗೆ ಹೋಗಿ ಹಾಲು ಕರೆಯುತ್ತದೆಂದು ಅವನು ಒಂದು ಕೊಡಲಿಯನ್ನು ತೆಗೆದುಕೊಂಡು ಅದನ್ನು ಹಿಂಬಾಲಿಸಿದನು. ಆ ಬ್ರಹ್ಮರೂಪೀ ಕಾಮಧೇನುವು ಎಂದಿನಂತೆ ಹೋಗಿ ಶ್ರೀ ಸ್ವಾಮಿಯು ಇರುವ ಹುತ್ತಕ್ಕೆ ಸರಿಯಾಗಿ ಕೆಚ್ಚಲನ್ನಿರಿಸಿಕೊಂಡು ಹಾಲು ಕರೆಯಲಾರಂಭಿಸಿತು. ಇದನ್ನು ಮರೆಯಲ್ಲಿ ನಂತು ನೋಡುತ್ತಿದ್ದ ಗೋಪಾಲಕನು ಕ್ರೋಧಾಗ್ನಿಯಿಂದ ಜ್ವಲಿಸಿದನು. ತನ್ನ ಕೈಯಲ್ಲಿದ್ದ ಕೊಡಲಿಯನ್ನೆತ್ತಿ ಕಾಮಧೇನುವನ್ನು ಕೊಚ್ಚಿಹಾಕಲು ಭರದಿಂದ ಬೀಸಿದನು. ಅಷ್ಟರಲ್ಲೇ ಹುತ್ತದೊಳಗಿದ್ದ ಶ್ರೀ ಸ್ವಾಮಿಯ ಈ ಅನ್ಯಾಯವನ್ನು ಪ್ರತಿಭಟಿಸಲೆಂದೇ ತಟ್ಟನೆದ್ದು ಅಡ್ಡ ಬಂದು ನಿಂತನು. ಕೂಡಲೆ ಸ್ವಾಮಿಯ ಹಣೆಗೆ ಗೋಪಾಲಕನು ಬೀಸಿದ ಕೊಡಲಿ ಪೆಟ್ಟು ಬಲವಾಗಿ ಬಿದ್ದಿತು. ರಕ್ತವು ಜಿಲ್ಲನೆ ಗಗನಕ್ಕೆ ಚಿಮ್ಮಿ ದಾರಾಕಾರವಾಗಿ ಧರೆಗಿಳಿದು ಹರಿದಿತ್ತು. ಗೋಹತ್ಯೆಯಾಗುವುದು ತಪ್ಪಿತ್ತು. ಆದರೆ, ಮಹಾವಿಷ್ಣುವಿಗೆ ಪೆಟ್ಟು ಬಿದ್ದಿತ್ತು.

ಆ ದೇವನು ಸ್ವತಃ ನೋವು ಹಿಂಸೆಯನ್ನನುಭವಿಸಿದ ನಂತರವೆ ಕಲಿಯುಗದ ಜನತೆಗೆ ಆಪನ್ನಿವಾರಣನಾಗಿ ಕಾಣಿಸಿಕೊಂಡನು. ಪರಹಿತ-ಪರೋಪಕಾರ ಮಾಡುತ್ತಿದ್ದ ಗೋವನ್ನು ಸಂರಕ್ಷಿಸಿ ಗೋವಿಂದನಾದನು. ಆಗ ಸ್ವಾಮಿಯ ಉಗ್ರರೂಪವನ್ನು ನೋಡಿದ ಗೋಪಾಲಕನು ತಕ್ಷಣ ಮೊರ್ಛಿತನಾಗಿ ಬಿದ್ದುಬಿಟ್ಟನು. ಬ್ರಹ್ಮರೂಪೀ ಹಸುವು ಸ್ವಾಮಿಗೆ ಪೆಟ್ಟು ಬಿದ್ದುದನ್ನು ಸಹಿಸದೇನೆ ಕಣ್ಣೀರು ಹಾಕುತ್ತಿತ್ತು. ಅಲ್ಲಿ ನಿಲ್ಲದೇ ಚೋಳರಾಜನ ರಾಜಧಾನಿಯತ್ತ ಓಡಿತ್ತು. ಯಾರಿಗೂ ಸೊಪ್ಪು ಹಾಕದೇನೆ ಇದಿರಾದವರನ್ನು ಕೊಂಬಿನಿಂದ ತಿವಿಯುತ್ತ ಅರಮನೆಯ ಒಳಾಂಗಣವನ್ನು ಪ್ರವೇಶಿಸಿತ್ತು. ಅದರ ಮೈಮೇಲೆಲ್ಲ ಸಿಡಿದ ರಕ್ತದ ಕಲೆಗಳಿದ್ದವು. ಗೋವಿನ ವಿಚಿತ್ರ ವರ್ತನೆ ಕೇಳಿದ ಚೋಳರಾಜನು ಇದೀಗ ಆ ಕಾಮಧೇನುವನ್ನು ನೋಡಲೆಂದು ಅವಸರಿಸುತ್ತ ಬಂದನು. ರಾಜನನ್ನು ಕಂಡಕೂಡಲೆ ಮತ್ತೂ ಉದ್ವೇಗಗೊಂಡ ಹಸುವು ನಿಂತಲ್ಲಿ ನಿಲ್ಲದೇ ಬೆಟ್ಟದ ಕಡೆಗೆ ಹಿಂದಿರುಗಿ ಓಡಲಾರಂಭಸಿತು. ರಾಜನೂ ಕುತೂಹಲವನ್ನು ಹತ್ತಿಕ್ಕಲಾಗದೆ ತಾನೂ ಕುದುರೆಯನ್ನೇರಿ ವೇಗದಿಂದ ಅದನ್ನುಹಿಂಬಾಲಿಸಿದನು.

ಬೆಟ್ಟದ ಮೇಲೆ ದೈವಿಕ ನೆಲೆಯಾದ ವಲ್ಮೀಕದ ಬಳಿಗೆ ಬಂದ ಹಸುವು ಜೋಲು ಮೋರೆ ಹಾಕಿ ನಿಂತಾಗ ಚೋಳರಾಜನಿಗೆ ಆಶ್ಚರ್ಯವೂ ಆತಂಕವೂ ಭಯವೂ ಒಟ್ಟಿಗೇ ಕಾಡಿದ್ದವು. ಅಂದು ತಾನು ಹೊರಗಟ್ಟಿದ್ದ ಗೋಪಾಲಕನು ಇಲ್ಲಿ ಮೂರ್ಛೆ ಬಿದ್ದಿದ್ದಾನೆ! ಹುತ್ತದ ಮೇಲೆಲ್ಲಾ ರಕ್ತವು ಹರಿದು ಹೆಪ್ಪುಗಟ್ಟಿ ಹೋಗಿದೆ! ಏನಿದು ವಿಚಿತ್ರ? ಇಲ್ಲೇನು ಅನಾಹುತ ಅಪಚಾರ ನಡೆದು ಹೋಗಿದೆ? ಎಂದು ಚೋಳರಾಜನು ಚಿಂತಿಸುತ್ತಿರಲು, ಪುನಃ ಶ್ರೀ ಹರಿಯು ಪ್ರತ್ಯಕ್ಷನಾಗಿದ್ದಾನೆ.
“ಚೋಳರಾಜಾ, ನೀನು ಸ್ವಂತ ವಿವೇಚನೆಯಿಲ್ಲದೆ ಇಂತಹ ದುಷ್ಕೃತ್ಯ ದುರ್ಮಾರ್ಗಗಳಿಗೆ ಕಾರಣನಾಗಿರುವೆ. ತೀರಾ ಸಾಮಾನ್ಯರೂ ಹಾದಿ ತಪ್ಪಿ ಹಾಳಾಗುವುದು ನಿನ್ನಂಥ ನೀತಿಗೆಟ್ಟ ರಾಜನಿಂದಲೇ. ನಿನ್ನೀ ಪಾಪಕ್ಕೆ ಶಿಕ್ಷೆ ಅನುಭವಿಸಲೇಬೇಕು...” ಎಂದು ಸ್ವಾಮಿಯು ಹೇಳಿದನು.
“ಓ ಮಹಾನುಭಾವ, ತಾವ್ಯಾರೊ ನಾನರಿಯೆನು. ಏನೋ ನನ್ನಿಂದ ತಪ್ಪು ನಡೆದು ಹೋಗಿದೆ. ನಿಮ್ಮನ್ನು ನೋಡಿದರೆ, ಸಾಕ್ಷಾತ್ ದೇವರನ್ನೇ ನೋಡಿದಂತಾಗುತ್ತಿದೆ. ನನ್ನನ್ನು ಕ್ಷಮಿಸಿಬಿಡಿ ಸ್ವಾಮಿ..”
ಚೋಳರಾಜನು ಕೈಜೋಡಿಸಿ ಬೇಡಿಕೊಂಡನು.
“ರಾಜಾ, ನೀನು ದೇವರ ನಂಬಿಕೆಯಂತಿರಲಿ ಧರ್ಮದ ಅಂಜಿಕೆಯೂ ಇಲ್ಲದೇನೆ ಮಾಡಿದ ಅಪರಾಧಕ್ಕೆ ಶಿಕ್ಷೆಯಾಗಲೇ ಬೇಕಾದ್ದು ವಿಧಿತ. ರಾಜನೇ, ವಿವೇಕರಹಿತನಾಗಿ ಈ ಪೈಶಾಚಿಕ ಕೃತ್ಯಕ್ಕೆ ಕಾರಣನಾದ ನೀನು ಪಿಶಾಚಿಯಾಗಿ ಹೋಗು” ಎಂದು ಚೋಳರಾಜನಿಗೆ ಶ್ರೀ ಹರಿಯು ಶಾಪ ಕೊಟ್ಟನು.
ಚೋಳರಾಜನು ಜಲಜಲ ಬೆವತು ಹೋದನು. ಭ್ರಮಾಧೀನನಂತೆ “ಓ ಪುರುಷೋತ್ತಮಾ, ಧಯಾನಿಧೇ ನೀನೇ ದೇವರೆಂದು ತಿಳಿಯದಾದೆ. ಈ ಘೋರ ಶಾಪದಿಂದ ನನ್ನನ್ನು ಪಾರುಗಾಣಿಸಲಾರೆಯಾ...” ಎಂದು ಶ್ರೀ ಸ್ವಾಮಿಯ ಪಾದಗಳನ್ನು ಹಿಡಿದು ಚೋಳರಾಜನು ಪ್ರಾರ್ಥಿಸಿದನು.

“ಚೋಳರಾಜ, ಈ ಶಾಪವನ್ನು ನೀನು ಅನುಭವಿಸಿಯೆ ತೀರಬೇಕು. ಮುಂದಾದರೂ ಲೋಕದಲ್ಲಿ, ನಿನ್ನೀ ಕಣ್ಣೀರ ಕಥಯಿಂದ ಧರಣಿಯನ್ನಾಳುವ ದೊರೆಗಳು ಎಚ್ಚಿತ್ತು ನಡೆಯುವಂತಾಗಲಿ. ಇತರರ ಮಾತುಗಳಿಗೇ ಕಿವಿಗೊಟ್ಟು ಕಿಂಕರ್ತವ್ಯ ಮೊಢರಾಗದಿರಲಿ. ಹೇ! ರಾಜಾ, ನೀನು ಹೀಗೇ ವರುಷಗಳೆ ಶಾಪಗ್ರಸ್ಥನಾಗಿದ್ದು, ಅನುದಿನವೂ ಪಶ್ಚಾತ್ತಾಪದ ಅಗ್ನಿ ಕುಂಡದಲ್ಲಿ ಬೆಂದು ಬಂಗಾರವಾಗಬೇಕು. ಮತ್ತೆ ಪುನೀತ ಭಾವದಿಂದ ಹೊಸ ಬದುಕು ಬೆಳಕು ಕಾಣುವಂತಾಗಬೇಕು. ಆಗಲೆ ನಿನಗೆ ಶಾಪ ವಿಮೋಚನೆ. ಆನಂತರವೆ, ಸಂಚಿತ ಜನ್ಮಗಳ ಪೂರ್ವ ಸಂಸ್ಕಾರದಿಂದಲೆ ನೀನು ಮರುಹುಟ್ಟು ಪಡೆಯುತ್ತೀಯೆ. ಆಕಾಶ ರಾಜನೆಂಬ ಹೆಸರಿನಲ್ಲಿ ಚೋಳರಾಜ್ಯವನ್ನೆ ಪುನಃ ಆಳುತ್ತ ಧರ್ಮ ಪರಾಯಣನಾಗುವೆ. ದೈವ ಕೃಪೆಗೆ ಪಾತ್ರನಾಗುವೆ.ನಿನ್ನ ಪುತ್ರಿ ಪದ್ಮಾವತಿ ಎಂಬ ಸುವರ್ಣ ಪುತ್ಥಳಿಯಂಥ ಕನ್ಯೆಯನ್ನು ಭಗವಂತನ ಅಪರವತಾರಿಗೇ ಧಾರೆಯೆರೆದು ಧನ್ಯತೆ ಪಡೆವೆ. ಇನ್ನೇನು ಹೇಳಲಿ ರಾಜ, ನಿನ್ನಂಥ ಪರಿತಾಪದಿಂದಲೆ ಪರಿಶುದ್ಧಿ ಹೊಂದಿ ಮಹಾಪುಣ್ಯ ಶಾಲಿಗಳಾಗುವವರೇ ವಿರಳ. ಕಡೆಗೆ ಅನಾಸಕ್ತ ಕರ್ಮ ಹಾಗೂ ಪಾರಮಾರ್ಥಿಕ ಚಿಂತನೆಯೆ ನಿನಗೆ ಪರಮ ಪದವನ್ನೀಯುವುದು”

ಹೀಗೆ ಶ್ರೀವಿಷ್ಣುವು ಚೋಳರಾಜನಿಗೆ ಕಠೋರವಾಗಿ ವರ್ತಿಸಿದೂ ಆತನ ಜೀವಾತ್ಮಕ್ಕೆ ದಿವ್ಯಪಥವನ್ನೇ ತೋರಿದನು. ಹೌದು, ಜಗತ್ತಿನಲ್ಲಿ ಶಾಪವನ್ನೂ ವರದಾನವನ್ನಾಗಿಸಿಕೊಂಡ ಮಹಾನ್ ಸಾಧಕರು ಇರುತ್ತಾರಲ್ಲ!
ಅದೇ ಕ್ಷಣಗಳಲ್ಲಿ ಮೊರ್ಛೆತಿಳಿದೆದ್ದ ಗೋಪಾಲಕನು, ಸ್ವಾಮಿಗೆ ಸಾಷ್ಟಾಂಗ ನಮಸ್ಕಾರಮಾಡಿ, ನನ್ನನ್ನೂ ಕನಿಕರಿಸಿ ಕ್ಷಮಿಸಿಬೇಕೆಂದು ಬೇಡಿಕೊಂಡನು.” ಗೋಪಾಲಕ! ಮೊದಲೆ ನಿನ್ನ ಮಾತಿನಲ್ಲಿ ರಾಜನಿಗೆ ನಂಬಿಕೆ ಬಂದಿದ್ದರೆ ಹೀಗಾಗುತ್ತಿತ್ತೆ…? ವೃಥಾ ನಿನ್ನ ಹೊಟ್ಟೆಗೆ ಸಂಚಕಾರ ಬಂದು ಕೋಪವು ಕೆರಳುತ್ತಿರಲಲ್ಲಿ. ನಿನಗೇ ನಿನ್ನ ಮೊದಲ ದರ್ಶನ ಪ್ರಾಪ್ತವಾಗಿದೆಯಲ್ಲ. ಅದರ ಫಲವು ಈ ಬೆಟ್ಟದ ಮೇಲೆ ನಿನ್ನ ವಂಶಜರಿಗೂ ಲಭಿಸಲಿ” ಎಂದು ಶ್ರೀ ಹರಿಯು ದಯೆ ತೋರಿದನು.

Friday, July 13, 2007

ಸಂಚಿಕೆ-18 ಸಪ್ತಗಿರಿ ಧಾಮದ ಪುರಾಣೇತಿಹಾಸ-3

ಮನುಷ್ಯನಲ್ಲಿ ಅತಿಯಾದ ಸುಖಾಪೇಕ್ಷೆಯೆ, ಹಾಗೆ ಬಯಸಿದುದನ್ನು ಪಡೆಯಲೇಬೇಕೆಂಬ ಛಲ ಪ್ರವೃತ್ತಿಯೆ ಅವನ ಬದುಕಿಗೆ ಮುಳುವಾಗಿ ಬಿಡುವುದು. ಇಡೀ ವ್ಯಕ್ತಿತ್ವದ ಪತನವನ್ನುಂಟು ಮಾಡುವುದು. ಒಂದು ವಸ್ತುವು ತನ್ನದಾಗಲೇಬೇಕೆಂಬ ಅತ್ಯಾಸೆಯೇ ಆ ವಸ್ತುವಿನ ಮೇಲೇ ತನ್ನ ಅಧಿಕಾರ ಸ್ಥಾಪಿಸಬೇಕೆಂಬ ಸ್ವಪ್ರತಿಷ್ಠೆಯೆ ಅವನಿಗೆ ಮಾರಕವಾಗಿಬಿಡುವುದು. ಅದೇ ಸುಖವೆಂಬ ಭ್ರಮೆಯೊ, ವಿಚಿತ್ರವು ವಿಕೃತಾನಂದವೂ ಆಗಿಬಿಡುವುದು. ಇದು ತಿಳಿದೂ ತಿಳಿಯದಂತೆ ಅವನಲ್ಲಿ ನಡೆಯುತ್ತಿರುವುದೂ ಉಂಟಲ್ಲ! ಮನುಷ್ಯನ ಇಚ್ಛೆಗಳನ್ನೆಲ್ಲಾ ಪರಬ್ರಹ್ಮನಿಂದಲೂ ಪೂರೈಸಲಾಗದಲ್ಲ! ಅವನಲ್ಲಿ ಗುಣಗಳು ಹೇಗೆ ಮೊರೋ ಹಾಗೇ ಅವನನ್ನು ಕಾಡುವ ಭೋಗವಸ್ತುಗಳೂ ಮೊರು. ಅವೇ ಹೆಣ್ಣು, ಹೊನ್ನು, ಮಣ್ಣು. ಇವುಗಳಲ್ಲೇ ಮತ್ತನಾಗಿ ಯಾವುದೇ ಒಂದರ ಹಿಂದೆ ಬಿದ್ದರೂ ಸಾಕು. ಅವನ ಅವನತಿ ಅವನೆ ತಂದುಕೊಂಡಂತೆಯೇ. ಈ ತಿರುಪತಿ ಬೆಟ್ಟಕ್ಕೆ “ವೆಂಕಟಾಚಲ” ವೆಂಬ ಇನ್ನೊಂದು ಹೆಸರಿನ ಹಿಂದೆ ಇದೇ ಕಥೆ ಇದೆ.

ಪೂರ್ವಕಾಲದಲ್ಲಿ ಪುರಂದರನೆಂಬ ಒಬ್ಬ ಬ್ರಾಹ್ಮಣನಿದ್ದನು. ಆತನಿಗೆ ಒಬ್ಬನೆ ಮಗನಿದ್ದನು. ಆ ಮಗನ ಹೆಸರು ಮಾಧವ. ಮಾಧವನು ಬಾಲ್ಯದಿಂದಲೆ ತಂದೆಯ ಮಾರ್ಗ ಅನುಸರಿಸಿ ವೇದಾಂಗ ತತ್ವಗಳನ್ನೂ, ಅಚಾರ, ಅನುಷ್ಠಾನಗಳನ್ನೂ ಕಲಿತನು. ಪ್ರಾಪ್ತವಯಸ್ಕನೂ ಆದನು. ಆಗ ಸುಂದರಿಯೂ ಸತ್ಕುಲ ಪ್ರಸೂತೆಯೂ ಯೋಗ್ಯಳೂ ಆದ ಸುಶೀಲೆ ಎಂಬ ಕನ್ಯೆಯೊಡನೆ ಆತನ ಮದುವೆಯಾಯಿತು. ಸುಶೀಲೆ ಸುಂದರಿ ಮಾತ್ರವಲ್ಲ ಗುಣಸಂಪನ್ನೆಯೂ ಆಗಿದ್ದಳು. ತನ್ನಪತಿಯ ಇಚ್ಛೆಯರಿತು ನಡೆಯುವವಳು. ತುಂಬ ಅನುಕೂಲೆಯೆ ಆದರೂ ಮಾಧವನಿಗೆ ದ್ಯೆಹಿಕವಾಗಿ ಅತೃಪ್ತಿಯೆ. ಅತಿ ಕಾಮುಕತೆಯೆ. ಹೆಂಡತಿಯೊಡನೆ ಎಷ್ಟು ಸುಖಿಸಿದರೂ ಸಾಲದವನಿಗೆ. ಹೀಗೆ ಹಗಲಿರುಳೂ ಕಾಮಪೀಡಿತನಾದವನು ಕುಲಾಚಾರ ಸಂಪ್ರದಾಯಗಳನ್ನೆ ಮರೆತು ಬಿಟ್ಟನು. ಪ್ರಾತಃ ಸಂಧ್ಯಾಹ್ನೀಕಗಳನ್ನು ಕಾಟಾಚಾರಕ್ಕೆ ಮಾಡುತ್ತಿದ್ದನು. ಸಹಧರ್ಮಿಣಿ ಸುಶೀಲೆಯು ನಿತ್ಯ ಒಲವಿನಿಂದಲೆ ತಾಳ್ಮೆ ಸಂಯಮಗಳಿಂದಲೆ ಅವನನ್ನು ತಿದ್ದಲೆತ್ನಿಸಿದ್ದಳು. ಸರಿದಾರಿಗೆ ತರಲು ವಿಫಲಳೇ ಆದಳು.

ಒಂದು ದಿನ ಮಾಧವನು ಹಗಲಿನಲ್ಲಿಯೆ, ಭೋಜನಾನಂತರ ಹೊತ್ತುಗೊತ್ತೆನ್ನದೆ(ಈ ಸಮಯದಲ್ಲಿ ಪಶುಪಕ್ಷಿಗಳೂ ಕೂಡುವುದಿಲ್ಲ). ಅತಿ ಕಾಮೇಚ್ಛೆಯಿಂದ ಸುಶೀಲೆಯನ್ನು ತೀರಾ ಹಿಂಸಿಸತೊಡಗಿದನು. ಆಗ ಆಕೆಯಿಂದ ದೂರ ತಳ್ಳಿಸಿಕೊಂಡು ತಿರಸ್ಕೃತನಾದವನು ತನ್ನೋಳಗೇ ಹಪಹಪಿಸುತ್ತ ಕುಶದರ್ಬೆಗಳನ್ನು ತರುವೆನೆಂದು ಹೇಳಿ ಕಾಡಿಗೆ ಹೋದನು. ಅಲ್ಲೆ ಕುಂತಳೆ ಎಂಬ ಒಬ್ಬ ಕೃಷ್ಣವರ್ಣದ ಚೆಲುವೆಯು ಹರಿಯುವ ತಟಾಕವೊಂರಲ್ಲಿ ಸ್ನಾನ ಮಾಡುತ್ತಿರುವುದನ್ನು ನೋಡಿದನು. ಮೊದಲೆ ಕಾಮಾತುರನಾದವನು ಕುಂತಳೆಯ ತುಂಬು ನಗ್ನ ದೇಹವನ್ನೇ ನಿಟ್ಟಿಸುತ್ತ ಇನ್ನಷ್ಟು ಉದ್ರೇಕಗೊಂಡನು. ಅವಳನ್ನು ಸಮೀಪಿಸಿದನು. ಮಾತನಾಡುತ್ತಿದ್ದಂತೆ ಬಲಾತ್ಕರಿಸಲು ಮುಂದಾದನು. ಆಕೆ ಹೊಲತಿಯಾದರು ಸಾಧ್ವಿ ಹೆಣ್ಣು. “ಸ್ವಾಮೇರಾ...ನಿಮ್ಮ ಮನಸಿನಾಗೆ ಇಕಾರ ತುಂಬೈತೆ. ನೀವಿಂಗ್ ಮಾಡ್ಭೌದಾ… ನನ್ನೀ ಮಾಂಸದ ಮುದ್ದೆಯಂತ ಶರೀರದ ಮ್ಯಾಲೆ ನಿಮ್ಮ ಕಣ್ಯಾಕೆ? ನೀವೊ ಬ್ರಾಹ್ಮಣೋತ್ತಮರು. ನಾನೊ ಹೀನ ಸಂಸ್ಕಾರದವಳು. ಸುಮ್ನೆ ಹಿಂದಿರುಗಿ ಹೋಗಿ. ಆಂ, ನಿಮ್ಗೆ ಸುಂದರಳಾದ ಹೆಂಡ್ತಿ ಇದಾಳಂತೇ...ನೀವ್ ಮುನಿಸ್ಕಂಡ್ರೂ ನಿಮಗಾಗಿಯೆ ಕಾದಿರಾಳೆ… ಊಂ ನನ್ನನ್ನಾ ಬಿಟ್ಟುಬಿಡಿ. ನೀವ್ ಪಾಪಕ್ಕೇ ಬೀಳ್ಬ್ಯಾಡಿ...” ಎಂದು ಕುಂತಳೆ ಕೈಮುಗಿದು ಕೇಳಿಕೊಂಡಳು. ಕಾಮಾಂಧನಾದ ಮಧವನು,”ನಿನ್ನೀ ಗುಂಡುಗುಂಡಾದ ಅಂಗಾಂಗಗಳು ನನ್ನನ್ನು ಹುಚ್ಚನನ್ನಾಗಿಸಿವೆ. ನಾನಿನ್ನ ಬಿಡಲಾರೆ ಕುಂತಳೆ...” ಎನ್ನುತ ಬಲಾತ್ಕರಿಸಿದನು. ಆಕೆ ಕಡೆಯ ಕ್ಷಣಗಳವರೆಗೆ “ಬ್ಯಾಡಿ.. ಬ್ಯಾಡಿ.. ನನ್ನನ್ನು ಬಿಟ್ಟುಬಿಡೀ!!! ಎಂದು ಕೇಳಿಕೊಂಡರೂ ಬಿಡದೇನೆ ಬಲವಂತದಿಂದಲೆ ಕೊಡಿದನು. ಹೆಣ್ಣು ಅವನಿಗೆ ಭೋಗವಸ್ತುವೆ ಆಗಿದ್ದಳು. ಹೊಲತಿಯಾದರು ಕುಂತಳೆ ಪಾಪ ಪ್ರಜ್ಞೆಯಿಂದ ಮಂಕಾದಳು. ಮಾಧವನ ಧರ್ಮಪತ್ನಿಗೆ ತನ್ನಿಂದ ಅನ್ಯಾಯವಾಯಿತೆಂದು ಬಸವಳಿದಳು. ಬೆಂಡಾದಳು. ಮಾಧವನೊ ಪೂರ್ವಾಪರ ವಿವೇಚನೆಯನ್ನೇ ಕಳೆದು ಕೊಂಡಿದ್ದನು. ಕುಂತಳೆಯ ನೆರಳನ್ನು ಬಿಟ್ಟು ಕದಲದಾದನು. ತನ್ನ ಮನೆಗೆ ಹೋಗದೆ ಪಥ ಭ್ರಷ್ಟನಾದನು. ಕುಂತಳೆ ಅದೆಷ್ಟು ಹೇಳಿದರು ಕೇಳುವಂತಿರಲಿಲ್ಲ ಅವನು. ಮಾಂಸ ಮದ್ಯ ಸೇವಿಸುತ್ತ ಸದಾ ಮತ್ತಿನಲ್ಲಿರುತ್ತ ಮಾಡಬಾರದ ಕರ್ಮಗಳನ್ನೆಲ್ಲ ಮಾಡಿದನು. ಕುಂತಳೆ ತೀರಾ ಕಂಗೆಟ್ಟಳು. ಕೊರಗಿದಳು.

ಮಾಧವನ ಕಿಂಚಿತ್ ಪೂರ್ವಾರ್ಜಿತ ಪುಣ್ಯವೋ ಅಥವಾ ಕುಂತಳೆಯ ಸಂತೋಷದಿಂದ ಅಕಾಲ ಮರಣವನ್ನು ಸ್ವಾಗತಿಸಿದಳೋ, ಆಕೆಯ ಅಗಲಿಕೆಯ ನಂತರದ ದಿನಗಳಲ್ಲಿ ಹುಚ್ಚನಂತೆ ಅಲೆಯುತ್ತಿದ್ದ ಮಾಧವನಿಗೆ ಜ್ಞಾನೋದಯವಾಗುವ ಕಾಲವೊದಗಿ ಬಂದಿತ್ತು.

ಇತ್ತ ಮಾಧವನ ಧರ್ಮಪತ್ನಿ ಸುಶೀಲೆಯು ತನ್ನನ್ನು ತೊರೆದು ಹೋದ ಪತಿಯು ಮರಳೀ ಮನೆಗೆ ಬರುವನೆಂಬ ನರೀಕ್ಷೆಯಲ್ಲೇ ಇದ್ದಳು. ದೇವರ ಧ್ಯಾನದಲ್ಲಿ ದಿನಗಳೆಯುತ್ತ ಸನ್ಯಾಸಿನಿಯೆ ಆಗಿದ್ದಳು. ಯಾತ್ರಾ ಸ್ಥಳಗಳಿಗೆ ಹೋಗಿ ಬರುತ್ತಾ ನೆಮ್ಮದಿಯನ್ನರಸುತ್ತದ್ದಳು.
ಅತ್ತ ಮಾಧವನಿಗೆ ಅರಿವು ಮೊಡುವ ಕಾಲ ಬಂದಿತ್ತಲ್ಲ! ಒಂದು ದಿನ ಯಾತ್ರಿಕರ ಭೇಟಿಯಾಗಿತ್ತು. ವರಹಾಕ್ಷೇತ್ರಕ್ಕೆಂದೇ ಹೊರಟಿದ್ದ ಆ ಯಾತ್ರಿಕರು ಕಾಲೆಳೆದುಕೊಂಡು ಬರುತ್ತಿದ್ದ ಇವನನ್ನು ಕಂಡು ಕನಿಕರದಿಂದ ಮಾತನಾಡಿಸಿದರು.

ಅವರಲ್ಲೊಬ್ಬ ವಯೋವೃದ್ಧನೂ ಕಷಾಯ ವಸ್ತ್ರಧಾರಿಯೂ ಆದ ಸಾಧುವಿಗೆ ಮಾಧವನು ತನ್ನ ಪಾಪದ ಕಥೆ ಹೇಳಿಕೊಂಡನು. ತನ್ನನ್ನೇ ನಂಬಿದ ಪತ್ನಿಗೆ ವಂಚಿಸಿದೆ. ಇಂದ್ರಿಯ ಸುಖವೇ ಬದುಕಿನ ಸುಖವೆಂದು ಭ್ರಮಿಸಿದೆ. ತನ್ನಾಕೆಗೆ ತುಂಬಾ ಅನ್ಯಾಯ ಮಾಡಿಬಿಟ್ಟೆ ಎಂದು ಕಣ್ಣೀರಿಟ್ಟನು. ಆ ಸಾಧುವು ಮಾಧವನ್ನನ್ನು ಸಂತೈಸುತ್ತ ಗಂಭೀರಸ್ವರವೆತ್ತಿ, “ಮನುಷ್ಯನಾದವನಿಗೆ ಧರ್ಮ, ಅರ್ಥ, ಕಾಮ ಮತ್ತು ಮೊಕ್ಷ ಇವು ಚತುರ್ವಿಧ ಪುರುಷಾರ್ಥಗಳು. ಮನುಷ್ಯನಾದವನು ತನ್ನ ಸತ್ವಗುಣ ಸಾಧನೆಯಿಂದಲೆ ಪುರುಷಾರ್ಥಗಳನ್ನು ಕಾಣಬೇಕು. ಆದರೆ, ಬಹುತೇಕ ಜನರು ಅರ್ಥ ಮತ್ತು ಕಾಮ ಅಂದರೆ, ಹಣ ಮತ್ತು ಹೆಣ್ಣು ಇವೆರಡರ ಅಸೆಯಲ್ಲೇ ಅಥವಾ ಸಿರಿ ಸಂಪತ್ತು ಮತ್ತು ದೈಹಿಕ ಕಾಮನೆ ಇವುಗಳಲ್ಲೆ, ಅವನ್ನು ಅನುಭವಿಸುವುದರಲ್ಲೇ ಬದುಕನ್ನು ಕಳೆದು ಬಿಡುವರು. ಧರ್ಮ ಮತ್ತು ಮೋಕ್ಷವನ್ನೇ ಅಲಕ್ಷಿಸಿಬಿಡುವರು. ಕಡೆಗೆ ಪಶ್ಚಾತ್ತಾಪ ಹೊಂದುವರು. ತಮ್ಮ ರಜೋ ಮತ್ತು ತಮೋಗುಣಗಳ ಸೆಳವಿನಲ್ಲೆ ಹೀಗಾಗಿ ಹೋಗುವರು. ಪ್ರಾಣ ಹೋಗುವ ಸಮಯದಲ್ಲೂ ಪಾಪಭೀತಿ ಬಾಧಿಸಲಾರದ ಕ್ಷುದ್ರ ಜೀವಿಗಳಿಗೇನೂ ಕಡಿಮಡಯಿಲ್ಲ; ಈ ಜಗತ್ತಿನಲ್ಲಿ. ಮಾಧವ. ನೀನು ನಿಜಕ್ಕೂ ಭಾಗ್ಯಶಾಲಿ. ಈಗಲಾದರು ನಿನ್ನ ಕಣ್ಣೂಗಳು ತೆರೆದಿವೆಯಲ್ಲ! ನಮ್ಮೊಂದಿಗೆ ನಡೆ. ಭಗವಂತನನ್ನು ಭಜಿಸುವಂತವನಾಗು. ಮುಕ್ಕೋಟಿ ತೀರ್ಥಗಳಿಂದ ಪುಣ್ಯಪ್ರಭಾವವನ್ನು ಬೀರುತ್ತಿರುವ, ನಮ್ಮ ಆಂತರಿಕ ಪ್ರಜ್ಞೆಯನ್ನು ತೀಕ್ಷಗೊಳಿಸುತ್ತಿರುವ, ಸರ್ವಂತರ್ಯಾಮಿಯ ನೆಲೆಯೆಂದೇ ಸುಪ್ರಸಿದ್ಧವಾಗಿರುವ ಈ ವೇದಾಚಲವನ್ನು ಹುತ್ತುವುದರಿಂದ ನಿನ್ನ ದೇಹ ಶುದ್ಧಿಯಾಗುವುದು. ಮನಸ್ಸು ನಿರ್ಮಲವಾಗುವುದು. ನಿನಗೆ ಹೊಸ ಜನ್ಮವೆ ಬಂದಂತಾಗುವುದು” ಎಂದು ಆತ ಹೇಳಿದರು.

ಜತೆಗೆ ಇದ್ದ ಯಾತ್ರಿಕರೂ ಅದನ್ನೇ ಪುನರುಚ್ಚರಿಸಿದ್ದರು.
ಮಾಧವನು “ಓ ವೆಂಕಟ್ರಮಣಾ...ನಾರಾಯಣಾ...ಕಾಪಾಡು ಸ್ವಾಮಿ...” ಎಂದು ಭಜಿಸುತ್ತ ಯಾತ್ರಕರ ಹಿಂದೆ ನಡೆದಿದ್ದನು. ವೇದಾಚಲವನ್ನು ತಲುಪಿದನು. ಕಪಿಲ ತೀರ್ಥದಲ್ಲಿ ಸ್ನಾನ ಮಾಡಿ ಬೆಟ್ಟವನ್ನು ಹತ್ತ ತೊಡಗಿದನು. ಎತ್ತರ ಎತ್ತರಕ್ಕೇರಿ ಹತ್ತುತ್ತಾ ವೆಂಕಟ್ರಮಣಾ...ಎನ್ನುತ್ತಿದ್ದಂತೆ ಮಾಧವನ ಬಿಸಿಬಿಸಿಯಾಗಿ ಹಿಂದೆ ಮಾಡಿದ ಪಾಪಗಳೆಲ್ಲವೂ ಭಸ್ಮೀ ಭೂತವಾಗಿ ಹೋದವು. ಇದೀಗ ಹೊಸ ಮನುಷ್ಯನೆ ಆದನು. ಅವನು ಮುಂದೆ ಸಾಗುತ್ತಿದ್ದಂತೆ ಮೈಯಲ್ಲ ಎಂದಿಗಿಂತ ಹಗುರಾಗಿತ್ತು. ಅದೇನಾಶ್ಚರ್ಯ! ಎದುರಿಗೇ ಸುಶೀಲೆ ಬರುತ್ತಿದ್ದಾಳೆ! ತನ್ನ
ಧರ್ಮಪತ್ನಿಯಾದಾಕೆ ಸುಶೀಲೆಯೇ. ಇದೆಂಥ ಅಪೂರ್ವ ಸಮ್ಮಿಲನ. ಸ್ವಾಮಿಯ ಸನ್ನಿಧಾನದಲ್ಲಿಯೆ. ದಂಪತಿಗಳ ಹೃದಯಗಳು ತುಂಬಿ ಬಂದವು. ಶ್ರೀಸ್ವಾಮಿಯಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೋ ಅವರು. ಅಲ್ಲೇ ಬೆಟ್ಟದಲ್ಲಿ ಸೇವೆ ಮಾಡಿಕೊಂಡಿದ್ದು ಬಹುಕಾಲ ಬಾಳಿದರು.

ಮಾಧವನಂತೆ ಈ ತಿರುಪತಿ ಬೆಟ್ಟವನ್ನು ಹತ್ತಿ ಸ್ವಾಮಿಯ ಸೇವೆ ಮಾಡಿ ತಮ್ಮ ಪಾಪಗಳಿಂದ ಮುಕ್ತರಾದವರೆಷ್ಟೋ ಲೆಕ್ಕವಿಟ್ಟವರು ಯಾರು? ಅಂತೆಯೆ, ‘ವೆಂ’ ಎಂದರೆ ಪಾಪವನ್ನೂ ‘ಕಟಯತಿ’ ಎಂದರೆ ತೊಡೆಯುವುದೆಂದೂ ಪ್ರತೀತಿ. ಆದ್ದರಿಂದಲೆ ಈ ಬೆಟ್ಟಕ್ಟೆ ಕಲಿಯುಗದಲ್ಲಿ “ವೆಂಕಟಾಚಲ” ವೆಂಬ ಹೆಸರು.

ಆದಿಶೇಷನೂ ವಾಯುವೂ ಹೋರಾಡಿದ ಪರ್ವತ ಇದೇ ಕ್ಷೆತ್ರದಲ್ಲಿರುವುದರಿಂದ “ಆನಂದಗಿರಿ” ಎನಿಸಿತು. ಇದೇ ಗಿರಿ ಭಾಗದಲ್ಲಿ ದೇವನಿಚ್ಛೆಯಂತೆ ಗುರುತ್ಮಂತನು ಪರ್ವತದ ಶಾಖೆಯೊಂದನ್ನು ವೈಕುಂಠದಿಂದ ತಂದಿರಿಸಿದನೆಂದು ಪುರಾಣಗಳು ಹೇಳುವುದರಿಂದ “ಗುರುಡಾದ್ರಿ” ಎಂದಾಯಿತು. ಇದನ್ನೇ “ನಾರಾಯಣಾದ್ರಿ” ಎಂದೂ ಕರೆಯುವರು. ಇಲ್ಲೇ ತಿರಿಮಲೇಶನ ಗುಡಿ ಇರುವುದು.
ಇಲ್ಲಿ ಅನಾದಿಕಾಲದಿಂದಲೂ ವೇದಗಳು ವಿಶ್ವಕ್ಕೆ ಜ್ಞಾನ ಪ್ರಸರಣ ಮಾಡುತ್ತಿರುವುದರಿಂದ “ವೇದಾಚಲ” ವೆಂದೂ ಪ್ರಸಿದ್ದವಾಯಿತು.
ಹೀಗೆ ಈ ಸಪ್ತಗಿರಿ ಧಾಮವು ಯುಗಯುಗಗಳಲ್ಲಿಯೂ ಮಹಿಮಾವಳಿಗಳನ್ನೆ ಹೊಂದಿದ್ದು ತೀರ್ಥ ಯಾತ್ರೆಗೆ ಬರುವ ಅಸಂಖ್ಯ ಜನಸಮುದಾಯವನ್ನು ಅಕರ್ಷಿಸಿದೆ; ಅಕರ್ಷಿಸುತ್ತಲೇ ಇದೆ.

ಸಂಚಿಕೆ-17.ಸಪ್ತಗಿರಿ ಧಾಮದ ಪುರಾಣೇತಿಹಾಸ-2

ಸ್ವಾಮಿ ಪುಷ್ಕರಣಿಯ ಉತ್ತರ ದಿಕ್ಕಿನಲ್ಲಿ ಸ್ವಲ್ಪದೂರ ನಡೆದರೆ ಆಕಾಶಗಂಗೆ ಎಂಬ ತೀರ್ಥವು ಸಿಗುವುದು. ಇಲ್ಲೇ ತ್ರೇತಾಯುಗದಲ್ಲಿ ‘ಅಂಜನೆ’ ಎಂಬ ಅಂಗನೆಯ ಪುತ್ರ ಸಂತಾನಕ್ಕಾಗಿ ದೀರ್ಘ ತಪಸ್ಸನ್ನು ಆಚರಿಸಿದಳು. ಸೃಷ್ಟಿಯಲ್ಲಿ ದೇವಗಣ, ಮನುಷ್ಯಗಣ, ರಾಕ್ಷಸ ಗಣ ಎಂದು ಮೊರು ವಿಧ. ದೇವಗಣ ಹೊಂದುವುದೆಂದರೆ ಹಲವು ಜನ್ಮಗಳ ಸಂಸ್ಕಾರ ಹಾಗೂ ತಪಸ್ಸಿನ ಫಲ. ಪೂರ್ವಜರು ಅತಿ ಕಷ್ಟಪಟ್ಟು ಆರ್ಜಿಸಿದ ಪುಣ್ಯಫಲದಿಂದ ಅವರ ಮುಂದಿನ ಸಂತತಿಯಲ್ಲಿ ಜ್ಞಾನಿಗಳು, ಜಿತೇಂದ್ರಿಯರು ಜನ್ಮವೆತ್ತುವರು. ಸಾಧಕರು, ಸತ್ಪುರುಷರೂ, ಮಹಾತ್ಮರೂ ಆಗುವರು. ಅಂಜನೆ ಕೇಸರಿ ಎಂಬ ವಾನರನ ಪತ್ನಿ. ಮಕ್ಕಳ ಭಾಗ್ಯಕ್ಕಾಗಿ ಈ ದಂಪತಿಗಳು ಬಹಳ ಹಂಬಲಿಸುತ್ತಿದ್ದರು. ಒಮ್ಮೆ ಮತಂಗ ಋಷಿಯ ಆಶ್ರಮಕ್ಕೆ ಹೋದರು. ಆ ಋಷಿಯ ದರ್ಶನ ಪಡೆದು ತಮ್ಮ ದುಃಖ ತೋಡಿಕೊಂಡರು.

ಆಗ ಪ್ರತಿ ದಿನವೂ ಆಕಾಶಗಂಗೆಯಲ್ಲಿ ಸ್ನಾನ. ಅಶ್ವತ್ಥ ವೃತ್ತ ಪ್ರದಕ್ಷಿಣೆ, ಪೂಜೆ-ಪುನಸ್ಕಾರ. ಕಟ್ಟುನಿಟ್ಟಿನ ವ್ರತನೇಮ ನಿಷ್ಠೆ. ಶ್ರೀಹರಿಯನ್ನೇ ಕುರಿತು ನಿರಂತರ ಧ್ಯಾನ. ಹೀಗೇ ವರುಷಗಟ್ಟಲೆ ಆಚರಿಸಬೇಕಾಗುವುದು.ತದನಂತರ ನಿಮಗೆ ಪುಣ್ಯೋದಯ. ಸಾತ್ವಿಕ ಸಂಪನ್ನನೂ, ದೇವಾಂಶ ಸಂಭೂತನೂ, ಅಜೇಯನೂ ಆದ ಸುಪುತ್ರನ ಜನನ ಎಂದು ಹೇಳಿದ ಮತಂಗ ಮಹರ್ಷಿಗಳು ಕೇಸರಿ ದಂಪತಿಗಳಿಗೆ ಆಶೀರ್ವಚನ ನೀಡಿದರು. ಮಹರ್ಷಿಗಳ ಆದೇಶವನ್ನು ಶಿರಸಾವಹಿಸಿದ ಕೇಸರ ದಂಪತಿಗಳು ಇದೇ ಬೆಟ್ಟಕ್ಕೆ ಬಂದರು. ಚಾಚೂ ತಪ್ಪದಂತೆ ಪ್ರತಿದಿನ ಆಕಾಶ ಗಂಗೆಯಲ್ಲಿ ಸ್ನಾನ. ಅಶ್ವತ್ಥ ಪ್ರದಕ್ಷಿಣೆ ಆರಂಭಿಸಿದರು. ದೃಢ ಭಕ್ಕಿಯಿಂದ ಧ್ಯಾನ ಮಗ್ನರಾದರು. ಅಂಜನೆಯಂತು ಮಹಾತಪಸ್ವಿನಿಯೆ ಆದಗಿದ್ದಳು. ಹೀಗೆ ಹಲವಾರು ವರುಷಗಳೇ ಸಂದವು. ಒಂದು ದಿನ ವಾಯು ದೇವನು ಕೃಪೆ ತೋರಿ ಅಂಜನೆಗೆ ತನ್ ಫಲ ಪ್ರಸಾದ ನೀಡಿದನು. ಅದನ್ನೂ ಅಂಜನೆ ದೈವೇಚ್ಛೆಯೆಂದೇ ಭಕ್ತಿಯಿಂದ ಸೇವಿಸಿ ಬಿಟ್ಟಳು. ಆನಂತರ, ಅಂಜನೆಯು ಗರ್ಭವತಿಯಾದಳು. ಪುತ್ರ ಸಂತಾನ ಪ್ರಾಪ್ತಿಯಾಯಿತು. ಆ ಸುಪುತ್ರನೇ ಆಂಜನೇಯನು.
ಆ ತಾಯಿ ಪಡೆದ ಪುಣ್ಯದ ಪ್ರಭಾವವು ಅದೆಷ್ಟಿತ್ತೆಂದರೆ,ಆಂಜನೇಯನು ಹುಟ್ಟುತ್ತಿದ್ದಂತೇ ಗಗನಕ್ಕೆ ಹಾರಿ ಉರಿವ ಸೂರ್ಯನನ್ನು ಚಂಡಿನಂತೆ ಹಿಡಿಯುವಷ್ಟು! ವೀರ್ಯವಂತನೂ ಸತ್ವಶಾಲಿಯು, ತೇಜಃಪುಂಜನೂ ಆದ ಆಂಜನೇಯನು ಅದೇ ತ್ರೇತಾಯುಗದಲ್ಲಿ ಶ್ರೀಹರಿಯ ಇನ್ನೊಂದು ಅವತಾರವೆ ಆದ ಶ್ರೀರಾಮಚಂದ್ರನ ಭಂಟನೂ ಪರಮಭಕ್ತನೂ ಆದನು. ಇಂದಿಗೂ ಆಂಜನೇಯನು ತನ್ನ ಭಕ್ತರ ಭಕ್ತನು. ಶ್ರೀರಾಮನ ಭಕ್ತರಿಗೆಲ್ಲ ಅಭಯದಾಯಕನೂ ಆಗಿರುವನು. ಇಂಥ ಮಹಾನ್ ದೇವ ಪುತ್ತನಿಗೆ ಅಂಜನೆಯು ತನ್ನ ಸತ್ವಗುಣದಿಂದಲೆ ಮಹಾನ್ ಸಂತಳಾಗಿ ಈ ಬೆಟ್ಟದಲ್ಲಿಯೆ ಜನ್ಮ ನೀಡಿದುದರಿಂದ ಇದಕ್ಕೆ “ಅಂಜನಾದ್ರಿ” ಎಂಬ ಹೆಸರು ಬಂದಿತು. ಹೀಗೆ ಸತ್ವಗುಣಾಧಿಕ್ಯ ಸಾಧನೆಯಿಂದ ಮಹಾನ್ ಸುಪುತ್ರನನ್ನು ಪಡೆದ ಅಂಜನೆ ಧ್ಯನಳೇ ಸರಿ.

ಆದಿಶೇಷನಿಗೂ ಒಂದು ಸಂದರ್ಭದಲ್ಲಿ ಬಹಳ ಅಹಂಭಾವವಿತ್ತು. ತಾನು ಭಗವಂತನಿಗೆ ಅತ್ಯಂತ ಆಪ್ತನೆಂದೂ, ಅಂತಃಪುರ ಪರಿಚಾರಕನೆಂದೂ, ತಾನೇ ಆತನಿಗೆ ಶಯನ ಸುಖ ನೀಡುವೆನೆಂದೂ, ತನ್ನ ಮೇಲೇ ಆ ದೇವನ ಕ್ರಪಾದ್ರಷ್ಟಿಯಾವಾಗಲೂ ಇರುವುದೆಂದೂ ತನ್ನನ್ನು ಯಾರೂ ಕಿಂಚಿತ್ ಕೊಂಕಿಸರೆಂದೂ ಕದಲಿಸಲಾರರೆಂದೂ ತಾನೇ ಸತ್ವಶಾಲಿಯೆಂದೂ ಸಂಪುರ್ಣ ವಿಶ್ವಾಸ ಹೊಂದಿದ್ದನು. ಆಗೊಮ್ಮೆ ವಾಯುವು ವೈಕುಂಠವನ್ನು ಸಂದರ್ಶಿಸಲೆಂದು ಬಂದನು.

ಆದಿಶೇಷನು ಅವನನ್ನು ತಡೆದು ಶ್ರೀಹರಿಯು ಶ್ರೀಲಕ್ಷ್ಮಿಯೊಂದಿಗೆ ಏಕಾಂತದಲ್ಲಿರುವನೆಂದೂ ಹೇಳಿದನು. ಒಳಗೆ ಯಾರಿಗೂ ಪ್ರವೇಶವಿಲ್ಲವೆಂದನು. ಇಬ್ಬರಲ್ಲೂ ಭಾರೀವಾದ ವಿವಾದಗಳೇರ್ಪಟ್ಟವು. ಇಬ್ಬರಲ್ಲಿ ಯಾರು ಬಲಶಾಲಿಗಳು? ಯಾರು ಭಗವಂತನಿಗೆ ಆಪ್ತರು? ತುಂಬಾ ಬೇಕಾದವರು. ಎಂಬುದು ದೊಡ್ಡ ಚರ್ಚೆಯೆ ಆಗಿ ಹೋಯಿತು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಶ್ರೀಹರಿಯು ನಗುತ್ತ,”ಹಾಗಾದರೆ ಸ್ಪರ್ಧೆ ಏರ್ಪಡಿಸೋಣ. ಸತ್ವಪರೀಕ್ಷೆ ನಡೆದು ಹೋಗಲಿ” ಎಂದು ಹೇಳಿದನು. ಮೇರು ಪರ್ವತದ ಆನಂದಗಿರಿಯನ್ನು ಆದಿಶೇಷನು ಸುತ್ತಿ ಹಿಡಿದು ಪೂತ್ಕರಿಸುತ್ತಾ ನಿಲ್ಲಬೇಕೆಂದೂ, ವಾಯುವು ಆನಂದಗಿರಿಯನ್ನು ಸುತ್ತಿ ಅದನ್ನು ಆದಿಶೇಷನ ಬಂಧನದಿಂದ ಬಿಡಿಸಬೇಕೆಂದೂ, ಈ ಸ್ಪರ್ಧೆಯಲ್ಲಿ ಜಯವು ಯಾರಿಗೆ? ಯಾವ ಕಡೆಗೆ? ಅಥವಾ ಯಾವುದಕ್ಕಾಗಿ ಎಂಬುದನ್ನು ನೋಡಿಯೆ ತೀರ್ಮಾನಿಸೋಣವೆಂದೂ ಭಗವಂತನು ಹೇಳಿದನು.

ಸ್ಪರ್ಧೆ ಆರಂಭವಾಗಿತ್ತು.
ವಾಯುವಿನ ಸುಂಟರಗಾಳಿ, ಪ್ರಚಂಡ ಬಿರುಗಾಳಿ, ಜತೆಗೆ ಬೀಸಿಬಂದ ಮಳೆಯ ಮಾರುತಗಳಿಂದ

ಮೊರುಲೋಕಗಳೂ ಅಲ್ಲೋಲಕಲ್ಲೋಲವಾದವು. ಪಶುಪಕ್ಷಿ ಪ್ರಾಣಿಗಳು ಹಾಹಾಕಾರ ಮಾಡಿದವು. ಆದಿಶೇಷನು ಆನಂದಗಿರಿಯನ್ನು ಸುತ್ತಿಕೊಂಡು ಘೋರ ವಿಷವನ್ನೇ ಫೂತ್ಕರಿಸುತ್ತಾ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿದ್ದನು. ವಾಯುವು ಬೀಸಿಬೀಸಿ ಭರದಿಂದ ಆನಂದಗಿರಿಯನ್ನೊಗೆಯಲು ಬಿರುಸಾಗುತ್ತಲೇ ಇದ್ದನು. ಆ ಗಿರಿ ಶೃಂಗವು ಸ್ವಲ್ಪವೂ ಕದಲಲಿಲ್ಲ. ಇಬ್ಬರೂ ಸೋಲುವ ಹಾಗೆ ಕಾಣಲಿಲ್ಲ. ಹೆಚ್ಚು ತಡಮಾಡಿದರೆ ವಿನಾಶವೆ ಆದೀತೆಂದು ಜಗತ್ತಿನ ಚಿತ್ ಶಕ್ತಿಯು ಕೂಡಲೆ ಒಂದು ಚಮತ್ಕಾರವನ್ನೇ ಮಾಡಿಬಿಟ್ಟಿತ್ತು! ಆಗ ದೇವದೇವನು ನಸುನಕ್ಕನು. ಆದಿಶೇಷನು ಕೊಂಚ ನಿಶ್ಚೇಷ್ಟಿತನಾಗಿ ಹೋದನು. ಆ ಕ್ಷಣವೆ ಆನಂದಗಿರಿಯು ಆತನ ಸಮೇತ ಇದೇ ಆದಿವರಹಾ ಕ್ಷೇತ್ರದಲ್ಲಿ ಬಂದು ಬಿದ್ದಿತ್ತು.

ಇಬ್ಬರೂ ಸಮಾನ ಸತ್ವಶಾಲಿಗಳೆ ಆದರೇನು! ಸಾತ್ವಿಕ ಸಂಪನ್ನರೆ ಆಗಿದ್ದರೇನು! ಆಗ ಜಯವಾದದ್ದು ಯಾರಿಗೂ ಅಲ್ಲ. ಭವಿಷ್ಯದಲ್ಲಿ ಬೇರೆಯೆ ಆಗುವುದಿತ್ತಲ್ಲ! ಶ್ರೀಮನ್ನಾರಾಯಣನು ಭೂಲೋಕದಲ್ಲಿ ಶ್ರೀನಿವಾಸನ ಅವತಾರ ಸ್ವರೂಪಿ ಯಾಗಲಿರುವಾಗ ತನ್ನ ಆಪ್ತಸೇವಕನಾದ ಆದಿಶೇಷನನ್ನೂ ಕರೆಸಿಕೊಳ್ಳುವುದು ಬೇಡವೇ?
ಜಗತ್ತಿನಲ್ಲಿ ಎಲ್ಲವೂ ನಮ್ಮಂತೆ ನಡೆಯುವುದೇನು? ಪೌರಾಣಿಕವಾದ ಎಲ್ಲ ಉಕ್ತಿ ವಿಶೇಷತೆಗಳ ಧ್ವನಿಯೆ ಸತ್ವಪರೀಕ್ಷೆ! ಈ ಸತ್ವಪರೀಕ್ಷೆಯೊಳಗೇ ಅರಿವಿನ ಕ್ರಿಯಾಶೀಲತೆಯನ್ನೂ ಪ್ರಚೋದಿಸುವಂತದ್ದೂ ನಡೆಯುವುದು. ಹಾಗೆ ಪ್ರಚೋದಿಸುವಂತಹ ಕ್ರಿಯೆಯಲ್ಲಿಯೆ ದಿವ್ಯ ಚೇತನವೊಂದು ಜಗತ್ತಿನ ಸಕಲ ಚರಾಚರಗಳನ್ನು ತನ್ನಿಚ್ಛೆಯಂತೇ ನಡೆಸಿಕೊಳ್ಳುವುದೆಂದು ಶ್ರುತಿಗಳೂ ಸಾರಿವೆ. ಆ ಚೇತನ ಸ್ವರೂಪಿಯು ಭಗವಂತನಲ್ಲದೆ ಇನ್ಯಾರು?

ಆದಕಾರಣ, ಯಾರಿಗೆ ಯಾರೂ ಬಲಶಾಲಿಗಳಲ್ಲ, ದೊಡ್ಡವರಲ್ಲ. ದೊಡ್ಡವರಲ್ಲಿಯೂ ಸೋತವರಿವರು. ಕೆಲ ಸಂದರ್ಭಗಳಲ್ಲಿ ತಮ್ಮ ಆವೇಶದ ಮಾತುಗಳಿಗೇ ಬದ್ಧರಾಗಿ ತಮ್ಮ ಸತ್ವಪರೀಕ್ಷೆಗೆ ತಾವೇ ಗುರಿಯಾಗುವರು. ಹೌದು, ಇಹಪರಗಳಲ್ಲಿ ಹಿತವೆನಿಸುವ ಪರಾತ್ಪರ ತತ್ವ-ನೀತಿಗೆ ಯಾರೂ ತಲೆಬಾಗಬೇಕಾಗುವುದು ನ್ಯಾಯವೇ. ಹಾಗೆ ಒಳಿತಿಗಾಗಿಯೆ ಜಗದ ಕಲ್ಯಾಣಕ್ಕಾಗಿಯೆ ಮಣಿದು ಮಹಿಮಾನ್ವಿತರಾದವರಿರುವರೆಂದೂ ಈ ಬೆಟ್ಟವು ದ್ವಾಪರಯುಗದಲ್ಲಿ ತೋರಿಸಿಕೊಟ್ಟಿತ್ತು. ಅದಕ್ಕೆ ಮೊಲಕಾರಣಕರ್ತನು ಆದಿಶೇಷನೇ. ಆದ್ದರಿಂದ ಈ ಬೆಟ್ಟಕ್ಕೆ “ಶೇಷಾಚಲ” ವೆಂಬ ಹೆಸರೂ ಬಂದಿತು.

Monday, July 09, 2007

ಸಂಚಿಕೆ-16. ಸಪ್ತಗಿರಿ ಧಾಮದ ಪುರಾಣೇತಿಹಾಸ

ಮಹಾವಿಷ್ಣುವು ಧರೆಗಿಳಿದು ಬಂದು ಶ್ರೀನಿವಾಸನಾಗಿ ಜನತೆಗೆ ಸಾತ್ವಿಕ ಸಂದೇಶ ನೀಡುಲು, ಸಂಪದ ಭಾಗ್ಯ ಕರುಣಿಸಲು ಜಗತ್ತಿನಲ್ಲಿ ತನ್ನದೇ ಕಲ್ಯಾಣ ಕ್ರಾಂತಿಯ ಒಂದು ನೆಲೆಯಾಗಿಸಲು ಈ ಸಪ್ತಗಿರಿ ಧಾಮವನ್ನೇಕೆ ಆರಿಸಿಕೊಂಡನು ಎಂಬುದಕ್ಕೆ ಯುಗಯುಗಗಳಲ್ಲೂ ಕಂಡು ಬಂದಿರುವಂತಹ ದೃಷ್ಟಾಂತಗಳೇ ಸಾಕ್ಷಿಯಾಗುಳಿದಿವೆ.

ನಮ್ಮ ವೇದ ಪುರಾಣಗಳಲ್ಲಿ ರಾಕ್ಷಸ ವರ್ಣನೆಯೆ ವಿಪುಲವಾಗಿವೆ. ಕೃತಯುಗದಲ್ಲಿ ಈ ಬೆಟ್ಟಕ್ಕೆ “ವೃಷಭಾಚಲ” ಎಂದು ಹೆಸರು ಬರಲು ಕಾರಣನಾದವನು ವೃಷಭಾಸುರನೆಂಬ ರಾಕ್ಷಸನು.

ಬ್ರಹ್ಮ ದೇವತೆಗಳನ್ನೂ ಅಸುರರನ್ನೂ ಸೃಷ್ಟಿಸಿದನು. ದೇವತೆಗಳು ಬ್ರಹ್ಮನಿಂದ ಸತ್ಯ ಸ್ವೀಕಾರ ಮಾಡಿದರೆ, ಅಸುರರು ಅಸತ್ಯವನ್ನೇ ಬಯಸಿದರು. ಅಂತೆಯೆ, ದೇವ ದಾನವ ಯುದ್ಧವೆಂದರೆ ಸತ್ಯ ಅಸತ್ಯಗಳ, ಸುಪ್ರಕಾಶ-ಅಂಧಕಾರಗಳ, ಧರ್ಮ-ಅಧರ್ಮಗಳ, ಜ್ಞಾನ-ಅಜ್ಞಾನಗಳ ನಡುವಣ ನಿರಂತರವಾದ ಸಂಘರ್ಷ. ಪುನಃ ಪುನಃ ಸತ್ಯ ಮತ್ತು ಧರ್ಮಸ್ಥಾಪನೆಗೆ ಮಹಾವಿಷ್ಣುವಿನ ಅವತಾರ-ಸ್ವರೂಪಗಳು. ಎಲ್ಲಿ ಧರ್ಮವೋ ಅಲ್ಲೇ ಜಯ. ಅದೇ ಭಗವಂತನ ಸದಿಚ್ಛೆ. ಅದು ಎಲ್ಲಕಾಲಕ್ಕೂ ನಡೆಯುತ್ತಲೇ ಇರುತ್ತದೆ; ಜನತೆಯ ಕಲ್ಯಾಣಕ್ಕೆ ಸದ್ವಿವೇಕಯುತವಾದ ಸಂಕಲ್ಪ ಸಿದ್ಧಿಗೆ.

ಈ ರಾಕ್ಷಸರು ತಪಸ್ವಿಗಳು, ಮಹಾದೈವ ಭಕ್ತರು, ವಿಷ್ಣುಭಕ್ತರು, ಶಿವ ಭಕ್ತರು, ಇವರಿಗೆ ಋಷಿ ಮುನಿಗಳು, ಸಾತ್ವಿಕರ ಬಗ್ಗೆ ಅಸಡ್ಡೆ, ವೇಗಳೆಂದರೆ ತಿರಸ್ಕಾರ. ಸದ್ಗುಣಗಳೆಂದರೆ ನಿರ್ಲಕ್ಷ್ಯ. ವೃಷಭಾಸುರನೂ ಅಂಥ ರಕ್ಕಸನೇ. ವೇದಾಧ್ಯಯನ ನಿರತರಾದ ಬ್ರಾಹ್ಮಣರನ್ನೂ ಋಷಿ ಮುನಿಗಳನ್ನೂ ಪೀಡಿಸುತ್ತಿದ್ದ. ಅವರು ಮಾಡುತ್ತಿದ್ದ ಯಜ್ಞಯಾಗಾದಿಗಳಿಗೆ ಮಾಂಸ, ಮೇದಸ್ಸು, ಮಧ್ಯಗಳನ್ನು ಸುರಿದು ಅಪವಿತ್ರಗೊಳಿಸುತ್ತಿದ್ದ. ಇಂತಹ ದುಷ್ಕೃತ್ಯಗಳನ್ನು ಮಾಡುತ್ತಿದ್ದರೂ ವಿಷ್ಣುಮೊರ್ತಿಯ ಆರಾಧಕನೇ ಆಗಿದ್ದ. ಪರಮ ಭಕ್ತನಾಗಿದ್ದ. ಈ ವಷಭಾಸುರನ ಹಿಂಸೆಯನ್ನು ತಾಳಲಾರದೆ ದೇವತೆಗಳು ಋಷಿಗಳೂ ಮಹಾವಿಷ್ಣುವಿಗೆ ಮೊರೆಯಿಟ್ಟರು.

ವೃಷಭನೋ ದೈತ್ಯರಲ್ಲಿ ದೈತ್ಯನು. ದಿನವೂ “ತುಂಬರು” ಎಂಬ ತೀರ್ಥದಲ್ಲಿ ಇವನ ಸ್ನಾನ. ಸಾಲಿಗ್ರಾಮ ಶಿಲೆಯಲ್ಲಿ ಶ್ರೀಹರಿಯನ್ನು ಕಲ್ಪಿಸಿಕೊಂಡು ಧ್ಯಾನ. ಶ್ರೀಹರಿಯು ಶಿಲಾಂತರ್ಗತವಾಸನೆಂದೇ ದೃಢ ನಂಬಿಕೆ. ಈ ಬೆಟ್ಟದ ಮೇಲೆ ಆ ವಿಷ್ಣುವನ್ನು ಸಾಕ್ಷಾತ್ ಕರಿಸಿಕೊಳ್ಳಲು ಹಠಸಾಧನೆ. ಪ್ರತಿ ದಿನ ಈ ವೃಷಭನ ಪೂಜೆ ಮುಕ್ತಾಯವಾಗುವುದು ತನ್ನ ಶಿರಶ್ಛೇದನ ತಾನೆ ಮಾಡಿಕೊಂಡು ಫಲಪುಷ್ಪದೊಂದಿಗೆ ಸ್ವಾಮಿಗೆ ಸಪಮರ್ಪಿಸುವುದರಿಂದಲೇ. ಅಸುರೀ ಪ್ರವೃತ್ತಿಯ ಭೀಷಣ ವೈರಾಗ್ಯವಿದು. ಅವನ ಮೇಲೆ ಆ ಭಗವಂತನೂ ಹಾಗೆಯೆ ತನ್ನ ಕೃಪಾಕಟಾಕ್ಷ ಬೀರಿದ್ದನು. ಅವನ ಕತ್ತರಿಸಲ್ಪಟ್ಟ ಶಿರವು ಕೂಡಲೆ ಮುಂಡದೊಂದಿಗೆ ಸೇರಿ ಶರೀರವು ಯಥಾ ಸ್ಥಿತಿಯನ್ನೇ ಹೊಂದುತ್ತಿತ್ತು. ಹೀಗೆ ವೃಷಭನು ಸಾವಿರಾರು ವರುಷಗಳೆ ಭೀಕರ ತಪಸ್ಸನ್ನಾಚರಿಸಿದ ನಂತರ ಮಹಾವಿಷ್ಣುವು ಭವ್ಯ ಸ್ವರೂಪದಲ್ಲಿ ಕಾಣಿಸಿಕೊಂಡನು.

ಭಗವಂತನು ಸಾಕ್ಷಾತ್ ಕರಿಸುವ ಸ್ಥಿತ್ಯಂತರವು ಅತ್ಯದ್ಭುತವಾದದ್ದು. ವೃಷಭಾಸುರನು ಅದರ ಪ್ರಭಾವಳಿಯಲ್ಲೆ ಪರವಾಶನಾದನು. ಆಗ ವಿಷ್ಣುವು ಪ್ರತ್ಯಕ್ಷನಾಗಿ ನಿನ್ನ ಮನದಿಚ್ಛೆ ಏನಿದೆ ಹೇಳು ಭಕ್ತಾಗ್ರೇಸರ ಎಂದರೆ, ಅವನು ತನ್ನ ರಕ್ಕಸ ಸನ್ನ ಸ್ವಭಾವಕ್ಕೆ(ತಮೋಗುಣಕ್ಕೆ) ತಕ್ಕಂತೆಯೆ ವಿಲಕ್ಷಣವಾದ ಬೇಡಿಕೆಯನ್ನೇ ಇಟ್ಟನು.

“ಓ ಮಹಾವಿಷ್ಣು! ನಾನಾ ಅವತಾರಗಳನ್ನು ಮಾಡಿದ ನೀನು ಜಗತ್ತಿಗೆ ಪ್ರಚಂಡ ಪರಾಕ್ರಮಿ ಎಂದೇ ತೋರಿಸಿರುವೆ. ಈಗಲೆ ನೀನು ನನ್ನೊಡನೆ ಯುದ್ಧಕ್ಕೆ ಸನ್ನದ್ಧನಾದರೆ ನಾನೂ ಕೂಡ..” ಎಂದು ರಾಗವೆಳೆದನು.

“ನಾನು ನಿನ್ನೊಡನೆ ಯುದ್ಧಕ್ಕೆ ಸನ್ನದ್ಧನಾದರೆ ಏನಾಗುವುದೋ..” ಹುಬ್ಬೇರಿಸಿ ನಕ್ಕನು ಮಹಾವಿಷ್ಣು.

“ನೀನೆಷ್ಟು ಪರಾಕ್ರಮಿ ಎಂಬುದನ್ನು ಸ್ವತಃ ಪರೀಕ್ಷಿಸಿಯೆ ತಿಳಿಯ ಬಲ್ಲೆ ಶ್ರೀಹರಿ...”ಎನ್ನಬೇಕೇ ವೃಷಭಾ.

“ವೃಷಭಾ! ನಿನ್ನೊಳಗಿನ ತಮೋಗುಣದ ಉತ್ಕರ್ಷವೇ ನಿನ್ನಲ್ಲಿ ಇಂಥ ವಿಲಕ್ಷಣ ಕೋರಿಕೆಯನ್ನುಂಟು ಮಾಡಿದೆ. ಆಗಲಿ ನಿನ್ನ ಇಚ್ಛೆಯಂತೆಯೆ ಆಗಲಿ. ಯುದ್ಧ ನಡೆಯಲಿ ಸಿದ್ಧನಾಗು.”ಮಹಾವಿಷ್ಣುವೆಂದನು.

ಆಕ್ಷಣದಲ್ಲೇ ನಡೆದಿತ್ತು ಘನ ಘೋರ ಕಾಳಗ.
ಸತ್ವಗುಣ-ತಮೋಗುಣಗಳ ಘರ್ಷಣೆ!


ದೇವ ದೇವನ ಸಾತ್ವಿಕ ಶಕ್ತಿಯ ಆರೋಹಣ. ಪ್ರತ್ಯಾಕ್ರಮಣ. ದೇವತೆಗಳಿಗೆ ಋತ್ವಿಜರಿಗೆಲ್ಲ ಪರಿವೀಕ್ಷಣೆ. ಸ್ವರ್ಗ ನರಕಗಳ ಮಧ್ಯೆ ನಿಷ್ಠೂರವಾದ ನಿಷ್ಕರ್ಷೆ. ಪೈಶಾಚಿಕ ಹೋರಾಟವೆಲ್ಲ ಎಂದಿಗೂ ನಿಷ್ಫಲ. ಕಡೆಗೆ ಅಸುರೀ ಶಕ್ತಿಗೇ ಪರಾಭವ. ನಿಬ್ಬೆರಗಾಗಿ ನೋಡುತ್ತಿದ್ದ ದೇವತೆಗಳಿಗೆ, ಋಷಿಗಳಿಗೆ ಅಪರಿಮಿತವಾದ ಸಂತೋಷ.

ಹತವೀರ್ಯನಾಗಿ ಬಿದ್ದ ವೃಷಭಾಸುರ. ಶ್ರೀಹರಿಯಲ್ಲಿ ಅತೀವ ವ್ಯಾಕುಲ ಭಾವದಿಂದ ದಾನವತ್ವವನ್ನು ತೊರೆದು ದೈವತ್ವಕ್ಕೇರಿ ಅಮರನಾಗುವಂಥ ಅಂತಿಮ ಇಚ್ಛೆಯನ್ನು ವ್ಯಕ್ತಪಡಿಸಿದ್ದ-

“ಓ ಹರಿಸರ್ವೋತ್ತಮ ಯುಗಯುಗಗಳಲ್ಲಿ ಎಂದಿಗೂ ದೈತ್ಯ ಶಕ್ತಿಗೇ ಕೇಡೆಂದೂ, ಸಾತ್ವಿಕ ಶಕ್ತಿಗೇ ಸರ್ವತ್ರ ಜಯವೆಂದೂ ಸಾರುವಂತೆ ಮಾಡುವುದೇ ನಿನ್ನ ಗುರಿಯಲ್ಲವೇ… ನಿನ್ನೀ ಸಾತ್ವಿಕ ಸಂದೇಶದ ಸಪ್ತಗಿರಿ ಶೃಂಗದಲ್ಲಿ ನನ್ನ ಹೆಸರೂ ಕೂಡ ಚಿರಂತನವಾಗುಳಿಯುವಂತೆ ಕೃಪಾಕರಿಸು ಹೇ ದೇವಾ….!!” ಎಂದು ವೃಷಭಾಸುರನು ವಿನೀತ ಭಾವದಿಂದ ಆ ಭಗವಂತನನ್ನು ಬೇಡಿಕೊಂಡನು.

ಭಗವಂತನು “ತಥಾಸ್ತು” ಎಂದು ಅನುಗ್ರಹಿಸಿದನು.
ಅಂದಿನಿಂದ ಆ ಬೆಟ್ಟಕ್ಕೆ “ವೃಷಭಾಚಲ” ಎಂಬ ಹೆಸರು ಬಂದಿತು.
-ಮುಂದುವರೆಯುವುದು.

Saturday, June 30, 2007

15.ಮಹಾಲಕ್ಷ್ಮಿಯೆ ಇಲ್ಲದ ವೈಕುಂಠ ವೈಭವವಿನ್ನೆಲ್ಲಿ…

ಮಹಾಲಕ್ಷ್ಮಿ ಇಲ್ಲದ ವೈಕುಂಠ ವೈಭವವಿನ್ನೆಲ್ಲಿ..? ಅದು ಉಡುಗಿ ಹೋಯಿತು. ಕಳಾಹೀನವಾಯಿತು. ಅಲ್ಲೆಲ್ಲವೂ ಶೂನ್ಯವೆನಿಸಿ ಬಿಕೋ ಎನ್ನತೊಡಗಿತು. ಶ್ರೀಲಕ್ಷ್ಮಿಯ ಅಗಲಿಕೆಯಿಂದ ವಿಷ್ಣುವೂ ಕೂಡ ಧರ್ಮ ಸಂಕಟಕ್ಕೆ ಸಿಲುಕಿದನು. ಸ್ವತಃ ಸಂರಕ್ಷಕನೆನಿಸಿಕೊಂಡಾತನನ್ನೂ ಸಂಕಷ್ಟಗಳು ಬಿಡಲಿಲ್ಲ. ಹೌದು, ಗೃಹಲಕ್ಷ್ಮಿಯೆ ಮುನಿಸಿಕೊಂಡು ಹೊರಟು ಹೋದಮೇಲೆ ಸ್ವರ್ಗ ಚ್ಯುತಿಯೂಗುವುದೂ ಖಚಿತವೇ. ಅಷ್ಟೇ ಅಲ್ಲದೇ, ಜಗದೈಕ ಸ್ವರೂಪಿಗೆ ಭೂಲೋಕ ಕೈಬೀಸಿ ಕರೆಯುತ್ತಿತ್ತು;ಕಲಿಯುಗದ ಜನತೆಗೆ ಕಲ್ಯಾಣಮಾಡಲಿಕ್ಕಾಗಿಯೆ.
ಗಂಗಾನದಿಯ ದಕ್ಷಿಣ ದಿಕ್ಕಿನಲ್ಲಿ ಹಲವಾರು ಹೋಜನಗಳು ಕ್ರಮಿಸಿ ಹೋದರೆ ಸುವರ್ಣಮುಖಿ ಎಂಬ ಪುಣ್ಯ ನದಿಯು ಸಿಗುವುದು. ಹಿಂದೆ ಪರಾಶರರ ಪುತ್ರ ವ್ಯಾಸನು ಶುಕಮುನಿಗೆ ವರ ನೀಡಿದ ತೀರವಿದು. ಅಂದಿನಿಂದ ಶುಕಮುನಿಗಳು ಈ ನದಿಗೆ ಸಮೀಪದಲ್ಲೇ ಆಶ್ರಮ ಕಟ್ಟಿಕೊಂಡು ವಾಸಿಸುತ್ತಿದ್ದರು. ಅಗಸ್ತ್ಯ ಋಷಿಗಳು ಈ ಸುಂದರ ತಾಣವನ್ನೂ, ಇಲ್ಲಿನ ಸುಪ್ರಶಾಂತತೆಯನ್ನೂ, ಎಲ್ಲ ದುಷ್ಕೃತಿಗಳನ್ನೂ ತೊಡೆದು ಮುದ ನೀಡುವ ಪ್ರಫುಲ್ಲತೆಯನ್ನೂ ಗ್ರಹಿಸಿ ಇದನ್ನೇ ಪೂಜನೀಯ ಪುಣ್ಯ ಭೂಮಿ ಎಂದು ಹೆಸರಿಸಿದರು.

ಸುವರ್ಣಮುಖಿ ನದಿಯ ಉತ್ತರ ದಿಕ್ಕಿನಲ್ಲಿ ಸಪ್ತಗಿರಿ ಧಾಮ! ಅಲ್ಲಿರುವುದೇ ವೆಂಕಟಾದ್ರಿ. ವೆಂಕಟಾದ್ರಿಯಲ್ಲಿ ಸ್ವಾಮಿ ಪುಷ್ಕರಣಿ ತೀರ್ಥವು ಬೇರೆಲ್ಲ ತೀರ್ಥಗಳಿಗಿಂತಲೂ ಶ್ರೇಷ್ಠವೆನಿಸಿದೆ. ಈ ತೀರ್ಥದ ಮಹಿಮೆಗಳು ಅಪಾರ. ಯಾವಾಗಲೂ ತುಂಬಿರುವ ಈ ತೀರ್ಥದಲ್ಲಿ ದೇವತೆಗಳೂ ಪ್ರತಿ ವರುಷ ಧನುರ್ಮಾಸದಲ್ಲಿ ಶುಕ್ಲದ್ವಾದಶಿಯ ಪ್ರಾತಃಕಾಲದಲ್ಲಿ ಮಿಂದು ಶುಭ್ರಸ್ನಾತರಾಗುವರೆನ್ನುವರು. ಅಂದಮೇಲೆ ಮಾನವರಿಗೆ ಈ ತೀರ್ಥ ಸ್ನಾನದ ವಿಶೇಷವು ಅರಿವಾಗದಿರದು. ಹಿಂದೆ ಪುರಂದರ ದಾಸರು ತಿರುಪತಿಗೆ ಬಂದಿದ್ದಾಗ ಅವರು ನಿತ್ಯವೂ ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನಮಾಡಿ, ಈ ಪುಷ್ಕರಣಿಯ ಆಗ್ನೇಯ ದಿಕ್ಕಿನಲ್ಲಿ ಆನ್ಹಿಕಕ್ಕೆ ಕೂರುತ್ತಿದ್ದರು. ಈಗಿನಂತೆ ಆಗ ಮಂಟಪಗಳು ಇರಲಿಲ್ಲ. ಶ್ರೀಕೃಷ್ಣದೇವರಾಯನು ಒಂದು ಶಿಲಾಮಂಟಪವನ್ನು ದಾಸರಿಗಾಗಿಯೆ ಕಟ್ಟಿಸಿಕೊಟ್ಟನು. ಆ ಮಂಟಪಕ್ಕೆ “ದಾಸ ಮಂಟಪ” ಎಂದು ಹೆಸರಾಯಿತು. ಯಾವ ದಾಸರೆ ಬರಲಿ, ಪುರಂದರ ದಾಸರು ಆನ್ಹೀಕಕ್ಕೇ ಕೂರುತ್ತದ್ದ ಸ್ಥಳವೆಂದು ತಾವೂ ಅಲ್ಲೇ ಪ್ರಾರ್ಥನೆ ಪೂಜಾದಿಗಳನ್ನು ನಡೆಸುವ ಸಂಪ್ರದಾಯವಿತ್ತು. ಈಗ ಅಲ್ಲೊಂದು ಕಛೇರಿ ಇದೆಯಷ್ಟೇ.

ಸ್ವಾಮಿ ಪುಷ್ಕರಣಿಯ ಪಶ್ಚಿಮ ದಿಕ್ಕಿನಲ್ಲಿ ಹಿಂದಿನ ಯುಗವೊಂದರಲ್ಲಿ ವರಹಾವತಾರಿ ಯಾಗಿದ್ದ ಶ್ರೀ ಹರಿಯೆ ಇಂದಿಗೂ ಅಶ್ವತ್ಥ ವೃಕ್ಷದ ಬಳಿ ನೆಲೆಯೂರಿ ನಿಂತಿರುವನು. ಮುಕ್ಕೋಟಿ ತೀರ್ಥಗಳ ಉಗಮಸ್ಥಾನವಾದ ಈ ವರಹಾಗಿರಿ ಮಹಾವಿಷ್ಣುವನ್ನೂ ಬೆರಗು ಗೊಳಿಸಿ ಆಕರ್ಷಿಸಿ ಬರಮಾಡಿಕೊಂಡಿತ್ತು. ಇಲ್ಲೊಂದು ವಿಶಾಲವಾಗಿ ಬೆಳೆದ ಹುಣಿಸೆ ಮರವಿತ್ತು. ಅದರ ಬುಡದಲ್ಲಿ ಒಂದು ದೈವಿಕ ನೆಲೆಯಾದ ಹುತ್ತವಿತ್ತು. ಇದೇ ಹುತ್ತವು ಶ್ರೀಮನ್ನಾರಯಣನಿಗೆ ತನ್ನ ಗೃಹಲಕ್ಷ್ಮಿಯ ಅಗಲಿಕೆಯ ಚಿಂತೆ ಕಳೆಯಲು, ಲೋಕೋತ್ತರವಾದ ಕಾರ್ಯಗಳಿಗೆ ಧನ್ಯತೆ ಕಾಣಿಸಲು ಆವಾಸ ಸ್ಥಾನವಾಯಿತು. ಆತನ ಮುಂದಿನ ಮಹತ್ತದ ಗಮ್ಯಕ್ಕೆ ಅದೇ ಮೂಲವೆನಿಸಿತು. ಇಲ್ಲೇ ಶ್ರೀಹರಿಯು ಧ್ಯಾನಮಗ್ನನಾಗಿ ಕುಳಿತನು. ಅಹರ್ನಿಶಿ ಇಹವನ್ನೇ ಮರೆತನು. ನಿಶ್ಚಲ ನಿರ್ವಿಕಲ್ಪಸಮಾಧಿ ಸ್ಥಿತಿಯಲ್ಲೇ ಸ್ಥಿತಿಯಲ್ಲೇಸ್ಥಿತಿಯಲ್ಲೇ ವರುಷಗಳನ್ನೇ ಕಳೆದನು.

ಶರೀರದ ಸುತ್ತಮುತ್ತ ಹುತ್ತವು ಗಿಡಗೆಂಟೆಗಳು ಆಳೆತ್ತರಕ್ಕೆ ಬೆಳೆದಿದ್ದವು. ಆ ದೇವನು ಅಲ್ಲಿರುವುದೇ ಯಾರಿಗೂ ತಿಳಿಯಾದಾಗಿತ್ತು. ಮತ್ತೂ ಅನೇಕ ವರುಷಗಳೆ ಸಂದವು. ಮಹಾವಿಷ್ಣುವಿನ ಈ ಘೋರ ತಪವನು ಭಂಗ ಮಾಡುವುದು ಶಕ್ಯವೇ? ಎಂದು ಬ್ರಹ್ಮನು ಪರಶಿವನಾದಿಯಾಗಿ ದೇವಾನು ದೇವತೆಗಳೆಲ್ಲರೂ ಗಾಢವಾಗಿ ಚಿಂತಿಸತೊಡಗಿದರು. ಲೋಕ ಕಲ್ಯಾಣವಾಗಬೇಕೆಂದರೆ ಈ ಲೋಕಪಾಲಕನನ್ನು ಪುನಃ ಯೋಗ ನಿದ್ರೆಯಿಂದ ಎಚ್ಚರಿಸಬೇಕಲ್ಲ! ಇಲ್ಲದಿದ್ದರೆ ಮುಂದೇನಾಗುವುದೋ. ಇದಕ್ಕೆ ಏನಾದರೊಂದು ಸಾತ್ವಿಕವಾದ ಮಾರ್ಗವನ್ನೇ ಹುಡುಕಬೇಕಾಗುವುದೆಂದು ಪರಶಿವನೂ ಬ್ರಹ್ಮನೂ ಸೇರಿ ಸುಧೀರ್ಘವಾಗಿಯೇ ಆಲೋಚಿಸಿದರು. ತಮ್ಮ ರಜೋ ಮತ್ತು ತಮೋಗುಣಗಳನ್ನು ಯಾವುದೋ ಗಳಿಗೆಯಲ್ಲಿ ಪ್ರದರ್ಶಿಸಿ ಪರಾಭವ ಹೊಂದಿದ್ದರೇನು! ಶ್ರೀವಿಷ್ಣುವಿನ ಅವತಾರ ಸ್ವರೂಪದಲ್ಲಿ ಜಗತ್ತಿಗೊಂದು ಸಂದೇಶ ಸಾರುವ ಈ ಘನ ಕಾರ್ಯದಲ್ಲಿ ತಾವೂ ಭಾಗಿಗಳೆ ಆಗುವುದರಿಂದ ತಮ್ಮ ಸತ್ವ ಗುಣವೂ ಸಂಪನ್ನವಾಗುವುದೆಂದು ಅರಿತರು. ಆದರೆ, ಶ್ರೀಲಕ್ಷೀಯ ಸಹಕಾರವಿಲ್ಲದೆ ಇದು ಸಾಧ್ಯವೇ ಎಂಬ ಸಂದೇಹ ಬೇರೆ ಕಾಡಿತ್ತು.

ಅದೇ ವೇಳೆಗೆ ತ್ತಿಕಾಲ ಜ್ಞಾನಿಗಳಾದ ನಾರದರು ದಯಮಾಡಿಸಿದ್ದರು. ಅವರು ಬ್ರಹ್ಮ ಮಹೇಶ್ವರರ ಸಂದೇಹ ನಿವಾಹರಣೆ ಮಾಡುತ್ತ ಲಕ್ಷೀದೇವಿಯು ಕೊಲ್ಹಾಪುರದಲ್ಲಿರುವಳೆಂದೂ ಶ್ರೀಮನ್ನಾರಯಣನನ್ನೆ ನೆನೆಯುತ್ತ ಧ್ಯಾನಮಗ್ನಳಾಗಿರುವಳೆಂದೂ ಹೇಳಿದರು. ನಾರಾಯಣನೂ ಸಾಮಾನ್ಯ ಮನುಷ್ಯನಂತಾಗಿ ನಿದ್ರಾಹಾರಗಳನ್ನು ಬಿಟ್ಟು ಕೃಶನಾಗಿರುವನು. ಆತನಿಗೀಗ ಶುಶ್ರೂಷೆ ತುಂಬಾ ಅಗತ್ಯವೆಂದೂ ಮಹಾಲಕ್ಷೀಗೆ ಈ ವಿಷಯ ತಿಳಿಸಿ ಕರೆತರುವುದು ಸೂಕ್ತವೆಂದರು. ಆಕೆಯನ್ನೊಲಿಸಲು ನೀವು ತಕ್ಷಣವೆ ಕಾರ್ಯ ಪ್ರವೃತ್ತರಾಗಬೇಕೆಂದರು.
ಆಗ ಎಲ್ಲರೂ ಮಹಾಲಕ್ಷಿ ಯನ್ನೇ ಪ್ರಾರ್ಥಿಸಿದರು.
ಆ ಲೋಕಮಾತೆಯ ಬಳಿಗೆ ಬ್ರಹ್ಮನೂ ಶಿವನೂ ಒಂದಾಗಿ ಹೊರಟು ಬಂದರು. ವೈಕುಂಠವನ್ನು ತ್ಯಜಿಸಿ ಬಂದಿದ್ದ ಆ ಶ್ರೀದೇವಿಯ ಭೂಲೋಕದ ಗೋದಾವರಿ ನದಿ ತೀರದ ಕೊಲ್ಹಾಪುರದಲ್ಲಿ ಆಶ್ರಮ ವಾಸಿಯಾಗಿದ್ದಳು. ಪರ್ಣಶಾಲೆಯೊಂದರಲ್ಲಿ ನಿತ್ಯವೂ ಧ್ಯಾನ ನಿರತಳಾಗಿದ್ದಳು. ಮಹಾತಮಸ್ವಿನಿಯೆ ಆಗಿದ್ದಳು.ಸೃಷ್ಟಿಕರ್ತನೂ ಪರಶಿವನೂ ಎದುರಿಗೇ ಬಂದು ನಿಂತರೂ ಆಕೆ ಕೂಡಲೆ ಕಣ್ತೆಯಲಿಲ್ಲ. ಪ್ರಸನ್ನ ಚಿತ್ತಳಾಗಲಿಲ್ಲ.

“ಓ, ಮಹಾಲಕ್ಷೀಯೆ ನಿನ್ನ ಕೋಪವು ಸ್ತ್ರೀ ಸಹಜವಾದುದೇ ಅದು ಅನರ್ಥಕಾರಿ ಆಗಬಾರದು ತಾಯೆ. ದಯಮಾಡಿ ಪ್ರಸನ್ನಳಾಗು” ಇಬ್ಬರೂ ಒಕ್ಕೊರಲಿನಿಂದ ಕೇಳಿಕೊಂಡರು.
ತುಸು ತಡೆದು ಮೆಲ್ಲನೆ ಕಣ್ತೆರೆದಳು ಶ್ರೀಕಾಂತೆ.
“ಓ ಸೃಷ್ಟಿಕರ್ತನೆ, ಸತ್ಯ ಶವಸುಂದರನೆ, ನನ್ನ ಕೋಪದಲ್ಲೂ ಅರ್ಥ ಹುಡುಕಲು ಬಂದಿರುವಿತೇನು? ನೀವು ಬಂದ ಕಾರ್ಯವಾದೂ ಏನು? ಮೊದಲು ಹೇಳಬಾರದೇ” ಕೇಳಿದಳು ಕಲ್ಯಾಣಕರ್ತೆ!

“ತಾಯೇ! ಜಗನ್ಮಾತೆ ಆದಿಶಕ್ತಿ ಸ್ವರೂಪಣಿ. ನೀನಲ್ಲವೆ? ಪ್ರಕೃತಿಯ ಮೂಲ ಪ್ರಧಾನ ತತ್ವ. ನಿನ್ನಲ್ಲೇ
ಆ ಮೂರು ಗುಣಗಳೂ ಅವ್ಯಕ್ತವಾಗಿರುವುದು. ಅದರಲ್ಲೆ ಒಂದಾದ ರಜೋಗುಣ ಪ್ರಭಾವದಿಂದ ನೀನು ಇಲ್ಲಿಗೆ ಬಂದೆಯಲ್ಲ. ಆದರೆ, ತಾಯೆ ನಿನ್ನ ಪ್ರಾಣ ಮಾತ್ರ ಇಂದಿಗೂ ನೀನು ಧ್ಯಾನಿಸುತ್ತಿರುವ ಆ ಮಹಾವಿಷ್ಣುವಿನ ವಕ್ಷಸ್ಥಳದಲ್ಲೆ ಇರುವುದಲ್ಲವೇ” ಬ್ರಹ್ಮದೇವನೆಂದರೆ,

ಪರಮೇಶ್ವರನು ಹೀಗೆಂದನು-
“ನಿನ್ನ ಪ್ರಾಣವಲ್ಲಭ ಇದೇ ಭೂಲೋಕದ ವರಹಾಗಿರಿಯಲ್ಲಿ ಶ್ರೀ ನಿವಾಸನಾಗಿ ಅವತಾರ ಸ್ವರೂಪಿಯಾಗಲಿರುವನು. ಆದರೇನೆಂದು ಹೇಳುವುದು ತಾಯೆ. ಇಡೀ ಜಗತ್ತೀಗೇ ನಿಗಮಗೋಚರನಾಗಬೇಕಾದವನು ಇನ್ನೂ ಅಲ್ಲಿನ ಹುತ್ತವೊಂದರಲ್ಲಿ ಯಾರಿಗೂ ಕಾಣದಂತೇ ಇರುವನು. ನೀರಾಹಾರವೊ ಇಲ್ಲದೆ ಕೃಶನಾಗಿ ಹೋಗಿರುವನು. ಇದೆಲ್ಲ ಕೇಳಿಯೂ ನಿನ್ನ ಹೃದಯ ಮಿಡಿಯುವುದಿಲ್ಲವೆ ಹೇಳು?... ಏಳು ಎದ್ದೇಳು, ನಮ್ಮೊಂದಿಗೆ ಈಗಲೇ ಸಹಕರಿಸು ತಾಯೆ.”

ತನ್ನ ಪತಿದೇವನು ಸಾಮಾನ್ಯನಂತೆ ಕಷ್ಟಪಡುತ್ತಿರುವುದನ್ನು ಕೇಳಿ ಮಹಾಲಕ್ಷೀಯು ಕರಗಿ ನೀರಾಗಿ ಹೋದಳು.
“ಈಗ ನಾನೇನು ಮಾಡಲಿ ಹೇಳಿ?...” ತೀರ ಅಮಾಯಕಳಂತೆ ಕೇಳಿದಳು.
“ಈಗ ಮಹಾವಿಷ್ಣುವಿಗೆ ಸ್ವಲ್ಪಕಾಲ ಪ್ರತಿದಿನವೂ ಹಾಲುಣಿಸುವ ಸೇವೆ ಮಾಡಬೇಕೆಂದಿದ್ದೇವೆ. ತಾಯೆ ನೀನು ಗೋಪಿಕೆಯ ವೇಷಧರಿಸಿ ಹಸು-ಕರುವನ್ನು ಚೋಳರಾಜನಿಗೆ ವಿಕ್ರಯಿಸಬೇಕಾಗುವುದು” ಬ್ರಹ್ಮನೆಂದನು.
“ಭಗವಂತನಿಗೇ ಹಾಲುಣಿಸುವಂಥ ಹಸು-ಕರುವೇ ಎಲ್ಲಿ ಸಿಗುವುದು ಹೇಳಿ?”
ಮಹಾಲಕ್ಷ್ಮಿ ಚಕಿತಳಾದಳು.

“ಹಸುಕರುಗಳೆ ನಿನ್ನ ಎದುರಿಗೇ ಇರುವುವು. ನಾವೇ ಅಂಥ ಹಸುಕರುಗಳಾಗುತೇವೆ. ನೀನೂ ಈ ಪುಣ್ಯಾಕಾರ್ಯದಲ್ಲಿ ಸಹಭಾಗಿಯಾಗು ತಾಯಿ. ಹಾಲು ಕುಡಿದು ಚೇತರಿಸಿಕೊಳ್ಳುವ ಮಹಾವಿಷ್ಣುವಿಗೆ ಒಂದು ದಿನ ಹುತ್ತದಿಂದ ಹೊರಬರುವಂತೆ ಆ ಚಿತ್ಶಕ್ತಿಯ ಪ್ರೇರಣೆಯಾಗುವುದು. ಅಂದು ಧರ್ಮ ಸಂರಕ್ಷಕನಾಗಿ ಬರು ವ ದೇವನ ಕಡೆಗೆ ಲೋಕದ ಗಮನವೂ, ಲೋಕದ ಕಡೆಗೆ ಆ ದೇವನ ದಾರ್ಶನಿಕ ದೃಷ್ಟಿಯೂ ಹರಿಯುವುದು. ನೀನು ಸಮ್ಮತಿಸಬೇಕು ತಾಯೆ”

-ಎಂದು ಪರಬ್ರಹ್ಮ ಮಹೇಶ್ವರರು ಒಂದಾಗಿ ಕೇಳಿಕೊಂಡಾಗ ಸಾತ್ವಿಕ ಸಂಪ್ರೀತೆ ಮಹಾಲಕ್ಷಿಯು ಸ್ವತಃ ಗೋಪಿಕೆಯಂತೇ ಆ ಹಸುಕರುಗಳನ್ನು ಹೊಡೆದುಕೊಂಡು ಚೋಳರಾಜನ ಆ ಸ್ಥಾನಕ್ಕೆಂದೇ ಹೊರಟು ಬಂದಳು. ಆಕೆ ಪತಿಯ ಮೇಲೆ ಮುನಿಸಿಕೊಂಡಿದ್ದರೇನು? ಆತನ ಮೇಲಿನ ಪರಮ ಭಕ್ತಿಯನ್ನೆಂದಿಗೂ ಬಿಟ್ಟುಕೊಡಲಾರಳಲ್ಲ. ಆ ದೇವನ ಪ್ರೀತ್ಯರ್ಥ ಕಲ್ಯಾಣಕಾರ್ಯದಲ್ಲಿ ಪರೋಕ್ಷವಾಗಿಯೆ ಭಾಗಿಯಾದಳು. ಎಷ್ಟೇ ಆಗಲಿ ಆಕೆ ಮಹಾಮಾಯಯೇ. ಮುಂದೆ ನಡೆಯಲಿರುವುದೇನೆಂದು ಬಲ್ಲವಳೇ. ಅಂತೇ ಹುಸುಕರುಗಳಿಗೆ ಗೋಪಿಕೆ ಯಾದಳು.

ಆ ಹಸುಕರುಗಳು ನೋಡಲು ದಷ್ಟಪುಷ್ಟವಾಗಿದ್ದು ಕಣ್ಕೊರೈಸುವಂತಿದ್ದವು. ಭೂಲೋಕದ ಹಸುಗಳ ಹಿಂಡಿನಲ್ಲೆ ಇಂಥ ಅತ್ಯಪೂರ್ವ ಜಾತಿಯ ದುರ್ಲಭವೆನಿಸಿತ್ತು. ಇವು ರಾಜನ ಪಶು ಸಂಗೋಪನಾಲಯದಲ್ಲೆ ಇರಲು ಯೋಗ್ಯವಾಗಿರುವುವು ಎಂದು ರಾಜ ಬೀದಿಯಲ್ಲಿ ಅವುಗಳೊಂದಿಗೆ ಗೋಪಿಕೆಯ ರೂಪದ ಈ ಶ್ರೀದೇವಿಯು ಬರುತ್ತಿದ್ದರೆ ಊರ ಜನರು ಆಡಿಕೊಂಡರು. ಅದಾಗಲೆ ಚೋಳರಾಜನ ಅರಮನೆಯು ಗೋಪಾಲಕರು ಈ ವಿಶಿಷ್ಟಜಾತಿಯ ಆಕಳು ಕರುವನ್ನು ನೋಡದಿರಲಿಲ್ಲ. ಅವು ರಾಜನಿಗೇ ವಿಕ್ರಯಿಸಲಿಕ್ಕಾಗಿ ಬಂದಿವೆಯೆಂದು ತಿಳಿದಾಗ ತಡಮಾಡದೆ ಆ ಗೋಪಿಕೆಯನ್ನು ರಾಜಸ್ತಾನಕ್ಕೇ ಕರೆತಂದರು. ಚೋಳರಾಜನು ಆತನ ಪತ್ನಿಯು ಈ ಹಸುಕರುಗಳ ಅಂದ ಚೆಂದಕ್ಕೆ ಮನಸೋತರು. ಕಾಮಧೇನುವಿನಂತೇ ಹಾಲು ಕರೆವುದೆಂದು ಕೇಳಿ ಬೆರಗಾದರು. ಗೋಪಿಕೆಯ ಮುಖ ಲಕ್ಷಣ ನೋಡಿ ಅವಳ ಮಾತನ್ನು ನಂಬಿದರು . ಅವಳು ಕೇಳಿದಷ್ಟು ಸ್ವರ್ಣ ಮುದ್ರಿಕೆ ವರಹಗಳನ್ನು ಕೊಟ್ಟು ಕೊಂಡುಕೊಂಡರು. ಚೋಳ ರಾಜನು, ತನ್ನ ರಾಣಿಯು ಇಚ್ಛಿಸಿದಂತೆ ಇಂದಿನಿಂದಲೆ ಈ ಹಸುವಿನ ಹಾಲು ಅಂತಃಪುರವನ್ನು ತಲುಪಬೇಕೆಂದು ಆಜ್ಞಹೊರಡಿಸಿದನು.

ಹೀಗೆ ಚೋಳರಾಜನಿಗೆ ಹಸುಕರುಗಳನ್ನು ವಿಕ್ರಯಿಸಿದ ಮೇಲೆ ಮಹಾಲಕ್ಷ್ಮಯು ತನ್ನ ಸ್ವಾಮಿಯು ವೆಂಕಟಾದ್ರಿಯ ಹುತ್ತದೊಳಗೆ ಹೇಗಿರುವನೋ ಎಂದು ಖಿನ್ನಳಾಗಿಯೆ ಕೊಲ್ಹಾಪುರದತ್ತ ಪಯಣಿಸುತ್ತಿರಲಾಗ ದೇವರ್ಷಿ ನಾರದರು ಆಕೆಗೆ ದರ್ಶನ ಕೊಟ್ಟರು.
“ಜಗನ್ಮಾ ಹೋದ ಕೆಲಸವಾಯೆತೇ?” ಕೇಳಿದರು.
“ಆಯಿರು ನಾರದ. ಆದರೆ ಏಕೊ ಸಮಾಧಾನವೆ ಇಲ್ಲವಾಗಿಗೆ...”

“ಯೋಚಿಸುವುದೇಕೆ ತಾಯೆ? ಮುಂದೆ ಶ್ರೀಮನ್ನಾರಾಯಣ ತನ್ನ ಕಲ್ಯಾಣ ಸಮಯದಲ್ಲಿ ನಿನ್ನನ್ನೂ ಕರೆಸಿಕೊಳ್ಳುವನು ತಾಯೇ. ಕಾಲಕೂಡಿ ಬರುವವರೆಗೆ ಕಾಯಬೇಕಷ್ಟೇ.” ನಾರದರೆಂದರು ನಗುತ್ತಾ.

“ಏನೆಂದೆ! ನನ್ನ ಸ್ವಾಮಿಗೆ ಕಲ್ಯಾಣ ಸಮಯವೇ…?” ಮಹಾಲಕ್ಷ್ಮಿಯ ಕಣ್ಗಳೆರಡೂ ಅಗಲವಾದವು. ತೀಕ್ಷ್ಣನೋಟ ಬೀರಿದವು.

“ಗಾಬರಿ ಏಗೆ ತಾಯೆ! ನಿನ್ನ ಸ್ವಾಮಿಯ ಕಲ್ಯಾಣವೆಂದರೆ ಜಗತ್ಕಲ್ಯಾಣವೇ...” ಈ ಮಹಾತಾಯಿಗೆ ತನ್ನ ಪತಿದೇವರ ಮಹಿಮೆ ತಿಳಿಯದೇ? ಎಂದು ನಾರದರು ಮತ್ತೆ ನಕ್ಕರು. ಆಕೆ ನೋಡುತ್ತಿದ್ದಂತೆಯೆ ‘ನಾರಾಯಣ ನಾರಾಯಣ’ ಎನ್ನುತ್ತ ಅಂತರ್ಧಾನರಾದರು.

ಇತ್ತ ಅರಮನೆಯ ಗೋಪಾಲಕನು ಹೊಸ ಹಸು ಕರುಗಳನ್ನು ನೂರಾರು ಸಂಖ್ಯೆ ಯಲ್ಲದ್ದ ಮಂದೆಯೊಡನೆ ವೆಂಕಟಾಚಲದ ಅರಣ್ಯಕ್ಕೆ ಹೊಡೆದುಕೊಂಡು ಹೋಗಿದ್ದನು. ಬ್ರಹ್ಮಸ್ವರೂಪಿ ಹಸುವು ಎಲ್ಲ ಹಸುಗಳೊಂದಿಗೆ ಮೇಯದೇನೆ ಮೆಲ್ಲನೆ ಗೋಪಾಲಕನ ಕಣ್ ತಪ್ಪಿಸಿ ಒಂಟಿಯಾಗೆ ಅಲೆಯುತ್ತ ಶ್ರೀಮನ್ನಾರಾಯಣನು ವಾಸಿಸುತ್ತಿದ್ದ ಬೃಹದಾಕಾರದ ಹುತ್ತವನ್ನು ಆಘ್ರಾಣಿಸಿ ಪತ್ತೆ ಹಚ್ಚಿತ್ತು. ಹುತ್ತದೊಳಗೆ ಕುಳಿತಿರುವ ಸ್ವಾಮಿಯ ಶ್ವಾಸೋಚ್ಚಾಸವನ್ನು ಗರುತಿಸಿತು. ಆದೇನು ಲೀಲಿಯೋ ಹುತ್ತದ ರಂಧ್ರಗಳು ಹಸುವು ಅಲ್ಲಿ ನಿಂತಿದ್ದರೆ ಆದರೆ ಕೆಚ್ಚಲಿನೆತ್ತರಕೆ ಸಮನಾಗಿದ್ದವು. ಹಸುವೂ ಅಲ್ಲೆ ಸರಿಯಾಗಿ ನಿಂತು ತನ್ನ ಕೆಚ್ಚಲಿನಿಂದ ತನ್ನಷ್ಟಕ್ಕೇ ತಾನೆ ಹಾಲನ್ನು ಹುತ್ತದೊಳಗೆ ಕರೆಯುವುದಕ್ಕಾರಂಭಿಸಿತು. ಆನಂತರವೆ, ಯಥಾಪ್ರಕಾರ ಮಂದೆಯನ್ನು ಸೇರುತ್ತಿತ್ತು. ಹೀಗೆ ಯಾರೂ ಕಂಡು ಕೇಳರಿಯದ ರೀತಿಯಲ್ಲಿ ಹುತ್ತದಲ್ಲಿದ್ದ ಶ್ರೀಮನ್ನಾರಾಯಣ ಸ್ವಾಮಿಗೆ ಕ್ಷೀರಪಾನ ಸೇವೆಯು ಬಹು ದನಗಳೇ ನಿರ್ವಿಘ್ನವಾಗಿ ನಡೆಯುತ್ತಿತ್ತು. ಇದೇ ಹಸುವು ರಾಜನ ಅರಮನೆಯಲ್ಲಿ ಒಂದು ತೊಟ್ಟೂ ಹಾಲು ಕೊಡದಾಗಿತ್ತು.

Saturday, September 23, 2006

ಸಂಚಿಕೆ-14. ಸಾತ್ವಿಕತೆ,ಸತ್ವಗುಣ-ಸ್ವಭಾವಗಳಲ್ಲಿ ಮಾತ್ರ ಸರ್ವತ್ರ ಜಯವು.

ಭೃಗು ಮಹರ್ಷಿಯು ಭೂಲೋಕಕ್ಕೆ ಮರಳಿದನು. ಇದೀಗ ಪಂಚ ಮಹಾಯಜ್ಞಗಳನ್ನು ಮಾಡಿ ಪುನೀತನಾದ ಪ್ರಗಲ್ಭ ಜ್ಞಾನಿಯಂತೇ ಆಗಿದ್ದನು. ಈವರೆಗೆ ನೈಮಿಷಾರಣ್ಯದ ಆಶ್ರಮ ವಾಸಿಗಳೆಲ್ಲರೂ ಆತನು ಬರುವ ನಿರೀಕ್ಷೆಯಲ್ಲಿದ್ದರಲ್ಲ; ಮುಂದೆ ನಡೆಯಲಿರುವ ಮಹಾಯಜ್ಞಕ್ಕೆಂದೇ ಮೂರು ಲೋಕಗಳಲ್ಲಿ ಸಂಚರಿಸಿ ಬಂದ ಆ ಮಹಾನ್ ದಾರ್ಶನಿಕನು ತಂದಿರಬಹುದಾದ ಮಹತ್ತರ ಸಂದೇಶ ವೇನೆಂದು ತಿಳಿಯಲು ಕಾತರರಾಗಿದ್ದರು. ನಿರೀಕ್ಷಿಸಿದಂತೆಯೆ ಭೃಗುಋಷಿಯು ತಪೋವನವನ್ನು ಪ್ರವೇಶಿಸಿ ಯಜ್ಞಶಾಲೆಗೆ ಬಂದನು. ಆತನಿಗೆ ಭವ್ಯ ಸ್ವಾಗತ ದೊರೆಯಿತು.. ಹೊಸ ಜ್ಞಾನದ ಅವಿರ್ಭಾವದಿಂದ ಅಸೀಮರೂಪಿಯ ಅಂತಃ ಸತ್ವವೆ ಬೆಳಗಿದ ಪ್ರಭೆಯಿಂದಲೆ ಆತನ ಕಣ್ಣುಗಳು ಇನ್ನಷ್ಟು ಹೊಳೆಯುತ್ತಿದ್ದವು. ಮುಖದ ತೇಜಸ್ಸು ವೃದ್ಧಿಸಿತ್ತು. ಸಾವಿರಾರು ವರುಷಗಳೆ ತಪಸ್ಸು ಮಾಡಿದರೂ ಸಿಗದ ಸೌಭಾಗ್ಯವೆ ಲಭಿಸಿತ್ತು. ಆಶ್ರಮದ ಋಷಿಗಳು, ವಟುಗಳೆಲ್ಲರೂ ಆತನಿಗೆ ಗೌರವ ಸೂಚಿಸಿ ಅಭಿವಾದನ ಮಾಡಿದರು.
ಉನ್ನತಾಸನದಲ್ಲಿ ಭೃಗುಮಹರ್ಷಿಯು ಉಪಸ್ಥಿತನಾಗುತ್ತಿದ್ದಂತೆಯೆ ಸಭೆಯಲ್ಲಿ ಗಂಭೀರ ಮೌನ ನೆಲೆಸಿತು. ಎಂದಿನಂತೆ ಆಧ್ಯಕ್ಷತೆ ವಹಿಸಿದ್ದ ಕಶ್ಯಪ ಋಷಿಗಳು ಮೊದಲು ಸಭೆಯನ್ನುದ್ದೇಶಿಸಿ ಹೇಳಿದರು-
ಭೃಗು ಮಹರ್ಷಿಗಳು ನಮ್ಮೆಲ್ಲರ ಅಪೇಕ್ಷೆಯ ಮೇರೆಗೆ ತ್ರಿಮೂರ್ತಿಗಳನ್ನು ಸಂದರ್ಶಿಸಿ ಬಂದಿದ್ದಾರೆ. ಅವರನ್ನು ಪರೀಕ್ಷಿಸಿ ಅದೇನು ಸಂದೇಶ ತಂದಿದ್ದಾರೆ ಎಂಬುದನ್ನು ನಾವೆಲ್ಲರೂ ಈಗ ಆಲಿಸೋಣ.”ಎಂದರು.
ಸಭೆಯ ಗಾಂಭೀರ್ಯವು ಮತ್ತೂ ಹೆಚ್ಚಿತ್ತು. ಭೃಗು ಮಹರ್ಷಿಯು ತಮ್ಮ ಅಸ್ಖಲಿತ ಶೈಲಿಯಿಂದ ಹೇಳಲಾರಂಭಿಸಿದರು-


“ಪ್ರಿಯ ತಪೋಧನರೇ, ಸರ್ವಜನ ಹಿತ ಚಿಂತಕರೇ,
ಮಹರ್ಷಿಗಳ ಮಹೋನ್ನತ ಆಕಾಂಕ್ಷೆಯೆಂದರೆ ಜಗತ್ತಿನಲ್ಲಿ ದುಃಖ ತಪ್ತ ಹೃದಯಗಳ ಕಷ್ಟಗಳನ್ನು ನೀಗಿಸುವುದೇ ಆಗಿದೆಯಲ್ಲವೇ? ಜಗತ್ತಿನಲ್ಲಿ ಯಾರು ಸರ್ವಶ್ರೇಷ್ಠರು? ಅಂಥವರು ಯಾರೂ ಇಲ್ಲವೆನ್ನಲಾಗದು. ಜಗತ್ತನ್ನು ಆಳುವ ಯಾರೋ ಒಬ್ಬನಿರಲೇಬೇಕು. ಆತನಾರು? ಎಂಬುದು ನಮ್ಮೆಲ್ಲರಲ್ಲೂ ಅರಿವಾಗುವುದೇ ಬದುಕಿನ ಶೋಧನೆ. ಇಂತಹ ಶೋಧವೊಂದು ಅಂತಃಸಾಕ್ಷಿಯಿಂದಲೇ ನಡೆಯಬೇಕಾಗುವುದು. ಆಗಲೇ ಜಗತ್ತಿನ ಏಕೈಕ ಶಕ್ತಿಯ ಸಾಕ್ಷಾತ್ಕಾರವಾಗುವುದು. ಆ ಸತ್ ಶಕ್ತಿಗೇ ನಮ್ಮೆಲ್ಲರ ಕ್ರಿಯೆಗಳೂ ಪ್ರೀತ್ಯರ್ಥವೆನಿಸುವುದೇ ನಿತ್ಯ ಬದುಕಿನ ಗುರಿಯೂ ಆಗುವುದು. ಹೀಗೆ ಬದುಕಿನಲ್ಲಿ ನಮ್ಮೊಳಗೇ ನಡೆಯುವ ಜ್ಞಾನಯಜ್ಞದಲ್ಲಿ ನಮ್ಮಲ್ಲಿರಬಹುದಾದ ಅಹಂಕಾರವೂ ಅಳಿಯುವುದು. ಸನ್ಮಾರ್ಗಕ್ಕೆ ಭಗವತ್ ಪ್ರೇರಣೆಯುಂಟಾಗುವುದು....

ಬ್ರಹ್ಮಸತ್ಯ, ಜಗನ್ಮಿಥ್ಯ ಎನ್ನುತ್ತದೆ ವೇದ. ಜಗತ್ತಿನ ಸ್ಥಿರತೆಯಲ್ಲಿ ಸಾತ್ವಿಕ ಶಕ್ತಿಯೊಂದೇ ಸತ್ಯ. ಅದೇ ನಿತ್ಯವೂ ಸಾತ್ವಿಕ ಸಂಪತ್ತಿಗೆ ಕಾರಣ. ಇಂದು ನಾವು ಮಾಡುವ ಯಜ್ಞದಲ್ಲಿ ಕೊಡುವ ಹವಿರ್ಭಾಗವನ್ನು ಸ್ವೀಕರಿಸಲು ಯಾವೊಬ್ಬ ದೇವನು ಶ್ರೇಷ್ಠನೋ, ಆದೇವನೇ ಈ ಜಗದ ಅಸ್ತಿತ್ವ ಪ್ರತಿಪಾದಕನೂ, ಸಾತ್ವಿಕ ಸ್ವರೂಪನೂ ಹೌದು. ಆತನೇ ಸತ್ವಗುಣ ಸಂಪನ್ನನಾದ ಶ್ರೀಹರಿ ಸರ್ವೋತ್ತಮನು. ಆ ದೇವನಿಗೆ ಗೌರವ ಪೂಜೆಯು. ಅದೇ ಈ ಮಹಾಯಜ್ಞದ ಧ್ಯೇಯವೂ. ನಾವು ಭಕ್ತಿಭಾವದಿಂದ ಯಜ್ಞಫಲಾರ್ಪಣೆ, ದ್ರವ್ಯತ್ಯಾಗದೊಂದಿಗೇ ಕ್ಷುದ್ರ ಬಯಕೆಗಳ ವರ್ಜನೆ ಮಾಡುವುದು,ಈ ಜಗತ್ತಿನಲ್ಲಿ ತೀರ ಕನಿಷ್ಠನಿಗೂ ಜ್ಞಾನೋದಯವಾಗಲೆಂದೇ ನಾವೆಲ್ಲರೂ ಹಾರೈಸುವುದು.

ಯಜ್ಞಕಾಲದ ವಿಧಿ ವಿಧಾನಗಳಲ್ಲಿ ಕೆಲವಾದರೂ ಕ್ಷುಲ್ಲಕವೆನಿಸಬಹುದು. ಎಂದಿಗೂ “ದೇಶ ಬಂಧ ಚಿತ್ತಸ್ಯ ಧಾರಣಂ” ಅಂದರೆ, ದೇಶ-ಕಾಲ ಪರಿಮಿತಿ ಮೀರಿ ನಮ್ಮ ಮನಸ್ಸನ್ನು ನಿಲ್ಲಿಸುವುದಾಗಬೇಕಷ್ಟೇ. ಆಗ ಮಾತ್ರ ನಮ್ಮ ಕ್ರಿಯಾಶೀಲ ಸಂಕಲ್ಪಗಳು ಔಚಿತ್ಯಪೂರ್ಣವಾಗುವುವು. ನಮ್ಮ ಪ್ರಾಚೀನ ಧಾರ್ಮಿಕ ಪರಿಕಲ್ಪನೆಗಳೇ ಅನನ್ಯ. ಅವುಗಳಲ್ಲಿ ಶ್ರದ್ಧೆ, ಭಕ್ತಿ, ದಯೆ, ದಾನ ಎಲ್ಲವೂ ಆ ಪರಮಾತ್ಮನ(ಪರಮಾಪ್ತನ) ತೃಪ್ತಿಗಾಗಿಯೆ. ಲೋಕಕಲ್ಯಾಣಕ್ಕಾಗಿಯೆ ಎಂಬ ಉದಾತ್ತ ಭಾವನೆಗಳೇ ಇವೆ. ಎಲ್ಲ ಕಾಲಕ್ಕೂ ಸಾತ್ವಿಕ ಸಾಧನೆಗಳಲ್ಲಿ ಮಾತ್ರ ಸರ್ವತ್ರ ಸಿದ್ಧಿಯು ಪ್ರಾಪ್ತವಾಗುವುದು. ಅಂತೆಯೆ, ಸತ್ವಗುಣ-ಸ್ವಭಾವಗಳಲ್ಲಿ ಸರ್ವತ್ರ ಜಯವೂ ಲಭಿಸುವುದು. ಇದೇ ಈ ಜಗದ ನಿತ್ಯನಿರಂತರ ನೀತಿ ಮಾರ್ಗವೆನಿಸಿರುವುದು.

“ಸಂತಲೋಕದ ಪ್ರತಿನಿಧಿಗಳೇ, ಕಲಿಯುಗದಲ್ಲೊಂದು ಅಂತಹದೊಂದು ಚಿರಂತನವಾದ ಸಂದೇಶ ನೀಡಲಿಕ್ಕಾಗಿಯೆ ಶ್ರೀಹರಿಯು ಶ್ರೀನಿವಾಸನಾಗಿ ಧರೆಗಿಳಿದು ಬರಲಿರುವನು. ಆ ದೇವನ ಕಲ್ಯಾಣಕಾರ್ಯದಲ್ಲಿ ಭೂಲೋಕವಾಸಿಗಳೆಲ್ಲರೂ ಭಾಗಿಗಳೇ.. ಅಂತೆಯೆ, ಈ ಮಹಾಯಜ್ಞವು ಸಕಲರಿಗೂ ಸನ್ಮಂಗಳವನ್ನುಂಟು ಮಾಡಲೆಂಬ ಸದುದ್ದೇಶದಿಂದಲೇ ಮಾಡಿ ಕೃತಾರ್ಥರಾಗೋಣ.” ಎಂದು ಭೃಗುಮಹರ್ಷಿಗಳು ತಮ್ಮ ಪುಟ್ಟ ಪ್ರವಚನವನ್ನು ಮುಗಿಸಿದಾಗ ಅದು ತುಂಬ ಪ್ರಭಾವ ಬೀರಿತ್ತು. ಸಭೆಯಲ್ಲೆಲ್ಲ ಕರತಾಡನದಿಂದ ಹರ್ಷೋದ್ಗಾರವಾಯಿತು.
ನಂತರ, ಮಹಾಯಜ್ಞವನ್ನು ನೆರವೇರಿಸುವ ಸಂಭ್ರಮಗಳು ಸಾಂಗವಾಗಿಯೆ ಸಾಗಿದ್ದವು.

Friday, September 08, 2006

ಸಂಚಿಕೆ-13.ಜಗದೇಕ ಅಸ್ತಿತ್ವಶಕ್ತಿ - ಶ್ರೀಹರಿಯ ಸಂದೇಶ

ವೈಕುಂಠ ದರ್ಶನ ಮಾಡಿಯೆ ತಿಳಿಯಬೇಕು. ಅಲ್ಲಿನ ಸಪ್ತದ್ವಾರಗಳು,ದ್ವಾರಪಾಲಕರು, ಶೇಷಶಯನನ ಶಯ್ಯಾಗೃಹ, ಸುತ್ತೆಲ್ಲ ಕ್ಷೀರಸಾಗರ, ಯೋಗ ನಿದ್ರೆಯಲ್ಲಿಯೂ ಆ ಮಹಾವಿಷ್ಣುವಿನ ಮಂದಸ್ಮಿತ ವದನ ಬಿತ್ತರಿಸುವ ಮೌನ ಧ್ವನಿಗಳು ಗಂಭೀರ ಅಲೆಗಳೋಪಾದಿಯಲ್ಲಿ ದಿಕ್ ತಟಗಳನ್ನು ತಟ್ಟುತ್ತಿವೆಯಲ್ಲ; ಆ ನಿಗೂಢಾರ್ಥಗಳು! ಜಗತ್ತಿನ ನಶ್ವರ ಜೀವರಾಶಿಗಳಿಗೆ ಅದೇನು ಸುಂದರ ನೋಟವೋ, ಅದ್ಯಾವ ಅಮೃತ ಘಳಿಗೆಯಲಿ ಕಣ್ತೆರೆದು ಕೃಪಾದೃಷ್ಟಿ ಬೀರಲಿರುವುದೋ ಆ ನಯನ ಮನೋಹರ ಸ್ವರೂಪವು!

ಸೃಷ್ಟಿಯಾದ್ಯಂತದಲಿ ಏನೆಲ್ಲವೂ ನಿಗಮಗೋಚರವೆನಿಸಿದರೂ ಆ ಚಿತ್‌ ಶಕ್ತಿಯ ಕ್ರಿಯೆಗಳು ಮುಂದೆ ಹೇಗಿರುತ್ತವೆಂಬುದು ಕೆಲವೊಮ್ಮೆಅವ್ಯಕ್ತ ಅಗೋಚರವೇ. ತನ್ನ ವಲ್ಲಭನಾದ ಶ್ರೀಹರಿಯ ಹೃದಯ ಕಮಲದಲ್ಲಿ ಪ್ರಾಣವನ್ನೇ ಇಟ್ಟಿರುವ ಮಹಾಲಕ್ಷ್ಮಿಯು ಇಲ್ಲಿ ಸಂಪ್ರೀತಳಾಗಿರುವಳು. ಚಿರಂತನ ಸೌಭಾಗ್ಯ ಸಂಪತ್ತುಗಳು ಹೇಗೆ ಒದಗಿ ಬರುತ್ತವೆಂಬುದಕ್ಕೆ ಸಾಕ್ಷೀಭಾವವನ್ನೇ ನುಡಿಯುತ್ತಿರುವಳು. ಸಾನುರಾಗದಿಂದ ಶ್ರೀಹರಿಯ ಸೇವೆ ತಾನೆ ಮುದದಿಂದ ಮಾಡುತ್ತಿರುವಳು. ಏನು ಧನ್ಯಳೋ ಲಕ್ಷ್ಮಿ; ಎಂಥ ಮಾನ್ಯಳೋ...!! ವೈಕುಂಠದ ಈ ಸುಖೀ ವೈಭವ ಯಾರಿಗೆ ತಾನೆ ಮೆಚ್ಚುಗೆಯಾಗುವುದಿಲ್ಲ..

ಇದ್ಯಾವುದರ ಪರಿವೆಯೂ ಇಲ್ಲದೇನೆ ಭೃಗು ಮಹರ್ಷಿ ಬಿರುಗಾಳಿಯಂತೆ ಬರುತ್ತಿರುವನು. ಆತನ ತಲೆಯಲ್ಲಿ ತಿರುಗುತ್ತಿರುವುವು;ಸತ್ಯಲೋಕ ಮತ್ತು ಕೈಲಾಸ ಪರ್ವತದಲ್ಲಿ ನಡೆದ ಕಹಿ ಘಟನೆಗಳೇ. ಬ್ರಹ್ಮ, ಮಹೇಶ್ವರರಿಬ್ಬರೂ ತನಗೆ ಮಖಭಂಗ ಮಾಡಿದರು. ತಮ್ಮ ರಜೋಗುಣ ಮತ್ತು ತಮೋಗುಣಗಳನ್ನೆ ತೋರಿ ಸಾತ್ವಿಕ ಶಕ್ತಿಗೆ ಅಪಚಾರ ಮಾಡಿಬಿಟ್ಟರು. ಇನ್ನೇನು! ವೈಕುಂಠದ ಚಿತ್ರಣವೂ ಬೇರೆ ಇರಲಾರದು. ಇಡೀ ಜಗತ್ತೇ ಇಂದು ಪರಮಪಾಪಿಗಳಿಂದ ತುಂಬಿದೆ. ಅನ್ಯಾಯ, ಲೋಭ, ಮೋಹ, ಮದ, ಮಾತ್ಸರ್ಯ, ಹಿಂಸೆ-ಕ್ರೌರ್ಯಗಳಿಂದ ತತ್ತರಿಸುತ್ತಿದೆ. ಅದರ ಬಿಸಿ ಈ ಮೂರುಲೋಕಗಳಿಗೂ ತಟ್ಟಿಲ್ಲವೆಂದರೇನು? ತ್ರಿಮೂರ್ತಿಗಳೂ ಅವುಗಳಿಂದ ಹೊರತಾಗಲಿಲ್ಲವೆಂದರೇನು? ಈಗ ಪರೀಕ್ಷೆಗೆ ಉಳಿದಿರುವವನು ಮಹಾವಿಷ್ಣು ಒಬ್ಬನೇ. ಈ ಸಮಯದಲ್ಲಿ ಅದೇನು ಧ್ಯಾನದಲ್ಲಿರುವನೋ. ಹೀಗೇ ಚಿಂತಿಸುತ್ತ ಭೃಗು ಮಹರ್ಷಿಯು ದಾವಾನಿಲದಂತೆ ಯಾರಿಗೂ ಬೆದರದೇ ವೈಕುಂಠದ ದ್ವಾರಗಳನ್ನೆಲ್ಲ ದಾಟಿ ಬಂದನು. ಶೇಷಶಯನನ ಶಯ್ಯಾಗೃಹವನ್ನು ಪ್ರವೇಶಿಸಿದ್ದನು.

ನೋಡುತ್ತಾನೆ! ಇಡೀ ಜಗತ್ತಿನಲ್ಲಿ ಅಸುರೀ ಶಕ್ತಿಗಳ ದ್ಯೋತಕವಾಗಿಯೆ ಸಾತ್ವಿಕ-ಜನಸಾಮಾನ್ಯರು ಪಡಬಾರದ ಕಷ್ಟಗಳನ್ನು ಪಡುತ್ತಿದ್ದಾರೆ. ಸುತ್ತೆಲ್ಲ ಪರಿಸರನಾಶ, ಜನರ ನಡುವೆ ಕಲುಷಿತ ವಾತಾವರಣವೇರ್ಪಟ್ಟಿದೆ. ಇಲ್ಲಿ ಲೋಕಪಾಲಕನೂ ದೀನ ರಕ್ಷಕನೂ ಆದ ಸರ್ವೇಶನಿಗೆ(ಯೋಗ?)ನಿದ್ರೆಯೆ; ದಿವ್ಯ ನಿರ್ಲಕ್ಷ್ಯದ ನಗೆಯೇ. ಛೇ,ಇದೇನೀ ಪರಿಹಾಸವು! ಭೃಗುವಿನ ಮೈನರ-ನರಗಳೆಲ್ಲವೂ ಸೆಟೆದುಕೊಂಡವು. ಈ ಜಗದೋದ್ದಾರಕನು ಜಾಗತಿಕ ಜಗತ್ತಿಗಾಗಿ ಮಾಡುವುದೇನೂ ಉಳಿದಿಲ್ಲವೇ?

ಆ ಘಳಿಗೆಯಲ್ಲಿ ಆ ಭೃಗುವು ಭೃಗುವಾಗಿರಲಿಲ್ಲ;ಅನಿತ್ಯವೂ ಅಲೌಕಿಕವೂ ಆದ ಒಂದು ಅಮೋಘ ಪ್ರೇರಣೆಯಿಂದ ಒಡಗೂಡಿದವನೇ,
“ಓಹ್, ಎಲ್ಲಿ ಹೋಯಿತು;ಜಗತ್ ಕಲ್ಯಾಣ ಶಕ್ತಿ? ಈ ಶ್ರೀಹರಿಯ ಹೃದಯದಲ್ಲಿ ಅಡಗಿಕುಳಿತಿರುವುದೋ....” ಎಂಬ ಚೀತ್ಕಾರದೊಂದಿಗೇ ತನಗರಿವಿಲ್ಲದವನಂತೆಯೆ, ಭೃಗುವು ತನ್ನ ಬಲಗಾಲಿನಿಂದ ಮಹಾವಿಷ್ಣುವಿನ ವಕ್ಷಸ್ಥಳಕ್ಕೆ ಒದೆದನು.


ಆ ಕ್ಷಣದಲ್ಲಿ ಪತಿದೇವನಿಗೆ ಕಾಲೊತ್ತುತ್ತಲಿದ್ದ ಮಹಾಲಕ್ಷ್ಮಿಯು ದಿಗ್ಗನೆದ್ದು, ದಿಗ್ಬ್ರಾಂತಳಾದಳು. ಎದ್ದು ನಿಂತ ಮಹಾವಿಷ್ಣುವು ಏನೂ ಆಗದವನಂತೆಯೆ ಪ್ರಶಾಂತ ಚಿತ್ತನಾಗಿಯೆ ಇದ್ದನು! ಅಷ್ಟೇ ಅಲ್ಲ; ವಿನಯದಿಂದ ಬಾಗಿ ಆ ಬ್ರಹ್ಮರ್ಷಿಗೆ ವಂದಿಸಿದನು.

ಮಹಾಲಕ್ಷ್ಮಿಯು ಸುಮ್ಮನಾಗಲಿಲ್ಲ; ತಾನು ಪ್ರಾಣವನ್ನೇ ಇಟ್ಟಿರುವ ತನ್ನ ಸ್ವಾಮಿಯ ವಕ್ಷಸ್ಥಳಕ್ಕೆ ಪಾದಾಘಾತವಾದುದನ್ನು ಸಹಿಸದಾದಳು.
“ಸ್ವಾಮೀ, ಏನಿದೇ ಅಪಚಾರ? ಈತನು ಬ್ರಾಹ್ಮಣನೂ ತಪಸ್ವಿಯೂ ಬ್ರಹ್ಮಜ್ಞಾನಿಯೂ ಆದರೇನು? ನೀವು ಈತನ ದುಷ್ಕೃತ್ಯವನ್ನು ಮನ್ನಿಸಿ ವಂದಿಸುವುದೆಂದರೇನು? ಹ್ಞೂಂ, ಮೂರುಲೋಕಗಳೂ ನಿಮ್ಮ ತಾಳ್ಮೆಯನ್ನೇ ದೌರ್ಬಲ್ಯವೆಂದು ತಿಳಿದೀತು. ನನ್ನ ಹೃದಯ ವಲ್ಲಭರು ನೀವು. ನಾನು ಇದನ್ನು ಹೇಗೆ ಸಹಿಸಲಿ ಸ್ವಾಮಿ.” ಮಹಾಲಕ್ಷ್ಮಿ ಕನಲಿದಳು.

“ಪ್ರಿಯೆ, ಈ ಸ್ವರ್ಗದ ಸತ್ ಸಂಪ್ರದಾಯವೂ ನೀತಿ ಪ್ರಸಾರವು ಭಕ್ತರೊಡನೆ ನನ್ನ ಸಂಬಂಧವೂ ನಿನಗೇ ಅರ್ಥವಾಗದೇನು? ಸುಮ್ಮನೆ ಕೋಪಿಸಿಕೊಂಡರೆ ಹೇಗೆ? ಕೆಲ ಸಂದರ್ಭದಲ್ಲಿ ವರ್ತನೆಯಂತೆಯೆ ಭಕ್ತನ ಇಚ್ಛೆಯೂ ಇರಲಾರದಲ್ಲ....? ಶಾಂತಳಾಗು ದೇವಿ”
ಮಹಾವಿಷ್ಣುವು ಸಮಾಧಾನಿಸಿದರೂ ಲಕ್ಷ್ಮಿಯು ಪ್ರಸನ್ನಳಾಗಲಿಲ್ಲ.

“ಸ್ವಾಮಿ, ನಿಮ್ಮ ಸಹೃದಯವನ್ನು ಸದ್ಗುಣವನ್ನೂ ತಿಳಿಯದೇ ಮಾಡಿದ ಅಪಚಾರವೇ ಇದು?”

“ದೇವಿ, ಲೋಕದಲ್ಲಿ ಹೀಗೆ ನಡೆಯುವುದರಲ್ಲೂ ಕಾರ್ಯಕಾರಣ ಸಂಬಂಧವಿರುವುದು. ಅದು ನಿನಗೆ ತಿಳಿಯದೇನು?”

“ಸ್ವಾಮಿ, ನೀವು ಏನೆ ಹೇಳಿ, ನಾನು ಇದನ್ನು ಸಹಿಸಲಾರೆ. ನಿಮಗೆ ಅಪಚಾರವಾದೆಡೆ ಕ್ಷಣವೂ ಇರಲಾರೆ. .. ಅಲ್ಲ, ತ್ರಿಮೂರ್ತಿಗಳಲ್ಲಿ ಯಾರು ಸಾತ್ವಿಕ ಶಕ್ತಿಯ ಹಿರಿಮೆ ತೋರಬಲ್ಲರೆಂಬುದನ್ನು ಪರೀಕ್ಷಿಲು, ತಾನೆ ಮಹಾಸಮರ್ಥನೆಂದು ಬೀಗುತ್ತ ಬಂದ ಈ ಭೃಗುವು ನಿಮ್ಮ ವಕ್ಷಸ್ಥಳಕ್ಕೆ ಒದೆಯುವುದೆಂದರೇನು? ಪರೀಕ್ಷಿಲು ಬೇರೆ ರೀತಿ ನೀತಿಯೊಂದು ಇರಬೇಡವೇ...? “

“ಪ್ರಿಯೆ, ಆತ ಹಾಗೆ ಮಾಡಬೇಕೆಂಬುದೇ ವಿಧಿನಿಯಮವಾಗಿರುವಾಗ ತಡೆಯಲು ನಾವ್ಯಾರು ಹೇಳು..?”

“ಇಲ್ಲ ಪ್ರಭು ನಾನು ಸುಮ್ಮನೆ ಬಿಡಲಾರೆ, ಇಂದಿನಿಂದ ಭೂಲೋಕದಲ್ಲಿ ಇಂಥ ದುರಹಂಕಾರೀ ಬ್ರಾಹ್ಮಣ ಪ್ರಜ್ಞರಾರೇ ಇರಲಿ, ಅವರು ತಮ್ಮ ಬ್ರಹ್ಮ ತೇಜಸ್ಸನ್ನು ಕಳೆದುಕೊಳ್ಳಲಿ. ಹೀಗೆ ತಮ್ಮ ಸ್ವಯಂಕೃತಾಪರಾಧದಿಂದಲೇ ಸ್ವತಃ ನೋವು ಅವಮಾನ ಅನುಭವಿಸತ್ತ, ತಾವು ಕಲಿತ ವಿದ್ಯೆಯನ್ನು ಕೇವಲ ಧನದಾಸೆಗಾಗಿಯೆ ಮಾರಿಕೊಂಡು ಜೀವಿಸುವಂತಾಗಲಿ” ಎಂದು ಶಪಿಸಿದಳಾ ಮಹಾಲಕ್ಷ್ಮಿಯು, ಸರಸರನೆ ವೈಕುಂಠದಿಂದ ಹೊರಟೇ ಬಿಟ್ಟಳು.

ಮಹಾವಿಷ್ಣುವು “ದೇವಿ, ಹೋಗ ಬೇಡ ನಿಲ್ಲು; ದೇವಿ ಶಾಂತಳಾಗು” ಎಂದು ಪರಿಪರಿಯಾಗಿ ಕೇಳಿಕೊಂಡರೂ ನಿಲ್ಲಲಾರದಾದಳು ಆಕೆ.

ಭೃಗುಮಹರ್ಷಿಯು ಅದಾಗಲೆ ದಿಗ್ಮೂಢನೆ ಆಗಿಬಿಟ್ಟಿದ್ದಾನೆ! ಗರುಡಗಂಭದಂತೆ ನಿಂತಿದ್ದಾನೆ! ಅವನ ಕಂಗಳಲ್ಲಿ ಕ್ರೋಧಾಗ್ನಿ ಇಳಿ ಮುಖವಾಗತೊಡಗಿದೆ..

“ಓ ಮಹಾತಪಸ್ವಿಯೆ, ಶಾಂತನಾಗು, ನನ್ನ ವಜ್ರಕಾಯಕ್ಕೆ ತಗುಲಿದ ನಿಮ್ಮ ಮೃದು ಪಾದಕ್ಕೆಷ್ಟು ನೋವಾಯಿತೋ..” ಎಂದು ಆತನ ಪಾದಗಳನ್ನು ಹಿಡಿದನು.ಈ ದಿನ ವೈಕುಂಠವು ಪಾವನವಾಯಿತು. ಇಲ್ಲಿ ಎಲ್ಲರ ಮೋಕ್ಷಲಕ್ಷ್ಮಿಯೆ ಅವತರಿಸಿದ್ದಾಳೆ...” ಎಂದು ನಸುನಗೆಯಲ್ಲೇ ಮಹಾವಿಷ್ಣವು ಹೇಳುತ್ತಲೇ ಮೆಲ್ಲನೆ ಭೃಗುವಿನ ಬಲಗಾಲಿನ ಜ್ಞಾನನೇತ್ರವನ್ನು ಚಿವುಟಿಹಾಕಿಬಿಟ್ಟಿದ್ದನು.

ಮಹಾವಿಷ್ಣವು ಭೃಗುವಿನ ಕಾಲು ಹಿಡಿದಾಗಲೆ ಮತ್ತೆ ಮಹಾಲಕ್ಷ್ಮಿಯು ಹಿಂದಿರುಗಿ ನೋಡದೇನೆ ವೈಕುಂಠವನ್ನು ತೊರೆದು ಹೊರಟೇ ಹೋಗಿದ್ದಳು.

“ಓ... ಹಾಯ್, ಶ್ರೀಹರಿ ಜಗತ್ ರಕ್ಷಕನೇ ಕಾಪಾಡು...” ತನ್ನ ಜ್ಞಾನನೇತ್ರವನ್ನು(ಅಲ್ಲ ಅಹಂಭಾವದ ನೇತ್ರವನ್ನು) ಕಳೆದುಕೊಂಡಾಕ್ಷಣವೆ ಭೃಗುವು ಗರ್ವಭಂಗ ಹೊಂದಿದನು; ನೋವಿನಿಂದ ನರಳಿದನು.
“ಓಹ್, ಮಹಾನ್ ಸಿದ್ಧಿಪುರುಷನೆ ನೀನು ಬಂದ ಕಾರ್ಯ ಈಗ ಕೈಗೂಡಿತೇ....” ಹೀಗೆ ಶಾಂತಮೂರ್ತಿಯಾಗಿ ಮಹಾವಿಷ್ಣುವು ಕೇಳಿದಾಗ,
ತನ್ನೊಳಗಿನ ರಜೋ ಮತ್ತು ತಮೋಗುಣಗಳ ಮೂಲ ಬೇರನ್ನೇ ಚಿವುಟಿಸಿಕೊಂಡಿದ್ದ ಭೃಗುಮಹರ್ಷಿಯ ಎರಡೂ ಕಣ್ಣಗಳು ಇದೀಗ ತುಂಬಿ ಬಂದಿದ್ದವು. ಹೊಳೆಯತೊಡಗಿದವು.


“ಹೇ! ಶ್ರೀಹರಿ, ನಿನ್ನನ್ನು ಪರೀಕ್ಷಿಸಲೆಂದೇ ಬಂದು ನಾನೇ ಸತಃ ಸತ್ವಪರೀಕ್ಷೆಗೊಳಗಾದೆ;ಪರಿಶುದ್ಧನಾದೆ. ಆದರೆ, ಓ ದೇವ, ನಿನ್ನನ್ನೇ ಧರ್ಮಸಂಕಟದಲ್ಲಿ ಸಿಲುಕಿಸಿಬಿಟ್ಟೆ... ಶ್ರೀಲಕ್ಷ್ಮಿಯನ್ನೆ ನಿನ್ನಿಂದ ಅಗಲಿಸಿದ ಹೀನ ಕಾರ್ಯ ಜರುಗಿಹೋಯಿತೇ ನನ್ನಿಂದ... ನನ್ನನ್ನು ಕ್ಷಮಿಸಿ ಬಿಡು ಓ ಕೃಪಾಳು ಎಂದು ಹೇಗೆ ತಾನೆ ಕೇಳಲಿ...?”ಭಗವು ಎರಡು ಕೈಗಳನ್ನು ಜೋಡಿಸಿ ಅತ್ಯಂತ ಕಳಕಳಿಯಿಂದ ಪ್ರಾರ್ಥಿಸಿ ಸಾಷ್ಟಾಂಗ ಪ್ರಣಾಮವನ್ನೇ ಮಾಡಿದನು.

“ಭೃಗು ಋಷಿ, ಇದೆಲ್ಲವೂ ಒಂದು ಸತ್ ಸಂಕಲ್ಪ-ಸಂದೇಶ ಸಾರಲಿಕ್ಕಾಗಿಯೆ ಜರುಗಿದೆಯೆಂದು ತಿಳಿ. ನನಗೆ ಒಂದೊಂದು ಅವತಾರ ವಿಶೇಷಗಳಲ್ಲೂ ಸಂಕಟಗಳು ಇದ್ದದ್ದೇ ತಾನೆ” ಮಹಾವಿಷ್ಣುವು ಮತ್ತೆ ನಗೆಬೀರಿದನು.

“ಓ ದೇವ ದೇವ! ಜಗನ್ನಿಯಾಮಕ, ನಾವು ಋಷಿಗಳೆಲ್ಲರೂ ಭೂಲೋಕದಲ್ಲಿ ಲೋಕಕಲ್ಯಾಣಾರ್ಥವಾಗಿಯೆ ಒಂದು ಮಹಾಯಜ್ಞವನ್ನು ಮಾಡುತ್ತಿರುವೆವು. ಅದು ಸರ್ವಾಂತರ್ಯಾಮಿಯಾದ ನಿನಗೆ ತಿಳಿಯದೇ... ಆ ಯಜ್ಞಫಲವನ್ನು ಓ ಸಾತ್ವಿಕ ಪ್ರಭುವೆ, ನಿನಗೇ ಅರ್ಪಣೆ ಮಾಡಲಿದ್ದೇವೆ. ನೀನು ದಯಮಾಡಿಸಬೇಕು” ಎಂದು ಭೃಗುಮಹರ್ಷಿಯು ವಿನಮ್ರತೆಯಿಂದ ಬೇಡಿಕೊಂಡನು.

ಹಸನ್ಮುಖನಾಗಿ ಅರ್ಥಗರ್ಭಿತನೋಟವೊಂದನ್ನು ಬೀರಿದ ಮಹಾವಿಷ್ಟುವು ಹೀಗೆ ಹೇಳಿದನು-
“ಹಾಗೇ ಆಗಲಿ ಮಹರ್ಷಿ! ಆದರೆ, ನೀವು ಋಷಿಗಳೆಲ್ಲರೂ ಸೇರಿ ತ್ಯಾಗಭಾವನೆಯಿಂದಲೆ ಪ್ರದಾನ ಮಾಡಲಿರುವ ಯಜ್ಞಫಲವು ಜಗದೊಡಲಲಿರುವ ಏಕೈಕ ಸಾತ್ವಿಕಶಕ್ತಿಗೇ ಸೇರುವುದೆಂಬುದನ್ನು ಮರೆಯದಿರಿ. ಅಂತಹ ಸಾತ್ವಿಕ ಸಂಕಲ್ಪದ ಹಿಂದೆ ನಾನು ಮಾತ್ರವಲ್ಲ ಪರಶಿವ-ಪರಬ್ರಹ್ಮರೂ ಕೂಡ ಸದಾ ಇರುವರು. ಅಂತಹ ಯಾವುದೇ ಸದುದ್ದೇಶಯುತವಾದ ಕಾರ್ಯಗಳು ಸತತವಾಗಿ ಸಾಗಲಿ.”
ಹೀಗೆ ಮಹಾವಿಷ್ಣವು, ಭೃಗುಋಷಿಗೆ ಜಗದೈಕ ಅಸ್ತಿತ್ವಶಕ್ತಿಯ ದರ್ಶನಮಾಡಿಸಿ,ಆಶೀರ್ವದಿಸಿದನು. ಮುಂದೆ ಭೂಲೋಕದಲ್ಲಿ ನಡೆಯಲಿರುವ ಯಜ್ಞಕ್ಕೆ ಮಹಾ ಸಂದೇಶವೊಂದನ್ನೂ ನೀಡಿ ಕಳುಹಿಸಿಕೊಟ್ಟನು.

-ಎಚ್.ಶಿವರಾಂ 8 ಸೆಪ್ಟೆಂಬರ್, 2006

Thursday, August 31, 2006

ಸಂಚಿಕೆ-12.ಲಯಕ್ಕೆಕಾರಣನು ಶಿವನೆಂದರೆ ಶುಭಪ್ರದನು

ಎಲ್ಲೆಲ್ಲೂ ಬೆಳ್ಳಿಯ ಬೆಡಗು! ಹೊಂಬಿಸಿಲಿನ ಬೆಳಗು! ಕೈಲಾಸ ಪರ್ವತದ ಹಿಮಗಿರಿ ಶಿಖರಗಳಲಿ ಶಿವಗುಣ ಸಂಕೀರ್ತನ ಕೇಳಿ ಬರುತ್ತಿತ್ತು. ನಂದೀಶ್ವರ, ಚಂಡೀಶ್ವರರಾದಿಯಾಗಿ ಪ್ರಮುಖ ಗಣರೆಲ್ಲರೂ ಶಿವನಾಮ ಸ್ಮರಣೆಯಲ್ಲಿ ಮಗ್ನರಾಗಿದ್ದರು. ಸುತ್ತಮುತ್ತಲೂ ಎತ್ತೆತ್ತಲೂ ಶಿವನ ಗುಣಗಾನ. ಶುಭಪ್ರದನ ಶ್ಲಾಘನೆ. ಸುಶ್ರ್ಯಾವ್ಯ ಪಂಚಾಕ್ಷರೀ ಮಂತ್ರ. ಸುಮಧುರ ಪ್ರಣವನಾದ ಕರ್ಣಾನಂದಕರವಾಗಿತ್ತು. ಆಗಷ್ಟೇ ಬ್ರಹ್ಮಲೋಕದಲ್ಲಿ ಕೋಪಗೊಂಡು ಇಲ್ಲಿಗೆ ಬಿರುಸಾಗಿಯೆ ಹೊರಟು ಬಂದಿದ್ದ ಭೃಗುಮಹರ್ಷಿಗೆ ಸಹನೆಯಾಗಲಿಲ್ಲ. ಸತ್ಯಸುಂದರ ರೂಪಿ ಶಿವನ ಸ್ತುತಿಗಳನ್ನು ಆಲಿಸುವ ವ್ಯವಧಾನವಿರಲಿಲ್ಲ. ದ್ವಾರಪಾಲಕರು ತಡೆಯೊಡ್ಡಿದರೇನು! ಲೆಕ್ಕಿಸದೇ ಪರಮೇಶ್ವರನ ಏಕಾಂತ ಸ್ಥಳಕ್ಕೆ ಧಾವಿಸಿದ್ದನು.

ಪಾರ್ವತಿ ಪರಮೇಶ್ವರರ ಪ್ರಣಯದ ಪ್ರತಿ ಕ್ಷಣಗಳು. ಶೃಂಗಾರ ನಾಟ್ಯಲಹರಿಯ ರಾಸಲೀಲೆಗಳು, ಮದನಾಂತಕನ ಮೈಥುನದ ಭಂಗಿಗಳು, ಮದನೋದ್ದೀಪನ ಸೆಳೆಮಿಂಚಿನ ದೃಶ್ಯಗಳು. ಜಟಾಜೂಟಧರನಲ್ಲೂ ಮನ್ಮಥನನ್ನು ಮೀರಿಸು ಸೌಂದರ್ಯ. ರತಿರೂಪಿ ಭಗವತಿಯೊಡನೆ ಸರಸ ಸಲ್ಲಾಪ. ಎಲ್ಲನೋಡನೋಡುತ್ತಿದ್ದಂತೆಯೆ ವೇದಾಂತ ಕೇಸರಿ ಎನಿಸಿದ್ದ ಭೃಗುಋಷಿಯೂ ಕೂಡ ಕೆಲ ಕ್ಷಣಗಳೆ ವಿಚಲಿತನಾದ. ಥಟ್ಟನೆ ಮೈಕೊಡವಿಕೊಂಡ. ತಾನು ಬಂದ ಕೆಲಸವೇನೆಂದು ಜ್ಞಾಪಿಸಿಕೊಂಡ,
“ಮಹೇಶ್ವರ!” ಕೈಲಾಸ ಪರ್ವತವೆ ನಡುಗುವಂತೆ ಗರ್ಜಿಸಿದ. ಪಾರ್ವತಿಯೆ ಮೊದಲು ಭೃಗುವಿನತ್ತ ನಿಟ್ಟಿಸಿದಳು. ಕೂಡಲೆ ಲಜ್ಜಿತಳಾಗಿ ಶಿವನಿಂದ ತಾನೆ ದೂರ ಸರಿದಳು.

ಮೃಗ ಚರ್ಮಾಂಬರಧರ ಶಿವನ ಧ್ಯಾನಾಸಕ್ತ ನಿರಾಡಂಬರ ನಿಸ್ತಬ್ದ ಸ್ವರೂಪವೆ ಬೇರೆ. ಸುರತ ನಿರತನಾಗೆಚ್ಚೆತ್ತ ಶಿವನ ಕ್ರೋಧತಪ್ತ ಆಕ್ರೋಶವೆ ಬೇರೆಯಾಯಿತು;ತಮಂಧದಾಕ್ರೋಶವೆ ಸಿಡಿಲಂತೆ ಧಾವಿಸಿತು.

“ಹೇ ಋಷಿಯೆ! ಧರ್ಮ ಶಾಸ್ತ್ರಕೋವಿದನಾ ನೀನೂ ಅವಿವೇಕಿಯಂತೆ ವರ್ತಿಸಿ, ನನ್ನ ಏಕಾಂತ ಸ್ಥಳಕ್ಕೆ ಅತಿಕ್ರಮ ಪ್ರವೇಶಮಾಡುವುದೇ... ಇಗೋ ನೀನೀಗಲೆ ಗತಪ್ರಾಣನಾಗು” ಎಂದು ಭೃಗು ಋಷಿಯ ಮೇಲೇ ಶಿವನು ಶೂಲಾಯುಧಪಾಣಿಯಾಗಿ ಹರಿಹಾಯ್ದು ಬಂದನು.
ಶಿವನ ಆಕ್ರಮಣವನ್ನು ಭೃಗುವು ತನ್ನ ತಪಶ್ಚರ್ಯೆಯಿಂದಲೆ ತಡೆಗಟ್ಟಲೆತ್ನಿಸಿದನು. ಅದಾಗಲೆ ಪಾರ್ವತಿಯೂ ಶಿವನಿಗೆ ಅಡ್ಡ ಬಂದು ಬ್ರಹ್ಮಋಷಿಯ ಹತ್ಯೆಯಾಗುವುದನ್ನು ತಡೆದಿದ್ದಳು.

“ಹೇ ಮಹೇಶ್ವರ..! ನನ್ನಂಥ ಸರ್ವಸಂಗ ಪರಿತ್ಯಾಗಿಯಾದ ಮುನಿ ಹೀಗೆ ತುರ್ತಾಗಿ ಒಳಬಂದ ಕಾರಣವೇನೆಂದು ತಿಳಿಯದೇ ಹೋದೆಯಾ. ಭೂಲೋಕದಿಂದ ಅನೇಕ ಋಷಿಪುಂಗವರೆಲ್ಲರ ಅಪೇಕ್ಷೆಯ ಮೇರೆಗೆ ನಿನ್ನನ್ನು ಪರೀಕ್ಷೆಮಾಡಲೆಂದೇ ಬಂದವನು ನಾನು. ಕಪಾಲ ಕಮಂಡಲ ಧರನೂ, ಭಸ್ಮಸ್ವರೂಪಿಯೂ ಸ್ಮಶಾನವಿರಾಗಿಯೂ ಆದ ನೀನು ಸಾವಧಾನಿಸದೇ ಶೀಘ್ರಕೋಪಿಯಾದೆ. ಬ್ರಹ್ಮಹತ್ಯೆಯನ್ನೇ ಮಾಡಲು ಮುಂದಾದೆ. ಇದು ನಿನ್ನ ತಮೋಗುಣ ಪ್ರಭಾವವೇ, ಆದನ್ನು ನೀನು ನಿಗ್ರಹಿಸಲಾರದೇ ಮತ್ತನಾಗಿ ಮೇಲೆರಗಿ ಬಂದೆಯಲ್ಲವೇ..? ಹೇ ಶಿವನೇ ನೀನೊಬ್ಬನೇ ಸುರಸುಂದರ ಸ್ವರೂಪನೆಂದೂ ಶೃಂಗಾರ ವಿಲಾಸಿಯೆಂದೂ ತಿಳಿದೆಯೇನು? ಕ್ರೋಧತಪ್ತನಾಗಿ ಉಗ್ರರೂಪಿಯಾದೆ ಏಕೆ?... ಹೇ ಶಿವನೇ ಇಂದಿನಿಂದ ಭೂಲೋಕದಲ್ಲಿ ಜನರು ನಿನ್ನ ಈ ಸುಂದರ ರೂಪವನ್ನು ಪೂಜಿಸದಿರಲಿ. ಜನರು ನಿನ್ನನ್ನು ಲಿಂಗರೂಪಿಯಾಗಿಯೆ ಪೂಜಿಸುವಂತಾಗಲಿ” ಎಂದು ಭೃಗು ಮಹರ್ಷಿ ಶಿವನನ್ನು ಶಪಿಸಿದನು.

ಪಾರ್ವತಿ ದಿಗ್ ಭ್ರಮೆಗೊಂಡಳು.
ಏನನ್ನೂ ಪರಾಮರ್ಶಿಸಿ ನೋಡದೇನೆ ತಾನು ದುಡಿಕಿದೆನೆಂದು ಪರಶಿವನು ಪಶ್ಚಾತ್ತಾಪ ಪಡುತ್ತಿರುವಾಗ ಭೃಗುವು ಅಲ್ಲಿ ನಿಲ್ಲದೇ ದುರ್ದಾನ ತೆಗೆದುಕೊಂಡವನಂತೆ ವೈಕುಂಠದತ್ತ ನಡೆದನು.

ಹೇ...! ಬ್ರಹ್ಮರ್ಷಿ.. ಮಹಾತಪಸ್ವಿಯೇ ನಿಲ್ಲು...”ಎಂಬ ವಿಷಕಂಠ ಶಿವನ ಕೂಗು ಹಿಮಗಿರಿಗಳಿಗೆ ಅಪ್ಪಳಿಸಿತೇ ಹೊರತು ಭೃಗುವಿಗೆ ಕೇಳಿಸದಾಗಿತ್ತು.
“ಓಹ್, ಶಿವೆ ಪರಾಶಕ್ತಿ ಸ್ವರೂಪಿಣಿಯೆ ಯಾಕೆ ಹೀಗಾಯಿತು? ನೀನೆ ಇದಕ್ಕೆ ಸಮಾಧಾನ ಹೇಳಬೇಕು ದೇವಿ...” ಎಂದು ಮಹೇಶ್ವರನು ಖಿನ್ನನಾಗಿ ಮನದನ್ನೆಯನ್ನು ಕೇಳಿದನು.

ಪರಮೇಶ್ವರಿ ಮುಗುಳ್ನಕ್ಕಳು.
“ಓ ಸ್ವಾಮಿ, ನಿಮಗೆ ತಿಳಿಯದಿರುವುದೇನಿದೆ? ಸತ್ಯ ಶಿವ ಸುಂದರ ಸ್ವರೂಪಿ ನೀವು! ಹೀಗಾಗುವುದೆಂದರೆ, ಮುಂದೆ ವಿಶ್ವಕಲ್ಯಾಣಕ್ಕಾಗಿಯೆ ಯಾವುದೋ ಸತ್ಯ ಸಂದೇಶದ ಪ್ರತಿಪಾದನೆಯೆ ಆಗಲಿದೆಯೆನ್ನಿ; ಆಗಿರುವುದೆಲ್ಲ ಒಳಿತಿಗೇ ಎಂದು ತಿಳಿಯದವರೇನು ನೀವು. ಶಿವನೆಂದರೆ ಎಲ್ಲ ಮಂಗಲ ಕಾರ್ಯಗಳಿಗೂ ಶುಭಪ್ರದರು ನೀವಲ್ಲವೇ..?” ನಸು ನಗೆಯಲ್ಲೆಂದಳು ದೇವಿ ಪಾರ್ವತಿ.
“ಹಾಗೆ ವಿಶ್ವಕಲ್ಯಾಣವಾಗುವುದೇ ಆದರೆ, ನಾವೂ ಅದರಲ್ಲಿ ಭಾಗಿಗಳಾಗೋಣ ದೇವಿ” ಎಂದಿಗೂ ಪರಾತ್ಪರ ತತ್ವಕ್ಕೆ ಶರಣಾಗುವ ಶಿವನು ಪರಾಶಕ್ತಿ ಸ್ವರೂಪಿಣಿಯ ಮೆಲು ನುಡಿಗೆ ಪ್ರಸನ್ನ ಚಿತ್ತನಾದನು.
31 ಆಗಸ್ಟ್,2006

Saturday, August 26, 2006

ಸಂಚಿಕೆ-11.ಸೃಷ್ಟಿಕರ್ತನ ಸತ್ಯವೇದಗಳಿಗೆ ಅಗ್ರಪೂಜೆ

ಭೃಗುಮಹರ್ಷಿ ಬ್ರಹ್ಮನ ವಂಶದಲ್ಲೆ ಹುಟ್ಟಿದವನು. ತೇಜಸ್ಸಿನಲ್ಲೂ ಓಜಸ್ಸಿನಲ್ಲೂ ಅದ್ವಿತೀಯನು. ಅನೇಕ ವರುಷಗಳೇ ತಪಸ್ಸು ಮಾಡಿ ಸಿದ್ಧಿಪುರುಷನೆನಿಸಿದ್ದನು. ದಾರ್ಶನಿಕ ಪ್ರಪಂಚದಲ್ಲಿ ತನ್ನ ವಿಶಿಷ್ಟ ತತ್ವ-ಸಿದ್ಧಾಂತಗಳಿಂದ ಭೃಗುವಿನ ಹೆಸರು ಹೊಸತರಂಗಗಳನ್ನೆಬ್ಬಿಸಿತ್ತು. ಆದರೇನು! ತಾನೆ ಬ್ರಹ್ಮರ್ಷಿ ಎಂದೂ ತನ್ನ ಬಲಅಂಗಾಲಿನಲಿ ಅತೀಂದ್ರಿಯ ನೇತ್ರಹೊಂದಿದ್ದೇನೆಂದೂ ನಿಂತಲ್ಲಿ ನಿಲ್ಲದೇನೆ ಭೂಮಿಯನ್ನೇ ಅಳೆದು ಬಿಡುವವನಂತೆ ನಿರ್ಲಕ್ಷ್ಯದಿಂದ ನಡೆಯುತ್ತಿದ್ದನು. ಮೂರನೆಯ ಜ್ಞಾನಸೂಕ್ಷ್ಮವನ್ನು ಅರಿತಿದ್ದರೇನು? ಆತನ ಅಹಂಕಾರದಂಧಕಾರವೆ ಅದನ್ನೂ ಮುಚ್ಚಿಹಾಕಿತ್ತು. ಮೂರುಲೋಕಗಳಲ್ಲಿಯೂ ಸರ್ವಶಕ್ತನಾದ ತಪಸ್ವಿ ತಾನೆಂದೂ, ತಾನೆ ಸಾತ್ವಿಕತೆಯ ಮಹಾನ್ ಸಾಧಕನೆಂದೂ ಹೆಮ್ಮೆಯಿಂದ ಬೀಗುತ್ತಿದ್ದನು. ಆದ್ದರಿಂದಲೆ ತನಗೆ ತ್ರಿಮೂರ್ತಿಗಳನ್ನೇ ಪರೀಕ್ಷಿಸುವ ಅಧಿಕಾರ ಲಭಿಸಿದೆ ಎಂದೇ ಭಾವಿಸಿದ್ದನು.

ಅಂದು ಸತ್ಯಲೋಕದಲ್ಲಿ ಎಂದಿನಂತೆಯೆ ಸಭೆ ಸೇರಿತ್ತು. ಬ್ರಹ್ಮದೇವನು ಸುವರ್ಣಖಚಿತ ಸಿಂಹಾಸನಾರೂಢನಾಗಿದ್ದನು. ಆ ತುಂಬಿದ ಸಭೆಯಲ್ಲಿ ಯಕ್ಷರು, ಕಿನ್ನರರು, ಸಪ್ತಮಹರ್ಷಿಗಳು, ಅಷ್ಟದಿಕ್ಪಾಲಕರು, ಸುರರೂ ತಮ್ಮ ತಮ್ಮ ಆಸನದಲ್ಲಿ ಕುಳಿತಿದ್ದರು. ಸಭಾಸದರೆಲ್ಲರೂ ಬ್ರಹ್ಮದೇವನ ಮಾತುಗಳನ್ನು ಆಲಿಸುತ್ತಿದ್ದರು. ನಾಲ್ಕು ವೇದಗಳ ಪಾರಂಗತನಾದ ಬ್ರಹ್ಮದೇವ, ಮಾನವನಿಗೆ ಇಂದ್ರಿಯಾತೀತವಾದ ಎಷ್ಟೋ ವಸ್ತು-ವಿಷಯಗಳನ್ನು,ಜಗತ್ತಿನ ಅತ್ಯದ್ಭುತವಾದ ಪ್ರಾಕೃತಿಕ ವಿಶೇಷಗಳನ್ನೂ, ಇಹಪರ ಸೌಖ್ಯಾದಿ ಕರ್ಮಫಲಗಳನ್ನೂ, ಪಾಪಪುಣ್ಯಗಳನ್ನೂ, ತನ್ನ ದಿವ್ಯ ಸಮಾಧಿಸ್ಥಿತಿಯಲ್ಲಿಯೆ ಕಂಡುಕೊಂಡ ತ್ರೈಲೋಕ್ಯವಿಧಿತ ಸಾಧಕ ಬಾಧಕಗಳನ್ನೂ ಸಭಾಸದರಿಗೆ ವಿವರಿಸುತ್ತಿದ್ದನು. ಸೃಷ್ಟಿಕ್ರಿಯೆಗಳಲ್ಲಿ ಉಂಟಾಗುವ ಬದಲಾವಣೆಗಳು, ಹಾಗೂ ಕಲ್ಪಾಂತರಗಳಲ್ಲಿ ಪುನರಜ್ಜೀವನಕ್ಕಾಗಿಯೆ ಮೂಡಿ ಬರುವ ಸಂದೇಶಗಳು ಹೇಗೆ ದೈವೇಚ್ಛೆಯಿಂದ ಕೂಡಿರತ್ತವೆ; ಸರ್ವಲೋಕಗಳಿಗೂ ಹಿತವನ್ನೇ ಕೋರುತ್ತವೆಂಬುದನ್ನು ತಿಳಿಯಪಡಿಸುತ್ತಿದ್ದನು.

ಆಗಲೆ ಭೃಗುಋಷಿಯ ಆಗಮನವಾಗಿತ್ತು. ಬ್ರಹ್ಮದೇವನು ಆತನನ್ನು ನೋಡಿಯೂ ನೋಡದವನಂತೆ ಪ್ರವರ್ತಿಸುವುದೇನು? ಭೃಗುವೂ ಕಡಿಮೆಯೇನು? ಬ್ರಹ್ಮನಿಗೆ ವಂದಿಸದೇ ಹೋದನು. ಮುಂದೆಹೋಗಿ ಸಭೆಯ ಮಧ್ಯೆ ಉನ್ನತಾಸನದಲ್ಲಿ ಕುಳಿತನು. ಭೃಗುವಿನ ಆಗಮನ ಕಂಡು ಸಂತೋಷಟ್ಟವರೆಲ್ಲರೂ ಇದೀಗ ಚಕಿತರಾದರು. ಸಭೆಯಲ್ಲಿ ಗುಸುಗುಸು ಸದ್ದಾಗತೊಡಗಿತು.
ಭೃಗು ತನ್ನ ವಂಶಜನೇ ಆದರೂ ಮಹಾಗರ್ವಿಷ್ಟನೆಂದೂ ಬ್ರಹ್ಮ ಕೇಳಿ ತಿಳಿದಿದ್ದನಲ್ಲವೇ, ತಾನೊಬ್ಬನೆ ಮಹಾಜ್ಞಾನ ಸಂಪನ್ನನೆಂದೂ, ಜ್ಞಾನಕ್ಕೆ ತಾನೆ ಅಧಿಪತಿ ಎಂದೂ ಭೂಲೋಕದಲ್ಲಿ ಮೆರೆಯುತ್ತಿದ್ದ ಈ ಭೃಗುವಿಗೆ ಸ್ವರ್ಗಲೋಕದ ಆದರೋಪಚಾರಗಳೇಕೆ? ಅಂದುಕೊಂಡ ಬ್ರಹ್ಮದೇವ ಆತನತ್ತ ತಿರಸ್ಕಾರದಿಂದ ನೋಡಿದನು.

ಭೃಗುವಿನ ಕಣ್ಣುಗಳು ಕೆಂಪಾದವು. ದೃಷ್ಟಿಯು ತೀಕ್ಷ್ಣವಾಯಿತು. ಬಳಿಗೆ ಬಂದವರನ್ನು ಕಂಡು ಮಾತನಾಡಿಸುವಷ್ಟೂ ವ್ಯವಧಾನವೂ ಈ ಸೃಷ್ಟಿಕರ್ತನಿಗೆ ಇಲ್ಲವಾಯಿತೇ... ಎಂದು ಆತ ಯೋಚಿಸುತ್ತಿರಲು,

ಬ್ರಹ್ಮದೇವ ಕ್ರೋಧ ತಪ್ತನಾಗಿ ಕೇಳಿದನು-
“ಭೃಗು ನನ್ನ ವಂಶಜ ನೀನು! ನಿನಗೆ ಧರ್ಮಾಧರ್ಮಗಳ ಪರಿಜ್ಞಾನ ಇರಬೇಡವೇ? ನೀನೆ ಮಹಾಜ್ಞಾನಿ ಎಂದು ಸಭೆಯ ಮರ್ಯಾದೆಯನ್ನು ಮರೆತು ವರ್ತಿಸುವುದೇನು? ಸಭಾಧ್ಯಕ್ಷರಿಗೆ ವಂದಿಸದೇ ಕುಳಿತೆ ಏಕೆ?”
ಭೃಗು ಋಷಿ ಉತ್ತರಿಸದೆ ಶಷ್ಕನಗೆ ನಕ್ಕನು.

ತನ್ನ ಸಹನೆ-ಸಂಯಮದ ಪರೀಕ್ಷೆ ಇದೆಂದು ಬ್ರಹ್ಮದೇವನಿಗೂ ತಿಳಿಯದೇಹೋಯಿತು.
“ಭೃಗು! ನೀನೆ ಬ್ರಹರ್ಷಿ ಎಂಬ ಅಹಂಕಾರವೇ? ತ್ರಿಮೂರ್ತಿಗಳನ್ನೂ ಹಸುಗೂಸುಗಳಂತೆ ಆಡಿಸಿದ ಅತ್ರಿ ಮಹಾಮುನಿಗಿಂತಲೂ ನೀನು ಅಧಿಕನೇ? ಸ್ವರ್ಗಲೋಕದ ಅಧಿಪತಿ ಇಂದ್ರನನ್ನೇ ಶಪಿಸಿದ ಗೌತಮನಿಗಿಂತಲೂ ಶ್ರೇಷ್ಠನೇ ನೀನು? ಜಮದಗ್ನಿಗಿಂತ ನೀನೇ ಶಕ್ತಿವಂತನೇನು?”

ಈಗಲೂ ಬ್ರಹ್ಮದೇವನ ಆವೇಶದ ಮಾತುಗಳಿಗೆ ಭೃಗುವು ಪ್ರತಿಕ್ರಿಯಿಸದೇ, ಇದು ರಜೋಗುಣ ಲಕ್ಷಣವಲ್ಲದೇ ಇನ್ನೇನು? ಅಂದುಕೊಂಡನು. ಅದೇ ವ್ಯಂಗ್ಯದ ನಗೆಯಲ್ಲಿ ನಿಟ್ಟಿಸಿದನು.

"ಭೃಗು ನಿನಗೆ ಇಷ್ಟೊಂದು ದುರಭಿಮಾನವೇನು ನೀನು ತಿಳಿಗೇಡಿಯಂತೆ ವರ್ತಿಸುವುದೇ? ನಿನಗೆ ಗರ್ವಭಂಗವಾಗದೇ ಇರುವುದಿಲ್ಲ” ಬ್ರಹ್ಮದೇವನೆಂದಾಗ,

ಭೃಗುವು ಚಟಕ್ಕನೆದ್ದು ನಿಂತು ಹೇಳೀದನು-“ಬ್ರಹ್ಮದೇವ! ನಿನ್ನೀ ಆವೇಶದ ಮಾತುಗಳನ್ನು ನಿಲ್ಲಿಸು. ನಿನ್ನ ಬಳಿಗೆ ಬಂದವರು ಯಾರೇ ಇರಲಿ, ಮೊದಲು ಅವರನ್ನು ಶಾಂತರೀತಿಯಿಂದ ಮಾತನಾಡಿಸಬೇಡವೇ? ಮರ್ಯಾದೆಯಿಂದಲೆ ಬಂದ ಕೆಲಸವೇನೆಂದು ವಿಚಾರಿಸಬೇಡವೇ? ನೀನೊಬ್ಬ ಮದಾಂಧ ರಾಜನಂತೆ ವರ್ತಿಸುವುದೇನು? ಒಂದು ಮಹಾಯಜ್ಞದ ಮಹತ್ಕಾರ್ಯ ನಿಮಿತ್ತ ಭೂಲೋಕದಿಂದ ಅನೇಕ ಮಹರ್ಷಿಗಳೆಲ್ಲರ ಅಪೇಕ್ಷೆಯಂತೆ ಇಲ್ಲಿಗೆ ಬಂದ ಈ ಮಹಾತಪಸ್ವಿಗೆ ನೀನು ಹೇಯವಾಗಿ ನಿಂದಿಸುವುದೇನು? ಪ್ರಜಾಪತಿ ಎನಿಸಿದ ನೀನು ಪರಾಮರ್ಶಿಸದೇ ಹೀಗೆ ನಿನ್ನ ರಜೋಗುಣವನ್ನೇ ಪ್ರದರ್ಶಿಸುವುದೇನು? ನಿನಂಥ ದೇವನಿಗೆ ಪೂಜೆಯೇಕೆ? ಇಂದಿನಿಂದ ಭೂಲೋಕವಾಸಿಗಳು ನಿನ್ನನ್ನು ಪೂಜಿಸದಂತಾಗಲಿ” ಎಂದು ಭೃಗುಮಹರ್ಷಿಯು ಬ್ರಹ್ಮನಿಗೆ ಶಪಿಸಿದನು.

ಬ್ರಹ್ಮದೇವನು ತತ್ ಕ್ಷಣವೇ ಪೀಠದಿಂದೆದ್ದು, “ಭೃಗುಮಹರ್ಷಿ...!” ಎಂದು ಆರ್ತನಾಗಿ ಕರೆದನು.

ಭೃಗುವು ಹಿಂದಿರುಗಿಯೂ ನೋಡದೇ ಬ್ರಹ್ಮನ ಸತ್ಯಲೋಕದಿಂದ ಸರಸರನೆ ನಡೆದಿದ್ದನು.

ಆಗ ದೇವಿ ಸರಸ್ವತಿಯು,
“ಸ್ವಾಮಿ, ನಿಮಗೆ ಮಾತ್ರ ಪೂಜೆ ಇಲ್ಲವೆಂದುದಷ್ಟೇ... ಪೂಜಾ ವಿಧಿಗಳಲ್ಲಿ ನಿಮ್ಮ ಸತ್ಯವೇದಗಳಿಗೆ ಸದಾ ಅಗ್ರಪೂಜೆ ಸಲ್ಲುತ್ತದೆಯಲ್ಲವೇ ? ಚಿಂತಿಸದಿರಿ ಸ್ವಾಮಿ..” ಎಂದು ನಸುನಗೆಯಲ್ಲೇ ಹೇಳಿದಳು ಆ ಜಗನ್ನಾತೆ.

Friday, August 25, 2006

ಪೀಠಿಕೆ - Preface

Our belief about GOD

Indian culture and philosophy is very great. It is so vivid and virtuous in its role of our culture and civilization. Our people are happy to see God in millions of visions, and understanding Him in millions of supernatural consequences as exemplified from long before. We are not only having Bhagavadgeetha, also many cultural and traditional books on Hinduism. Our ancient sage’s contributions on realisation of God differently in different ways were endless in Vedic times. Since then in Hinduism we are worshiping millions of God; in millions of Visions. Why? As mentioned above it is the means of understanding in different ways, and as experienced differently, by our many ancient sages who were great in depth to find Him soulfully without any worldly wanting.

How GOD exist?
Does God exist or not? Man has been posing this question from thousands of years. Even today, if you put questions about how God exist to some body, each individual give answer in his own way and view or some may say 'No'. Instead why don’t we put such questions to our inner self? Why don’t we think as insider whether we are really in God; instead of where is God? Why don’t we experience ourselves that he exist in our consciousness; and direct us from inside before putting our good or bad ideas into actions out side?
In our man’s life there is the Hindu God, the Muslim God, and the Christian God and so on…Every one of these Gods is omnipotent. They are supposed to have performed miracles and saved humanity on the path of gentleness and truism. Believers will tell you their Gods still have the capacity to perform such miracles.
Of course! It is a fact miracle will happen in man’s life only. Swami Vivekananda says-“Men are made; not born.” It is seen man is ready to bestow anyone with the status of God if He can save him from trouble or disastrous. Therefore, one should find Him in oneself; thinking only in positive attitude.

It is no where found so many numbers of Gods and so many numbers of peoples devoted to such numbers of Gods than as herein Indian peoples find in their self-consciousness; that all Gods united in oneness.

We are not simply worshiping an idol or in it’s name as God, it is just a means to go on contemplative mind for self realisation; on findings real facts also as God’s gracefulness and miracles he depicts from there, but not merely imaginary; nevertheless become fictitious.

A holy and truly universal scripture
In Indian mythologies Ramayana and Mahabharatha and its holy recital Bhagavadgeetha there were many illustrations, emphasizing factors about God exit and His realisation,with man’s modes of nature; death and rebirths.
Our belief depends on our wisdom or ignorance. We see many examples innocents, ignorant have belief in God on firm faith, rather than too intellectuals. Innocents may not be knowing meaning of “God-consciousness” but, know what is God and self-realisation. Even nowadays they find him to converse with His stone image in the temples!

It is His profundity to awaken men dormant. Else there will be no agreement in anything believing, if a man yearns like an innocent child, then only He will appear in man’s conscientious mind in turn it takes God consciousness; where self-awareness enshrines on self-less motives as it is experienced by great transcendentalists. If there is a very big banyan tree no rosebush can grow under its expansive shadow. If a man wants to achieve the quality of being divine, it’s time now to come out of his own religious belief, because Jesus, Krishna, Mohammed and Buddha went against conventions. But, they are the ones who dared to move out of the shadow of a particular religious belief. Do you want to believe in an outside God or in the God that you already are, or else to attain the state or quality of being divine? It’s also up to you to decide whether to follow a farcical religion to appear as dogmatic, or wake up to the expansive religion to preponderate yourself.

This epic-story of Lord Venkateswara is not a particular religious tome as some one thinks. Of course! Each holy pilgrimage place may convey divine message, but this legendary place has its exclusive communing form of conceptualism, and stands as A Truly Universal Scripture.

Tirupati-Tirumala is a pilgrimage place, to where thousands of people are being headed towards Lord Venkateswara every day without distinction of religion, race and ethnics those are all not blind believers of God! Hence, it is not an exaggeration; from this renowned pilgrimage centre A Truly Universal Message originates to the Universe.

Epic-Story- of Lord Sri VENKATESHWARA (also called as Balaji)
At last, it was the precept of Lord Sri Venkateswara, I have to go through His epic story for my literary work and its new presentation to these advancing days. I have first written this Epic-story as“Sapthagiri Sampada” in our regional language Kannada and published in1997. I say in my work this epic-story high lights not only referring to the sacred ordinance of Marriage, but its mystery on everlasting tripartite principles of this earth. It is also depicting how to attain the highest peak of tranquility apart from man's modes of nature mainly through his Sathva guna the power of gentlemanliness in human life. It is our life's entity too; on which based the whole Universal Law!

The WORLD of Tripartite Principle
Other than realization of God, there is always big controversy about understanding this wicked world! It is an astounding mystical mystery and scientific nature’s law also found in this world of three fold times. The Tripartite principled earth!
You see, in the global world waters portion is treble around one portion of earth. Amazingly our country India is having its resemblance as alike as philosophical myth, and geographically a peninsular covered by sea waters at three sides, and again three times of earth portion filled with full of misery on the cause of criminals and sinners, it is alike as similar example to the whole world also. Which partake thrice is called ‘Tripartite’.

In 15th century itself our saints -Hari Daasas’ said- “Idu Parama Papigalige Subhiksha kala…” This is the time of luxuriance of all those sinners and criminals on the earth; who are of Rajasa and Tamasa gunas found in three times of Satthviks the people of gentlemanliness. But remaining only one portion of Satthviks ever sprout to grow up luminous on the earth are very much power full; rules the whole universe in an indispensable manner at our all life times.

Although Rajasa is not so harmful, often leads to Tamasa. Indeed, to select the correct group with which to associate and move further is our choice; as Satthva the essence of gentility is the utmost victorious truth, and highly powerful will bring equilibrium to the whole universe and our life too.
The most creatures and nature of our body and its functions found alike on the same principle of tripartite! Which comprises three portions of waters and another one portion is based on air which is life force for breathing; takes a major role to survive.

These tripartite principles- the Trigunathmaka tatthva pointed out long before by our ancient sages. The same we can find in this epic story Venkatesha Puranam. I would like to mention further, here up to my knowledge and efforts goes in the available epics on Lord Venkateshwara, His Sattvik Message_ the divine Message limits to trinity only. Afterwards the high Lights of the story runs about Srinivasa Kalyanam and Lord’s majesty with His pre-eminences only. In fact this great epic contains Lord’s Divine Message in each and every step of chapters. Accordingly, I studied and took all care on the way of my new presentation not to affect in any way to the traditional story and its resources.

-Shiva Ram H, 25th August, 2006

Saturday, August 19, 2006

ಸಂಚಿಕೆ-10. ಧನ ಸಂಪತ್ತಿಗಿಂತಲೂ ಸಾತ್ವಿಕಸಂಪತ್ತು

ಹೌದು, ಜಗತ್ತಿನಲ್ಲಿ ಹಣ ಗಳಿಸುವುದಕ್ಕಿಂತಲೂ ಸಾತ್ವಿಕ ಸಂಪನ್ನನೆನಿಸಿಕೊಳ್ಳುವುದೇ ಕಷ್ಟಕರವು. ಮನುಷ್ಯರೆಲ್ಲರೂ ಧ್ಯಾನಯೋಗಿಗಳಾಗಲಾರರಾದರೂ, ಕರ್ಮನಿರತರಾಗಿಯೆ ಸತ್ವಗುಣ ಸಾಧಿಸಬಲ್ಲರು.

ತ್ರಿಮೂರ್ತಿಗಳೆಲ್ಲರೂ ಯೋಗ ನಿರತರೇ ಧ್ಯಾನಾಸಕ್ತರೇ ಆಗಿರುವಾಗ ಅವರಲ್ಲಿಯೆ ಸತ್ವಗುಣಾಢ್ಯನೂ, ಸಾತ್ವಿಕ ಸಂಪನ್ನನೂ ಯಾರೆಂದು ಹೇಗೆ ಗುರುತಿಸುವುದು? ಭೃಗುಮಹರ್ಷಿ ಹೀಗೆ ಸುದೀರ್ಘವಾದ ಆಲೋಚನೆಯಲ್ಲೇ ಮುಳುಗಿದ್ದನು. ಜಗತ್ತಿನಲ್ಲಿ ಎಂದಿಗೂ ಸಾತ್ವಿಕ ಶಕ್ತಿ ಸಂಪನ್ನವಾಗಿದ್ದರೇನೆ ಸಮೃದ್ಧಿ! ಅಂತೆಯೆ ಜಗತ್ತಿನಲ್ಲಿ ಸಾತ್ವಿಕರು ಇರಬೇಕು; ಇರುತ್ತಾರೆ. ಹಾಗೆ ಶಾಶ್ವತ ಶಕ್ತಿ-ಸಂಪದವನ್ನೆಗಳಿಸುತ್ತಾರೆ. ಸಂತೃಪ್ತರಾಗಿರುತ್ತಾರೆ.
ಮೋಸ ವಂಚನೆ, ಕೊಳ್ಳೆ, ಸುಲಿಗೆಯಿಂದ ಬಂದ ಸಂಪತ್ತು ಲಕ್ಷ್ಮಿಯ ಕಟಾಕ್ಷದಿಂದ ಬಂದದ್ದಲ್ಲ. ಅದರಿಂದ ಸುಖವಿಲ್ಲ. ಶಾಂತಿ ಎಂಬುದಿಲ್ಲ. ಅದು ಸ್ಥಿರವೂ ಅಲ್ಲ. ಎಲ್ಲದಕ್ಕೂ ಆದಿಶಕ್ತಿ ಲಕ್ಷ್ಮಿಯೆ. ಆಕೆ ಚಂಚಲೆ ಎನಿಸಿದರೂ ಆಕೆಯ ಚಿತ್ ಸ್ವರೂಪವು ಅಗಾಧ ವಾದದ್ದು ಎಲ್ಲಿ ಸತ್ವಗುಣ ಪ್ರಧಾನವಿರುವುದೋ ಅಲ್ಲಿ ಇವಳೇ ಮಹಾಸರಸ್ವತಿ, ಮತ್ತು ಮಹಾಲಕ್ಷ್ಮಿಯೂ ಆಗಿ ಕೃಪೆತೋರುವಳು. ಎಲ್ಲಿ ರಜೋಗುಣ,ತಮೋಗುಣಗಳೋ ಅಲ್ಲಿ ಇವಳೇ ಮಹಾಕಾಳಿಯಾಗಿ ಬಿಡುವಳು. ಧರ್ಮ ನೀತಿ ಅರಸನಲ್ಲಿಯೂ ಇಲ್ಲವಾದರೆ ಆತನನ್ನೂ ತೊರೆದು ಹೋಗವವಳೇ. ಇಂಥ ಮಹಾಲಕ್ಷ್ಮಿ ತನ್ನ ಸ್ವಾಮಿಗೆ ಅಪಚಾರವಾದರೆ ಸಹಿಸಿಯಾಳೇ? ಅಲ್ಲಿಯೆ ನಿಲ್ಲುವಳೇ? ಎಂಬ ಪರಿಕಲ್ಪನೆಯು ಮಹಾಜ್ಞಾನಿಯಾದರೂ ಆ ಭೃಗುಋಷಿಗೆಲ್ಲಿತ್ತು?

ಜಗತ್ತು ಅಸ್ತಿತ್ವದಲ್ಲಿರಲೆಂದೇ ಅದನ್ನು ಸಂರಕ್ಷಿಸುವುದಕ್ಕಾಗಿಯೆ ಅಗೋಚರವೂ ನಿಗಮಗೋಚರವೂ ಆದ ಸತ್ ಶಕ್ತಿಯೊಂದಿರುವುದು. ಆ ಸತ್ ಶಕ್ತಿ ಸ್ವರೂಪನೆ ಸರ್ವರಕ್ಷಕನು. ಸಾತ್ವಿಕ ಸಂಪನ್ನನು ಜನರಲ್ಲೂ ಅದೇ ಗುಣವನ್ನು ಜಾಗೃತಗೊಳಿಸುತ್ತಿರುವನು. ಆದರೆ, ಆತನು ಯಾರು? ಬ್ರಹ್ಮನೇ ಪರಮೇಶ್ವರನೇ ಶ್ರೀಹರಿಯೆ? ಯಾರು ಆ ಸರ್ವೋತ್ತಮನು? ಭೃಗುಋಷಿಯು ಇದನ್ನು ಪರೀಕ್ಷಿಸಲೆಂದೇ ಹೊರಟಿದ್ದನು.

ಈ ಭೃಗುವು ಯುಗಾಂತರಗಳಲ್ಲಿ ಭೂಲೋಕವಾಸಿಗಳು ಮಾನವ ಜನ್ಮದಲ್ಲೆ ದೇವತೆಗಳಿಗೆ ಸಮನಾಗಿ ಸಾಧಿಸಬಹುದಾದ ಏಕೈಕ ಸತ್ವಗುಣದ ಹಿರಿಮೆ ಏನೆಂದು ಸಾರಲಿದ್ದನು. ಕಲಿಯುಗದ ಕಾಲವು ಗರ್ವಿಷ್ಟನಾದರೂ ದಾರ್ಶನಿಕನಾದ ಈ ಮಹನೀಯನನ್ನೇ ನಿಮಿತ್ತ ಮಾತ್ರನನ್ನಾಗಿಸಿಕೊಂಡು ಭೂಲೋಕದ ಸಪ್ತಗಿರಿಯಲ್ಲಿ ಜಗತ್ಕಲ್ಯಾಣಕ್ಕಾಗಿಯೆ ಆ ಚಿತ್ ಶಕ್ತಿಯ ಮಹತ್ಕಾರ್ಯವು ಸಂಪನ್ನವಾಗಲು ಮುಂದಿನ ಅನೇಕ ಘಟನೆಗಳಿಗೆ ಸಿದ್ಧತೆ ನಡೆಸಿತ್ತು.

Monday, August 14, 2006

ಸಂಚಿಕೆ-9. ತ್ರಿಗುಣಗಳಲ್ಲಿ ಸತ್ವಗುಣ

ಈ ಮೂಲಕವೆ ನಮ್ಮೊಳಗಿನ ದೈವಿಕ ಶ್ರದ್ಧೆಯ ನಿಷ್ಕರ್ಷೆಯಾಗುತ್ತದೆ. ಅಂತಃ ಸತ್ವವೂ ಜಾಗೃತಗೊಳ್ಳುತ್ತದೆ. ಅಂಥಹದೊಂದು ಏಕೈಕ ಸತ್ವಗುಣದ ನಿರೂಪಣೆಯಾಗಬೇಕಾದರೆ, ತ್ರಿಮೂರ್ತಿಗಳ ಸತ್ವಪರೀಕ್ಷೆ ಆಗಲೇಬೇಕು. ಜಗತ್ತಿನಲ್ಲಿ ಸತ್ ಶಕ್ತಿಯೆ ವಿಹಿತವಾದುದೆಂದು ಅನಂತ ಕಾಲವೂ ವೇದ್ಯವಾಗುತ್ತಿರಬೇಕು.” ಎಂದು ಅಗಸ್ಯರು ಮಾತು ನಿಲ್ಲಿಸಿದರು.
“ಅಂದ ಹಾಗೆ ತ್ರಿಮೂರ್ತಿಗಳನ್ನು ಪರೀಕ್ಷಿಸುವ ಈ ಗುರುತರ ಜವಾಬ್ದಾರಿಯನ್ನು ನಾವು ಮಹಾಪ್ರಾಜ್ಞರೂ ಜ್ಞಾನಸಂಪನ್ನರೂ ಆದ ಭೃಗುಮಹರ್ಷಿಗಳಿಗೆ ಒಪ್ಪಿಸುವುದು ಲೇಸು.”ಎಂದು ಕಶ್ಯಪರು ಹೇಳಿದರು.

ಇಡೀ ಸಭೆಯು ಭೃಗುಮಹರ್ಷಿಯ ಹೆಸರನ್ನೇ ಅನುಮೋದಿಸಿತ್ತು. ತನ್ನ ಬಲಗಾಲಿನಲಿ(ಅಂಗಾಲಿನಲಿ) ಜ್ಞಾನ ನೇತ್ರವನ್ನೆ ಹೊಂದಿದ್ದು ತುಂಬಾ “ಅಹಂ” ನಿಂದ ಮೆರೆಯುತ್ತಿದ್ದ ಭೃಗುಋಷಿಯು ಸಭೆಯ ನಿರ್ಧಾರ ಕೇಳಿದಾಕ್ಷಣವೆ ಉಬ್ಬಿಹೋದನು. ಆದರೂ ತ್ರಿಮೂರ್ತಿಗಳನ್ನೇ ಪರೀಕ್ಷಿಸುವ ಕಾರ್ಯ ನಿಜಕ್ಕೂ ಗುರುತರವಾದದ್ದು, ನಾನು ಕೇವಲ ನಿಮಿತ್ತ ಮಾತ್ರನು ಎಂಬ ತಥ್ಯವು ಆತನಿಗೆ ಅರಿವಿಲ್ಲದೇ ಒಳಗೇ ಕೊರೆಯುತ್ತಿತ್ತು.

ಅಧ್ಯಾಯ-4
ಭೃಗುಮಹರ್ಷಿ ತ್ರಿಮೂರ್ತಿಗಳ ಪರೀಕ್ಷೆಗಾಗಿ ಮೂರು ಲೋಕಗಳನ್ನು ಪ್ರವೇಶೀಸುವ ಮುನ್ನ ದೇವಾನು ದೇವತೆಗಳಲ್ಲೆ ಆಗಲಿ,
ಮನುಷ್ಯರಲ್ಲೆ ಆಗಲಿ ಈ ತ್ರಿಗುಣಗಳು ಹೇಗಿರುತ್ತವೆ;ಹೇಗೆ ಕೆಲಸಮಾಡುತ್ತವೆ? ಎಂಬುದನ್ನು ಕುರಿತು ಮನದಲ್ಲೇ ಗಂಭೀರವಾಗಿ ಚಿಂತಿಸತೊಡಗಿದನು.
ಸತ್ವ,ರಜಸ್ಸು, ತಮಸ್ಸು ಈ ಮೂರು ಗುಣಗಳೇ ಜಗತ್ತಿನಲ್ಲಿ ಮನುಷ್ಯರ ಎಲ್ಲ ಕ್ರಿಯೆಗಳಿಗೆ,ಮನೋ ವಿಪ್ಲವಗಳಿಗೆ ಕಾರಣವಾಗುತ್ತವೆ.
ಈ ಕ್ರಿಯಾಕತೃತ್ವಗುಣಗಳು ಜನಜೀವನದಲ್ಲಿ ಇರಲೇಬೇಕಾದುದು ಜಗತ್ತಿನ ನಿಯಮವಾಗಿದೆ. ಇವು ದೇವಾನುದೇವತೆಗಳನ್ನೂ ಬಿಡಲಾರವು.
ಈ ತ್ರಿಗುಣಗಳ ಲಕ್ಷಣಗಳು ಹೇಗಿರುತ್ತವೆಂದರೆ
-

ಸತ್ವಗುಣ- ನಿರ್ಮಲ, ಶಾಂತಿ, ಸಂತೃಪ್ತಿ, ಜ್ಞಾನ, ಪ್ರಕಾಶ
ರಜೋಗುಣ– ಆವೇಶ, ಕರ್ಮ, ಪ್ರಕೋಪ, ಅವಿವೇಕ, ಪರಿಭ್ರಮಣೆ
ತಮೋಗುಣ- ಅಜ್ಞಾನ, ಅಪ್ರವೃತ್ತಿ, ಅಂಧಕಾರ, ಹಿಂಸೆ, ಕ್ರೌರ್ಯ

ಹಿಂದಿನ ದ್ವಾಪರ ಯುಗದಲ್ಲಿ ಶ್ರೀ ಕೃಷ್ಣ ಹೇಳಿದಂತೆ ಅರಿಷಡ್ವರ್ಗಗಳೂ ಅಂದರೆ- ಕಾಮ,ಕ್ರೋಧ,ಮೋಹ,ಮದ,ಮಾತ್ಸರ್ಯ,ಲೋಭಗಳೂ ರಜೋ ಮತ್ತು ತಮೋಗುಣಗಳನ್ನೆ ಅವಲಂಬಿಸಿವೆ. ಆದಕಾರಣ ರಜೋ ಮತ್ತು ತಮೋಗುಣಗಳನ್ನು ಸತ್ವಗುಣ ಸಾಧನೆಯಿಂದಲೇ ನಿಗ್ರಹಿಸಬೇಕಾಗುವುದು.

ಚತುರ್ವಿಧ ಪುರುಷಾರ್ಥಗಳಾದ ಧರ್ಮ,ಅರ್ಥ,ಕಾಮ,ಮೋಕ್ಷ ಇವುಗಳನ್ನೂ ಸಾಧಿಸಿ ಸಾರ್ಥಕ್ಯ ಕಾಣಬೇಕಾದರೆ, ಮೊದಲು ಸತ್ವಗುಣಾಧಿಕ್ಯವನ್ನು ಹೊಂದುವುದು; ಸಾತ್ವಿಕನಾಗಬೇಕಾಗುವುದು. ಇಂತಹ ದಿವ್ಯವಾದ ಸತ್ವಗುಣವನ್ನು ಸಂಪಾದಿಸುವುದಾದರೂ ಹೇಗೆ? ಅದು ಸಂಸ್ಕಾರಜನ್ಯವೂ ಹೌದು. ಇಹ ಜೀವಿತ ಸಾಧನೆಯೂ ಆಗಿರುವುದು. ನಾವು ಧ್ಯಾನದಿಂದ ಚಿತ್ತ ವಿಕಾರವನ್ನು ನಿಗ್ರಹಿಸಿ ಸತ್ವಗುಣಾಧಿಕ್ಯವನ್ನು ಪಡೆಯಬಹುದು. ಆದುದರಿಂದಲೆ ದೇವಾನು ದೇವತೆಗಳೂ ಧ್ಯಾನಾಸಕ್ತರೇ. ಮನುಷ್ಯನಿಗೆ ಚಿತ್ರ ವಿಚಿತ್ರ ಜೀವನದ ಒತ್ತಡಗಳಲ್ಲಿ ನಿರಾಶೆ ಹತಾಶೆ ಮತ್ತು ಮನೋಕ್ಲೇಶಗಳೇ ಕಾಡುವ ಸಂರ್ಭಗಳಲ್ಲಿ, ಧ್ಯಾನಕ್ಕೆ ವ್ಯವಧಾನವೆಲ್ಲಿಯದು? ಆದರೂ ಮನುಷ್ಯನಾದವನು ಮನಸ್ಸು ಮಾಲೇಬೇಕಾಗುವುದು ಅವನ ಜೀವಿತದ ಧರ್ಮ.


ಧ್ಯಾನವೆಂದರೆ ಕೇವಲ ಮೂಗು ಹಿಡಿದು ಕೂರುವುದಲ್ಲ, ಹೊರಗೆ ಹೇಗೆ ಮೂರು ಗಣಗಳೋ ಹಾಗೆಯೆ ನಮ್ಮ ಆಂತರ್ಯದಲ್ಲಿಯೂ ಮೂರು ಸ್ಥಿತಿಗಳು– ಅವೇ ಧಾರಣ, ಧ್ಯಾನ, ಸಮಾಧಿ. ಆತ್ಮ ಪ್ರಜ್ಞೆಯ ಆಳದಲ್ಲಿ ಮನಸ್ಸನ್ನು ನಿಲ್ಲಿಸುವುದೇ ಧಾರಣ. ಅಂದರೆ, ನಮ್ಮ ಉಸಿರಾಟದ ಪ್ರಕ್ರಿಯೆಯನ್ನು ಗಮನಿಸುತ್ತ ಭ್ರೂ ಮಧ್ಯೆಯಲ್ಲಿ ಅಂತದೃಷ್ಟಿಯನ್ನಿರಿಸಿ, ಆ ಧಾರಣಾ ಸ್ಥಿತಿಯಲ್ಲೇ ಮನಸ್ಸಿನ ಚಂಚಲತೆಯು ತಂತಾನೆ ಸ್ತಬ್ದಗೊಳ್ಳುವುದನ್ನು ನಿರೀಕ್ಷಿಸುವುದಷ್ಟೇ. ನಮ್ಮನ್ನು ಯಾವ ನಿರ್ಬಂಧಕ್ಕೂ ಒಳಪಡಿಸುವುದಲ್ಲವೇ ಅಲ್ಲ. ಈ ಒಂದು ವಿಶಿಷ್ಟಾವಸ್ಥೆಯಲ್ಲೆ ಸತ್ವಗುಣವು ಜಾಗೃತವಾಗುವುದು. ಸಮಾಧಿ ಸ್ಥಿತಿಯನ್ನೂ ತಲುಪುವುದು. ಆ ಕ್ಷಣಗಳಲ್ಲಿ ತನ್ನೊಳಗಣ ಆತ್ಮವು ಜಗತ್ತಿನ ಏಕೈಕ ಚಿತ್ ಶಕ್ತಿ ಸ್ವರೂಪನಾದ ದೇವನೊಬ್ಬನನ್ನೇ ಧ್ಯಾನಿಸತ್ತಾ ಸಂಪನ್ನವಾಗುವುದು.
ಈ ಸಮಾಧಿ ಸ್ಥಿತಿಯಲ್ಲೆ ಸಾವಿನ ಕಾಲಾಂತರವನ್ನೇ ನಿಯಂತ್ರಿಸುವ ಸಿದ್ಧಿಯೂ ದೊರೆಯುವುದು. ಇದು ಸಾಮಾನ್ಯ ಸಾಧನೆಯೇನಲ್ಲ...
14 ಆಗಸ್ಟ್,2006

Sunday, August 13, 2006

ಸಂಚಿಕೆ-8 ಸಮಷ್ಟಿಯ ಹಿತ ದೈವಿಕ

ಆಗ ನೆರೆದಿದ್ದ ಋಷಿವರ್ಯರೆಲ್ಲರ ಕಣ್ಣುಗಳು ಕುತೂಹಲದಿಂದ ಅರಳಿದ್ದವು. ಕಿವಿಗಳು ಅಗಲವಾದವು. ನಾರದರ ಸಂದೇಹವೇನಿರಬಹುದು? ಎಂದು ಅವರೆಲ್ಲರೂ ಕೇಳಲು ಕಾತರರಾದರು-

ದೇವರ್ಷಿಗಳು ಮುಂದುವರೆದು ಹೇಳುತ್ತಾ,
“ಈ ದಿಸೆಯಲ್ಲಿ ನೀವು ಸಮಷ್ಟಿಗೆ ಮಂಗಳವನ್ನುಂಟು ಮಾಡುವ ಮಹಾಯಜ್ಞ ಕೈಗೊಂಡಿರುವಿರಿ. ಅತಿ ಮುಖ್ಯ ಅಂಶವೆಂದರೆ, ಹವಿಸ್ಸನ್ನು ಅಂದರೆ, ಯಜ್ಞದ ಉತ್ಕೃಷ್ಟಫಲವನ್ನು ಜಗತ್ತಿನ ಅಸ್ತಿತ್ವಕ್ಕೆ ಕಾರಣನಾದ ಯಾವ ಸತ್ ಶಕ್ತಿ ಸ್ವರೂಪನಿಗೆ ಅರ್ಪಿಸಲಿದ್ದೀರಿ? ಈ ಮಹೋನ್ನತ ಜ್ಞಾನ ಯಜ್ಞದ ಅಧಿಪತಿ ಒಬ್ಬನೇ ಇರಬೇಕಲ್ಲವೇ?” ಮಾತಿಗೆ ಕೊಂಚ ವಿರಾಮ ಹಾಕಿದ ನಾರದರು ಸಭೆಯ ಮುಂದೆ ಒಂದು ಜಟಿಲವಾದ ಪ್ರಶ್ನೆಯನ್ನೇ ಇಟ್ಟಿದ್ದರು.

ಸ್ವಲ್ಪ ಹೊತ್ತು ಸಭೆಯಲ್ಲೆಲ್ಲ ಗುಸುಗುಸು ಸದ್ದು!
ಓ ತ್ರಿಮೂರ್ತಿಗಳಿಗೆಲ್ಲರಿಗೂ ಯಜ್ಞಫಲ ಸಲ್ಲುವುದಿಲ್ಲವೇ? ಎಂಬ ಉದ್ದಾರ ಹೊರಟಿತು. ಹಾಗಾದರೆ, ದೇವರ್ಷಿಗಳು ಹೇಳುವಂತೆ ಯಜ್ಞಫಲ ಸ್ವೀಕರಿಸುವ ಏಕೈಕ ಸತ್ವಸ್ವರೂಪಿಯಾರು? ಎಂಬ ಜಿಜ್ಞಾಸೆ ಯಜ್ಞಶಾಲೆಯ ತುಂಬಾ ತಾಂಡವಾಡಿತ್ತು. ಕಶ್ಯಪರಾದಿಯಾಗಿ ಎಲ್ಲ ಪ್ರಾಜ್ಞರೂ ಪ್ರಗಲ್ಭಜ್ಞಾನಿಗಳೂ ಮುಖ ಮುಖ ನೋಡಿಕೊಂಡರು. ಸಭೆಯಲ್ಲಿ ಗಂಭೀರ ಮೌನ ಆವರಿಸಿತು. ಆಗ ನಾರದರು ಮತ್ತೊಮ್ಮೆ ಸಭೆಯನ್ನುದ್ದೇಶಿಸಿ,

“ದಾರ್ಶನಿಕ ಪ್ರಪಂಚದ ಋತ್ವಿಜರೇ,
ನೀವು ಸದ್ಯದಲ್ಲೆ ಜಗತ್ತಿನ ನಿತ್ಯ ನಿರಂತರತೆಗೆ ವಿಹಿತವಾದ ಏಕೈಕ ಸತ್ವಗುಣ ಸಂದೇಶವನ್ನು ಪ್ರತಿಪಾದಿಸಲು ಹೊರಡುತ್ತೀರಿ. ಆದ್ದರಿಂದ, ನೀವೆಲ್ಲರೂ ಸಾವಕಾಶ ಕುಳಿತು ಚಿಂತಿಸಿರಿ. ನಿಮ್ಮಲ್ಲೆ ಮಹಾ ತೇಜಸ್ವಿಗಳೂ ಪರಮ ಜ್ಞಾನಿಗಳೂ ಆದ ಹಿರಿಯರೊಬ್ಬರಿಗೆ ಈ ಸಂದೇಶದ ಸಲುವಾಗಿ ನಿರ್ಧರಿಸಲು ಬಿಡಿ”
-ಎಂದು ಅರ್ಥಗರ್ಭಿತವಾಗಿ ನುಡಿದ ನಾರದರು ಆ ಸಭೆಯಲ್ಲಿ ಎತ್ತರದ ಪೀಠವನ್ನಲಂಕರಿಸಿದ್ದ ಭೃಗುಮಹರ್ಷಿಯತ್ತ ಸೂಕ್ಷ್ಮನೋಟ ಬೀರಿದರು. ಮತ್ತೆ ನಸುನಗೆಯಿಂದಲೆ “ಶ್ರೀಮನ್ನಾರಾಯಣನು ನಿಮಗೆಲ್ಲರಿಗೆ ಮಂಗಳವನ್ನುಂಟುಮಾಡಲಿ” ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದ್ದರು.

ಈವರೆಗೆ ತಪೋವನದಲ್ಲಿ ಎಷ್ಟೋವಾದ ವಿವಾದಗಳು ಜರುಗಿದ್ದರೂ ಆಶ್ರಮದ ವಿಧಿಸಂಕಲ್ಪಗಳು, ಶ್ರವಣ ಮನನ, ನಿಧಿಧ್ಯಾಸಗಳು, ಉಪನಿಶತ್ ಸಿದ್ಧಾಂತ ಶ್ರುತಿಗಳು ಸತತವಾಗಿ ಸಾಗಿದ್ದು ಜ್ಞಾನಯಜ್ಞವು ಅಭಾಧಿತವಾಗಿ ವಿವಿಧಕಾರ್ಯಕಲಾಪಗಳು ಮುಂದುವರೆದಿದ್ದವು. ಅಲ್ಲಿ ವಿವಿಧ ಜ್ಞಾನ ಸಿದ್ಧಾಂತಗಳನ್ನು ತಿಳಿದವರು, ವೇದವಿದರು, ಕರ್ಮಕಾಂಡ ಪಂಡಿತರು, ಪ್ರಾಜ್ಞರು, ಪ್ರವೀಣರು, ನಿರುಕ್ತಪಾತಿಶಾಖ್ಯಗಳನ್ನು ಅಮೂಲಾಗ್ರ ಶೋಧಿಸಿದ ಮಹಾನ್ ಸಾಧಕರೂ ಸೇರಿದ್ದರೂ, ಅವರೆಲ್ಲರ ನಡುವೆಯೆ ಈ ಜಗದ ಅಸ್ತಿತ್ವ ಶಕ್ತಿಗೆ ಕಾರಣನೂ ಸಾತ್ವಿಕ ಸ್ವರೂಪನೂ ಆದ ದೇವನು ಯಾರು? ಎಂಬ ಜಿಜ್ಞಾಸೆ ಆದಿಶೇಷನ ಹೆಡೆಯಂತೆ ತಲೆ ಎತ್ತಿ ನಿಂತಿತ್ತು. ಕೆಲವರು ಸೃಷ್ಟಿಕರ್ತನೂ ಸತ್ಯಸ್ವರೂಪನೂ ಆದ ಬ್ರಹ್ಮದೇವರೆ ಎಂದರು. ಇನ್ನು ಕೆಲವರು ಸ್ಮಶಾನವಾಸಿಯೂ ವಿಷಕಂಠನೂ ಆದ ಪರಶಿವನೇ ಎಂದರು. ಮತ್ತೆ ಹಲವರು ಜಗತ್ಕಲ್ಯಾಣಕ್ಕಾಗಿ ಅನೇಕ ಅವತಾರಗಳನ್ನು ಮಾಡಿದವನೂ ಜನತೆಯ ಸಂಕಟಹರಣ ಸುಧಾರಕನೂ ಆದ ಮಹಾವಿಷ್ಣುವೇ ಸಾತ್ವಿಕ ಸ್ವರೂಪನೆಂದರು.

ಸಭಾಧ್ಯಕ್ಷರಾದ ಕಶ್ಯಪರ ಅಪ್ಪಣೆ ಪಡೆದು ಅಗಸ್ತ್ಯ ಋಷಿಗಳು ಹೀಗೆ ತುಲನೆ ಮಾಡಿದರು- “ಈ ಜಗತ್ಕಾರ್ಯಕಾರಣ ಸಂಬಂಧಗಳಲ್ಲಿ ಸತ್ವಗುಣ, ರಜೋಗುಣ, ಮತ್ತು ತಮೋಗುಣಗಳೆಂಬ ಮೂರು ಮುಖ್ಯಗುಣಗಳು ಕೆಲಸಮಾಡುತ್ತವೆ. ಇವು ಸಾಮಾನ್ಯ ಮನುಷ್ಯರಲ್ಲಿ ಮಾತ್ರವಲ್ಲದೇ ದೇವಾನುದೇವತೆಗಳಲ್ಲೂ ಮೈದೋರದಿರಲಾರವು, ಇವುಗಳಲ್ಲಿ ಮೊದಲನೆಯದಾದ ಸತ್ವಗುಣವೆ ಪ್ರಧಾನ ವಾದದ್ದು. ಇನ್ನೆರಡು ಗುಣಗಳೂ ಅದರ ಅಧೀನದಲ್ಲಿದ್ದರೇನೆ ಅಲ್ಲಿ ಸತ್ ಶಕ್ತಿ ಸದಾ ಜಾಗೃತವಾಗಿರುತ್ತದೆ. ನಾವು ಸಮಸ್ತರೆಲ್ಲರೂ ಸೇರಿ ಶುಭೇಚ್ಛೆಯಿಂದ ಶುಭಫಲ ಪಡೆಯಲಿಕ್ಕಾಗಿಯೆ ಮಾಡುವ ಈ ಯಜ್ಞಕಾರ್ಯದಲ್ಲಿ ಯಾರನ್ನು ಆರಾಧೀಸಬೇಕು? ಯಾವುದನ್ನು ಯಾರಿಗೆ ನಾವು ಅರ್ಪಿಸಬೇಕು? ಸಮಷ್ಟಿಯ ಹಿತ ಹೇಗೆ ಸಾಧಿಸಬೇಕೆಂಬುದು ಆತ್ಮ ನಿರೀಕ್ಷೆಣೆಯಾಗಿರುತ್ತದೆ...... 13 ಆಗಸ್ಟ್ ,2006

Tuesday, August 08, 2006

ಸಂಚಿಕೆ-7 ಬನ್ನಿ ವೇದ ಕಾಲಕ್ಕೆ

ಬನ್ನಿ ಓದುಗರೇ ನಾರದರ ಜೊತೆ ವೇದಕಾಲದ ಯಜ್ಞಭೂಮಿಗೆ ಭೇಟಿಕೊಡೋಣ..
ಪ್ರಾತಃಕಾಲದ ಒಂದು ದಿನ-ಗಂಗಾನದಿಯ ತೀರದ ಆಶ್ರಮಗಳಲ್ಲಿ ಸೂರ್ಯ ಕಿರಣಗಳ ಪ್ರಭೆ ಎಲ್ಲೆಡೆ ಪಸರಿಸಿತ್ತು. ಸುಪ್ರಭಾತದ ಪ್ರಶಾಂತತೆ ನೆಲೆಸಿತ್ತು. ನಾಲ್ಕೂ ದಿಕ್ಕುಗಳಿಂದ ಮಂದ ಮಾರುತವು ಬೀಸುತ್ತಿತ್ತು. ಸಮೀಪದ ಕಶ್ಯಪ ಮಹರ್ಷಿಗಳ ಆಶ್ರಮವು ಹೊಸ ಶೋಭೆಯಿಂದ ಕಂಗೊಳಿಸುತ್ತಿತ್ತು. ನಸುಕಿನಿಂದಲೆ ಅವರ ನೇತೃತ್ವದಲ್ಲಿ ಹೋಮ ಹವನಾದಿಗಳಿಗೆ ಭರದಿಂದ ಸಿದ್ಧತೆ ನಡೆದಿತ್ತು. ಆಶ್ರಮದ ವಟುಗಳು ವೇದಾಧ್ಯಯನ ನಿರತರಾಗಿದ್ದರು. ಸುತ್ತೆಲ್ಲ ವೇದ ಮಂತ್ರಗಳು ಸುಶ್ರ್ಯಾವ್ಯವಾಗಿ ಕೇಳಬುರುತ್ತಿತ್ತು. ಸ್ವರಸ್ತುತಿಗಳ ಏರಿಳಿತದಲಿ ಅಲೌಕಿಕವಾದ ಸಾಮಗಾನವು ಆ ನೈಮಿಷಾರಣ್ಯದ ವಾತಾವರಣವನ್ನೇ ವಿಶಿಷ್ಟವಾಗಿಸಿತ್ತು. ಹಲವಾರು ಋಷಿಗಳು ತಮ್ಮ ಪ್ರಾತಃ ಸಮಯಾಹ್ನಿಕಗಳನ್ನು ಅಧಯನವನ್ನು ಮುಗಿಸಿ ಮುಂದೆ ನಡೆಯಲಿರುವ ಮಹಾಯಜ್ಞಕ್ಕಾಗಿ ದರ್ಭೆ, ಸಮಿತ್ತು, ಜೇನುತುಪ್ಪ ಇತ್ಯಾದಿಗಳನ್ನು ತರಲು ಹೊರಟಿದ್ದರು. ಇದೇ ಸಮಯದಲ್ಲಿ ದೇವರ್ಷಿನಾರದರು ಈ ತಪೋವನವನ್ನು ಪ್ರವೇಶಿಸಿದರು. ಯಜ್ಞನಡೆಯಲಿರುವ ಸ್ಥಳಕ್ಕೆ ಆಗಮಿಸಿದ್ದರು. ಅವರು ಬರುತ್ತಿದ್ದಂತೆಯೆ “ದೇವರ್ಷಿಗಳು ಬಂದರು” ಎಂಬ ಹರ್ಷೋದ್ಗಾರವು ಮುಗಿಲು ಮುಟ್ಟಿತ್ತು.

ನಾರದರಿಗೆ ಅರ್ಘ್ಯಪಾದ್ಯಾದಿಗಳನ್ನು ಕೊಟ್ಟು ಉಪಚರಿಸಿ ಉಚಿತವಾದ ಆಸನದಲ್ಲಿ ಕೂರಿಸಲಾಯಿತು. ಹಿಂದೆಂದೂ ಕೇಳರಿಯದ ಮಹಾಯಜ್ಞಕ್ಕೆ ಅಲ್ಲಿ ಸಜ್ಞುಗೊಳಿಸುತ್ತಿದ್ದುದರಿಂದ ತತ್ ಕ್ಷಣವೆ ದೇವರ್ಷಿಗಳ ಉಪಸ್ಥಿತಿಯಲ್ಲಿ ಸಮಯೋಚಿತವಾದ ಸಭೆಯೊಂದು ಸೇರಿತ್ತು. ಮುಖ್ಯ ಅತಿಥಿಗಳು ತ್ರಿಕಾಜ್ಞಾನಿಗಳೂ ಆದ ನಾರದ ಮಹರ್ಷಿಗಳಿಂದ ಪ್ರಾಸ್ತಾವಿಕ ನುಡಿಗಳನ್ನು ಕೇಳಲು ಎಲ್ಲ ಋಷಿಪುಂಗವರೂ ಆಶ್ರಮವಾಸಿಗಳೂ ಕಾತರರಾದರು. ಆಗ ನಾರದರು ಸಭೆಯತ್ತ ಸಿಂಹಾವಲೋಕನ ಮಾಡಿದರು. ಗಂಭೀರ ಧ್ವನಿಯಲ್ಲಿ ಪುಟ್ಟದೊಂದು ಉಪನ್ಯಾಸ ಮಾಡಿದರು-

“ಮಹರ್ಷಿಗಳೆ ಜ್ಞಾನ ಸಂಪನ್ನರೇ,
ನೀವು ದಾರ್ಶನಿಕ ಪ್ರಪಂಚದ ಪ್ರತಿನಿಧಿಗಳು. ಆದಿ-ಅಂತ್ಯವನರಿತ ನೀವುಗಳೆ ಜ್ಞಾನ ಮತ್ತು ಧರ್ಮಬೋಧಕರಲ್ಲಿ ಪ್ರಥಮರು. ಆದಿಮಾನವನು ತನ್ನ ಆಲೋಚನೆಗಳನ್ನು ಬೆಳೆಸಿಕೊಳ್ಳಲು ನೆರವಾದವರು, ಈ ಲೋಕ ಜೀವನಕ್ಕೆ ಸಂಸ್ಕಾರಯುತವಾದ ನಿಮ್ಮ ಮೂಲಭೂತಕೊಡುಗೆಗಳು ಅಪಾರ. ಮಾನವನ ಧರ್ಮಸಂಸ್ಕೃತಿಗೆ ಎಲ್ಲ ಮಹರ್ಷಿಗಳು ಹಾಕಿದ ಅಡಿಪಾಯ ಶ್ಲಾಘನೀಯವಾದದ್ದು. ಮಾನವರಲ್ಲಿ ದೈವಿಕವೆನಿಸುವ ಸ್ವಭಾವಗಳಿಗೆ ಹಾಗೂ ಆ ಬಗೆಯ ಪ್ರೇರಣೆ,ಅನುಭೂತಿ ಅನುಭಾವಗಳಿಗೆ ಮಾರ್ಗದರ್ಶಕರಾದವರು ನಿಮ್ಮಂಥ ಮಹರ್ಷಿಗಳೇ... ನಿಮ್ಮ ತಪಃಶಕ್ತಿಯಿಂದಲೆ ಅತೀಂದ್ರಿಯ ಹಾಗೂ ಆಧ್ಯಾತ್ಮಿಕ ಶಕ್ತಿಯು ಸಾಕಾರ ತಳೆದದ್ದು. ನಿಮ್ಮ ಕೃಪಾಶೀರ್ವಾಗಳಿಗಾಗಿಯೆ ಮಹಾರಾಜರುಗಳೂ ಕಾಯುವರು. ಮಹರ್ಷಿಗಳೊಡನೆ ಚರ್ಚೆ ಸಮಾಲೋಚನೆಗಳೆಂದರೆ ಸದವಕಾಶವೇ. ಅವರೇ ರಾಜ್ಯದ ಹಿತ ಚಿಂತಕರೂ ಆಗಿರುವರು. ರಾಜಮಹಾರಾಜರ ಆಡಳಿತ ನಿರ್ವಹಣೆಯಲ್ಲಿ ಶಾಸನಗಳು ಶಾಸ್ತ್ರಗಳಲ್ಲಿವೆ. ಧಾರ್ಮಿಕ ನಂಬಿಕೆ ಸತ್ಚಾರಿತ್ರ್ಯ ಸಂಗತಿಗಳೆ ನಿಮ್ಮ ಅಧಿಕಾರ ವಾಣಿಗಳಾಗಿವೆ. ಆದರೆ, ಈ ಲೋಕದಲ್ಲಿ ಆಗುತ್ತಿರುವುದೇನು? ಜನರೊಳಗೆ ದ್ವೇಷ, ಅಸೂಯೆ, ಸ್ವಾರ್ಥಲಾಲಸೆ ಹೆ.ಚ್ಚಾಗಿವೆ. ಅಂತಃ ಕಲಹಗಳು ಬೆಳೆಯುತ್ತಿವೆ. ಆಸ್ಥಾನ ಶಾಸಕರಾದವರು ದ್ರೋಹಿಗಳಾದ್ದಾರೆ. ರಾಜ್ಯದಾಹ, ಧನದಾಹ, ಸ್ತ್ರೀವ್ಯಾಮೋಹ ನಿಲ್ಲದಾಗಿದೆ. ಎಲ್ಲೆಲ್ಲೂ ಕೊಲೆ, ಸುಲಿಗೆ ದರೋಡೆ ಅನ್ಯಾಯ ಅತ್ಯಾಚಾರಗಳೆ ಆಗಿರುವುವು. ಜನಜೀವನ ಅಸ್ತವ್ಯಸ್ಥವಾಗಿದೆ. ಜನಸಾಮಾನ್ಯರು ಕಂಗಾಲಾಗಿದ್ದಾರೆ. ದಿನವೂ ದಾರಿದ್ರ್ಯದಿಂದ ಬಳಲುತ್ತಿರುವರು ಹೆಚ್ಚುತ್ತಲೆ ಇದ್ದಾರೆ. ಧಾರ್ಮಿಕ ಶ್ರದ್ಧೆ, ದೈವನಂಬಿಕೆಗಳು ಕಾಣೆಯಾಗುತ್ತಿವೆ. ಕೆಲ ಬಡವರಂತೂ ಕೃದ್ಧರಾಗಿ ಮಾಡಬಾರದ ಕೃತ್ಯಗಳನ್ನೆ ಮಾಡುತ್ತಿರುವರು.

“ಮಹರ್ಷಿಗಳೆ, ನೀವೆಲ್ಲರೂ ಇಲ್ಲಿ ಒಂದು ಸದುದ್ದೇಶದಿಂದ ಕಲೆತಿದ್ದೀರಿ. “ಸರ್ವಜನಾಃ ಸುಖಿನೋಭವಂತು” ಎಂಬಂತೆ ಲೋಕ ಕಲ್ಯಾಣಾರ್ಥವಾಗಿ ಈ ಮಹಾ ಯಜ್ಞ ನಡೆಸಲಿದ್ದೀರಿ. ತುಂಬ ಸಂತೋಷ. ಯಜ್ಞಕಾಲದಲ್ಲಿ ಸ್ವರ್ಗದಿಂದ ದೇವತೆಗಳನ್ನು ಆಹ್ವಾನಿಸುವುದು, ಅವರಿಗೆ ಸತ್ಕರಿಸುವುದು, ಇಷ್ಟವಾದ ಪಾನಪೇಯಗಳನ್ನು ಒದಗಿಸುವುದು. ಎಲ್ಲರಿಗೂ ವಿನಿಯೋಗಿಸುವುದು. ನಿರಪೇಕ್ಷೆಯಿಂದಲೆ ಕ್ಷುದ್ರ ಬಯಕೆಗಳನ್ನು ವರ್ಜಿಸುವುದು, ಸತ್ಪಾತ್ರಿಗೆಂದೇ ದಾನ, ದ್ರವ್ಯತ್ಯಾಗಗಳನ್ನು ಮಾಡುವುದು. ಇಎಲ್ಲವೂ ಭಗವಂತನಿಗೆ ಪ್ರೀತ್ಯರ್ಥವೆಂದೇ ನಡೆಸುತ್ತೀರಿ. ನಿಜಕ್ಕೂ ಇದೊಂದು ಸರ್ವಜನ ಹಿತವಾದ ಕಾರ್ಯ, ಆದರೆ, ಮಹರ್ಷಿಗಳೇ ನನಗೊಂದು ಸಂದೇಹ” ಎಂದು ನಾರದರು ತಟ್ಟನೆ ಮಾತು ನಿಲ್ಲಿಸಿದ್ದರು....
-ಎಚ್.ಶಿವರಾಂ, 8,ಆಗಸ್ಟ್, 2006

Sunday, August 06, 2006

ಸಂಚಿಕೆ-6 ದೇವರು ಇಲ್ಲೇ ಏಕೆ?

ದೇವರ ದಶಅವತಾರಗಳ ಪ್ರಸ್ತಾಪ ಬಂದಾಗ, ಈ ದೇವರು ನಮ್ಮ ದೇಶದಲ್ಲೇ ಏಕೆ ದಶ ಅವತಾರಗಳನ್ನು ಮಾಡಿದ? ಎಂಬುದಾಗಿ, ಹಾಸ್ಯ ಮಾಡುವವರಿದ್ದಾರೆ. ಪ್ರಾಯಶಃ ಅವರಿಗೆ ನಮ್ಮ ನಾಗರಿಕತೆ ಮತ್ತು ಸಂಸ್ಕೃತಿ ಅದೆಷ್ಟು ಪ್ರಾಚೀನವಾದದ್ದು ಹಾಗೂ ಹೆಮ್ಮೆ ಪಡುವಂತಹದ್ದು ಎಂಬ ಅರಿವು ಇರಲಾರದು. ವಿಶ್ವದಲ್ಲಿ ಕ್ರಿಸ್ತ ಪೂರ್ವ 1,000 ವರ್ಷಗಳ ಅವಧಿಯಲ್ಲಿ ಹಿರಿಮೆಯ ಪರಾಕಾಷ್ಠೆಯನ್ನು ತಲುಪಿದ ನಾಗರಿಕತೆಗಳೆಂದರೆ– ಪಶ್ಚಿಮದಲ್ಲಿ ಗ್ರೀಕರದು, ಪೂರ್ವದಲ್ಲಿ ಆರ್ಯರದು. ಇವೆರಡೂ ಒಂದೇ ಮೂಲದ ಜನಾಂಗಗಳು. ಮಧ್ಯ ಏಷ್ಯದಿಂದ ಅಲೆಮಾರಿಗಳಾಗಿ ಹೊರಟವರು ಇವರ ಪೂರ್ವಜರು. ಆರ್ಯರು ಗಂಗಾ ನದಿ ಪಾತ್ರದವರೆಗೂ ಸಾಗಿ ಬಂದರು. ಅವರು ನೆಲೆಸಿದ ಪ್ರದೇಶ ಆರ್ಯಾವರ್ತವಾಯಿತು. ಮುಂದೆ “ಭರತವರ್ಷ”ವಾಯಿತು .

ವಿಶ್ವನಾಗರಿಕತೆಗೆ ಅಮೂಲ್ಯ ಕೊಡುಗೆ ಎಂದರೆ, ಆರ್ಯವಿರಚಿತ ಋಗ್ವೇದ, ಇತರ ವೇದಗಳು, ಆರಣ್ಯಕ-ಸಂಹಿತೆ– ಉಪನಿಷತ್ತುಗಳು. ಹಾಗೂ ರಾಮಾಯಣ ಮಹಾಭಾರತಗಳು. ಆದಿ ಮಾನವನಿಗೆ ಕ್ಷಿಪ್ರಗತಿಯಲ್ಲಿ ಅವ್ಯಕ್ತವಾದ ಉಜ್ವಲವಾದ ಆ ಸತ್ ಶಕ್ತಿಯ ಪ್ರೇರೇಪಣೆ ಆದದ್ದು ಇದೇ ನಮ್ಮ ನೆಲದಲ್ಲಿ, ಅದೆಂಥ ವೈಶಿಷ್ಟ್ಯ! ಜಲ್ವಂತ ವೈಖರಿ! ಮೊದಲಿಗೆ ನೆಲೆಯೂರಿದ ತಾತ್ವಿಕ ಚಿಂತನೆಯಲ್ಲೂ, ಈ ಶ್ವರವಾದಿಗಳು, ನಿರೀಶ್ವರವಾದಿಗಳು, ಆರಾಧಕರು-ಸ್ತುತಿಪಾಠಕರು, ವಿಮರ್ಶಕರು-ನಿಂದಕರು ಇವರೆಲ್ಲರ ಜಿಜ್ಞಾಸೆ, ಮಂಥನಗಳಿಂದ ಚಿಮ್ಮಿತು ಹೊಸ ಚಿಲುಮೆ. ಪ್ರಕೃತಿ, ಗಣಿತ,ಜೋತಿಷ್ಯ, ಶಿಲ್ಪ, ವಾಸ್ತು ಶಿಲ್ಪ, ಕಲೆ, ಸಾಹಿತ್ಯ ಸೌಂದರ್ಯದ ಉಪಾಸನೆಗಳು ಇವುಗಳಲ್ಲೆ ವೈಜ್ಞಾನಿಕ ನೆಲೆಗಟ್ಟು ಎಲ್ಲಸೇರಿದಂತೆಯೆ ಇಡೀ ವಿಶ್ವದ ಗಮನ ಸೆಳೆದವು. ತಾತ್ವಿಕರು-ರಸಋಷಿಗಳು,ಸಿದ್ಧಿಪುರುಷರು ಇವರೆಲ್ಲರ ವಿಚಾರದ ಅಲೆಗಳು ಹತ್ತು ದಿಕ್ಕುಗಳಿಗೆ ಪಸರಿಸಿದವು; ಮನುಷ್ಯನ ಆಂತರ್ಯದಲ್ಲಿಯೆ ಹುದುಗಿದ್ದ ಮಾನವತೆ-ದೈವಿಕತೆಯ ಕ್ಷಾತ್ರ ತೇಜಸ್ಸನ್ನು ಬಡಿದೆಬ್ಬಿಸಿದವು;ದೈವೀ ಪ್ರಭೆಯ ದರ್ಶನ ಮಾಡಿಸಿದವು. ಆ ದೈವಿಕತೆಯನ್ನೆ ಸಾಕ್ಷಾತ್ಕರಿಸಿಕೊಂಡ ಪ್ರಗಲ್ಭಜ್ಞಾನಿಗಳು ದಾರ್ಶನಿಕ ಪ್ರಪಂಚದ ಋತ್ವಿಜರಾದರು.

ಬುದ್ಧನ ಕೊನೆಯ ಕಾಲದಲ್ಲಿ ಹಿರಾಡಟಸ್ ಎಂಬ ಜಗತ್ತಿನ ಪ್ರಪಥಮ ಇತಿಹಾಸಕಾರ ಇಲ್ಲೇ ಇದ್ದ. ನಮ್ಮ ಋಷಿಮುನಿಗಳು ತಮ್ಮ ಸಾತ್ವಿಕ ತೇಜಸ್ಸಿನಿಂದ ಕಠಿಣ ತಪಸ್ಸು- ಪಾರಮಾರ್ಥಿಕ ಚಿಂತನೆ ಸಾಧನೆಗಳಿಂದ ಅನುಭಾವಿಗಳಾದರು; ಪುರಾಣ ಇತಿಹಾಸಕಾರರಾದರು; ಮಾನವ ಜನಾಂಗಕ್ಕೆ ಅವರ ಕೊಡುಗೆ ಅತ್ಯಮೂಲ್ಯ... ಅವರ ಕೊಡುಗೆಯ ಮೌಲ್ಯಗಳ ಎಳೆ ಎಳೆ ಜಗ್ಗಿ ಎಳೆದಷ್ಟೂ ನಾವು ಮುಗಿಲೆತ್ತರಕೇರುತ್ತೇವೆ; ಆತ್ಮವಿದ್ಯೆಯ ಪಾಠ ಕಲಿಯುತ್ತಲೇ ಇರುತ್ತೇವೆ. ಇಂತಹ ಪುಣ್ಯ ಭೂಮಿಯಲ್ಲೆ ದೇವರು ದಶವತಾರಗಳನ್ನು ಮಾಡಿದನೆಂಬುದು ಕೇವಲ ಸಂಪೂರ್ಣ ಆಧಾರವಿಲ್ಲದ ಪರಿಕಲ್ಪನೆಯೇನಲ್ಲ.. ನಮ್ಮ ಪುರಾಣಕಥೆ- ಮಹಾಕಾವ್ಯಗಳಲ್ಲಿ ಕಂಡುಬರುವ ಸನಾತನ ನಂಬಿಕೆಗಳನ್ನು ತೆಗಳುವಷ್ಟು ಮೂರ್ಖರೂ ನಾವಾಗಬಾರದಲ್ಲ...

ಈ ನಮ್ಮ ಸಂಸ್ಕತಿ ಪರಂಪರೆಯಲ್ಲಿ ನಾವು ಕಂಡುಂಡ ದೈವಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು, ಸಾಹಿತ್ಯ ಕಲೆಗಳಲ್ಲಿನ ರಸಾಭಿಜ್ಞತೆಯಲ್ಲಿರುವ ವೈವಿಧ್ಯತೆಯನ್ನು ಬೇರೆ ಇನ್ನೆಲ್ಲೂ ಕಾಣಲಾರೆವು;ಇಲ್ಲಿ ಜನ್ಮ ತಳೆದುದಕ್ಕೆ ನಾವು ಧನ್ಯರು. ಆದರೇನು, ಮುಂದಿನ ಯುವ ಜನಾಂಗ ನಮ್ಮ ಸಂಸ್ಕೃತಿ ಪರಂಪರೆಯಿಂದ ದೂರ ಸರಿಯುತ್ತಿರುವುದನ್ನು ಕಾಣುವ ಸಂದರ್ಭಗಳಲ್ಲಿ ನಾವು ಅತೀವ ವ್ಯಾಕುಲ ಚಿತ್ತರು. ಅಷ್ಟಕ್ಕೂ ನಮ್ಮ ವೇದಕಾಲದ ದಾಖಲೆಗಳು ಎಂದಿಗೂ ಅವಿಸ್ಮರಣೀಯವೆ...


....“ನಾರದ ಯಾವೊಂದು ಸತ್ಶಶಕ್ತಿಯಿಂದ ಮಾತ್ರವೆ ಜಗತ್ತು ಇಂದಿಗೂ ಅಸ್ತತ್ವದಲ್ಲಿರುವುದೋ ಅದೇ ಶ್ರೇಷ್ಠವೆಂದೂ, ಆ ಸರ್ವಶಕ್ತಿಗಾಗಿಯೆ ಪ್ರೀತ್ಯರ್ಥವಾದ ನಮ್ಮ ಸತ್ಕರ್ಮಗಳ ಫಲವೂ ಆ ದಿವ್ಯಶಕ್ತಿಗೇ ಸಲ್ಲುವುದೆಂದು ತಿಳಿಯಲು, ಆ ಮಹಾವಿಷ್ಟು ಇನ್ನೊಂದು ಅವತಾರವನ್ನೆ ಮಾಡಬೇಕಾಗುವುದೇನೋ...” ಎಂದು ನಾರದರಿಗೆ ಬ್ರಹ್ಮದೇವ ನಸುನಗುತ್ತ ಹೇಳಿದಾಗ,
“ಏಕಾಗಬಾರದು ತಂದೆ? ಮಹಾವಿಷ್ಣು ಮೊದಲೆ ಅವತಾರ ಪ್ರಿಯನಲ್ಲವೇ? ಆತ ಇನ್ನೊಮ್ಮೆ ಅವತಾರ ಸ್ವರೂಪಿಯೆ ಆಗಿ ಧರೆಗಿಳಿದರೆ ಈ ಕಲಿಯುಗದಲ್ಲಿ ಲೋಕಕಲ್ಯಾಣಕ್ಕೆ ಅರ್ಥಬರುವುದಲ್ಲವೇ..?’’ನಾರದರೆಂದಾಗ
“ಇಂತಹದೊಂದು ಮಹತ್ಕಾರ್ಯದಲ್ಲಿ ನಿನ್ನ ಪಾಲೂ ಇರಬೇಕಲ್ಲವೇ ನಾರದ? ಇನ್ನು ನಿಧಾನಿಸುವುದೇಕೆ? ನೀನೂ ಪಾತ್ರ ಧಾರಿಯಾಗು. ಭೂಲೋಕದಲ್ಲಿ ಈಗಾಗಲೆ ಒಂದು ಮಹಾಯಜ್ಞಕ್ಕೆ ಸಿದ್ಧತೆ ಮಾಡುತ್ತಿರುವ ಮಹರ್ಷಿಗಳ ಬಳಿಗೆ ಹೋಗು, ತ್ರಿಮೂರ್ತಿಗಳಲ್ಲಿ ಸತ್ವಗುಣದ ಔನ್ನತ್ಯವುಳ್ಳವರು ಯಾರು? ಎಂಬ ನಿನ್ನ ಸಂದೇಹವನ್ನು ಅಲ್ಲೇ ನಿವಾರಿಸಿಕೊಳ್ಳಬಾರದೇಕೆ? ಈಗಲೇ ಭೂಲೋಕಕ್ಕೆ ಹೊರಡು ನಾರದ.” ಬ್ರಹ್ಮದೇವ ಮುಂದಿನ ಕಲ್ಯಾಣಕ್ಕೆ ಸೂಕ್ಷ್ಮಚಾಲನೆ ನೀಡಿದ್ದನು.
ಅದರೆ, ಈ ಸತ್ವಪರೀಕ್ಷೆ ತನಗೇ ಮೊದಲು ಆಗುವುದೆಂದು ಆ ಪರಬ್ರಹ್ಮನಿಗೂ ತಿಳಿಯದೇ ಹೋದದ್ದು ಆ ಜಗನ್ನಿಯಾಮಕ ಲಿಲೇಯೆ ಸರಿ.
-ಎಚ್.ಶಿವರಾಂ, 6 ಆಗಸ್ಟ್,2006

Saturday, August 05, 2006

ಸಂಚಿಕೆ-5 ನಮ್ಮ ಸತ್ಕರ್ಮ ಫಲವು

ಎಲ್ಲಕಾಲಕ್ಕೂ ಕೆಟ್ಟದ್ದೆಂಬುದು ಎದ್ದು ತೋರುವುದು. ತನಗೆ ತಾನು ಹೆದರಿದಾಗಲೆ ಎಲ್ಲ ಧರ್ಮ ಸೂಕ್ಷ್ಮಗಳೂ ತಿಳಿಯುವುದು. ತನ್ನೊಳಗಣ ಸತ್ವಗುಣದ ಮರ್ಮವೇನೆಂದು ಹೊಳೆಯುವುದು. ಆ ಗುಣವೇ ಪೌರುಷೇಯವಾಗುವುದು. ಪೂರ್ವ ಸಂಸ್ಕಾರವೂ ಅರ್ಥ ಪಡೆಯುವುದು. ಹಾಗೂ ಐಹಿಕ ಸಾಧನೆಗಳೂ ಸಿದ್ಧಿಸುವುದು. ಒಳ್ಳೆಯ ಮತ್ತು ಕೆಟ್ಟ ಸಂಸ್ಕಾಗಳು, ಅವುಗಳಿಗೆ ತಕ್ಕಂತೆಯೆ ಕರ್ಮಫಲಗಳು. ಎಂದಿಗೂ ದೇವರ ಅವತಾರ ಸ್ವರೂಪಗಳಲ್ಲಿ ಕಂಡು ಬರುವ ಜೀವನ ಸಿದ್ಧಾಂತಗಳು ಅನುಸರಣೀಯವೇ....

ನಾರದರು ಆಸನಾರೂಢರಾಗುತ್ತಿದ್ದಂತೆಯೆ ಅದೇ ಘಳಿಗೆಯಲ್ಲಿ ಬ್ರಹ್ಮದೇವರು ಕಣ್ತೆರೆದರು,
“ಪಿತಾಮಹ, ಅದೇನು ಸುಧೀರ್ಘ ಚಿಂತೆಯಲ್ಲಿ ಮುಳುಗಿದ್ದೀರಿ?” ನಾರದರು ವಿನಮ್ರತೆಯಿಂದ ಕೇಳಿದರು.
“ನಾರದ, ನಿನಗೆ ತಿಳಿಯದಿರುವುದೇನಿದೆ? ಭೂಲೋಕದ ಸ್ಥಿತಿಗತಿಗಳು, ಅಲ್ಲಿ ದಿನ ನಿತ್ಯವೂ ಹೆಚ್ಚುತ್ತಿರುವ ಜನ ಸಂಖ್ಯೆಯೂ, ಜನರ ಅಜ್ಞಾನ-ಅಂಧಕಾರವೂ, ಧರ್ಮಕ್ಷಯಿಸುತ್ತಿರುವುದೂ, ಧರ್ಮ ಸಂಪೂರ್ಣ ನಾಶವಾದರೆ ಸೂರ್ಯ ದಿನವೂ ಅಸ್ತಮಿಸಲಾರ. ಉರಿಯುತ್ತಲೇ ಇರುತ್ತಾನೆ. ಆಗ ಜಗತ್ತೇ ಧಗಧಗಿಸೀತು! ಯಾಕೆಂದರೆ, ಜನರೋ ತಮ್ಮ ತಮಂಧದ ಕೇಡಿನಿಂದಲೇ ಲೋಕ ಕಂಟಕರಾಗುತ್ತಿದ್ದಾರೆ. ಜಗತ್ತಿನ ಪ್ರಕೃತಿಯಲಿ ಎನೆಲ್ಲ ವಿಕೃತಿ-ಅನಾಹುತಗಳಿಗೆ ಕಾಣರಾಗುತ್ತಿದ್ದಾರೆ...”
“ಪಿತಾಮಹ, ಈ ಭೂಲೋಕದ ಜನರು ರಾಗದ್ವೇಷಗಳಿಗೆ ವಶರಾಗಿ ಧನಬಲ ದೇಹಬಲವೇ ಸರ್ವಸ್ವವೆಂದು ಬಗೆದಿದ್ದಾರೆ. ತಾವೂ ಕಷ್ಟಪಡದೇ ಕಷ್ಟಪಡುವವರನ್ನೂ ಕರ್ತವ್ಯ ನಿಷ್ಠರಾಗಿರುವವರನ್ನೂ ಹಿಂಸೆ, ಶೋಷಣೆ, ವಂಚನೆಗಳಿಂದ ದೋಚು ತ್ತಿರುವವರು ಹೆಚ್ಚುತ್ತಿದ್ದಾರೆ. ಹೆಣ್ಣನ್ನು ಗೌರವಿಸದೆ ಭೋಗವಸ್ತುವೆಂದೇ ತಿಳಿಯುತ್ತಾರೆ. ಗೃಹಿಣಿಯರೂ ಕೂಡ ಗೃಹಶಾಂತಿ, ನೆಮ್ಮದಿ ಕಾಣದೇ ಹೋಗುತ್ತಿದ್ದಾರೆ. ಅನ್ಯಾಯ,ಅಪಚಾರ,ಅತ್ಯಾಚಾರಗಳಿಂದಲೆ ಸುಖದ ಫಲಾಪೇಕ್ಷೆ ಮಾಡುವ ಜನರೇ ಹೆಚ್ಚುತ್ತಿದ್ದಾರೆ’’ ನಾರದರೆಂದರು.
“ಹೌದು, ನಾರದ, ಸುಖದ ಫಲಾನುಭವಿಗಳಾದಷ್ಟೂ ಫಲಾಪೇಕ್ಷೆಯೆ ಅವರಿಗೆ. ಪರಮಾರ್ಥವೆ ಬೇಡವಾಗಿದೆ. ಹಿಂದೆ ದ್ವಾಪರ ಯುಗದಲ್ಲಿ ಶ್ರೀಕೃಷ್ಣ ತನ್ನ ಭಗವದ್ಗೀತೆಯಲ್ಲಿ- “ಕರ್ಮಣ್ಯೇವಾಧಿಕಾರಸ್ತೇ ಮಾಫಲೇಶು ಶುಕದಾಚನ’’ ಎಂದು ಬೋಧಿಸಿದ್ದರೂ ಈ ಜನರು ಎಚ್ಚೆತ್ತುಕೊಂಡಿಲ್ಲ... ತಮ್ಮಕರ್ಮಫಲಗಳಿಗೆ ತಾವೇ ಅಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಅವೆಂಥ ಕರ್ಮಗಳೆ ಆದರೂ ಪುಣ್ಯ ಫಲವನ್ನೇ ಅಪೇಕ್ಷಿಸುತ್ತಾರೆ.... ಹೀಗೇ ಆದರೆ, ಲೋಕ ಕಲ್ಯಾಣವಾಗುವುದಾದರೂ ಹೇಗೆ ನಾರದ...?”
“ಭಗವತ್ ಪ್ರೇರಣೆಯಿಂದ ಇದೇ ಉದ್ದೇಶಕ್ಕಾಗಿ ಭೂಲೋಕದಲ್ಲಿ ಅನೇಕ ತಪಸ್ವಿಗಳು, ಮಹಾಜ್ಞಾನಿಗಳೂ ಸೇರಿ ಒಂದು ಮಹಾಯಜ್ಞಕ್ಕೆ ಸಿದ್ಧತೆ ನಡೆಸಿದ್ದಾರೆ. ಆದರೆ, ನನಗೊಂದು ಸಂದೇಹ ಪಿತಾಮಹ’’ ನಾರದರೆಂದರು.
“ಅದೇನು ಹೇಳು ನಾರದ”
“ಮಹರ್ಷಿಗಳು, ಮಹಾಜ್ಞಾನಿಗಳು ಎಲ್ಲರೂ ಸೇರಿ ನಿಷ್ಕಾಮ ಕರ್ಮಿಗಳಾಗಿಯೆ ಲೋಕಕಲ್ಯಾಣಾರ್ಥವಾಗಿ ಮಹಾಯಜ್ಞವನ್ನೇನೋ ಮಾಡುತ್ತಾರೆ. ಆದರೆ, ಆ ಮಹಾಯಜ್ಞದ ಹವಿಸ್ಸನ್ನು ಎಲ್ಲ ದೇವಾನುದೇವತೆಗಳಿಗೆ ಅರ್ಪಿಸುವರೋ ಅಥವಾ ಸಮಷ್ಟಿಗೆ ಮೂಲಾಧಾರವಾದ ಏಕೈಕ ಸತ್ ಶಕ್ತಿ ಸ್ವರೂಪನು ಯಾರೆಂದು ತಿಳಿದೇ ತಮ್ಮ ಯಜ್ಞಫಲವನ್ನು ಆ ಒಬ್ಬ ದೇವನಿಗೆ ಅರ್ಪಿಸುವರೊ ಎಂಬುದೇ ನನಗೆ ಸಂದೇಹಾಸ್ಪದ ವಿಷಯವಾಗಿದೆ.”ನಾರದರೆಂದರು.
“ನಾರದ, ಒಂದೆಡೆ ನಿಷ್ಕಾಮ ಕರ್ಮಿಗಳು ತಾವು ಮಾಡುವ ಸತ್ಕಾರ್ಯದಿಂದ ಇಡೀ ಸಮಷ್ಟಿಗೆ ಒಳಿತಾದರೆ ಸಾಕೆಂದು ತಿಳಿಯುವರು. ಅದರ ಫಲ ಯಾವೊಂದು ಶಕ್ತಿ ಸ್ವರೂಪಕ್ಕೆ ಸಲ್ಲುವುದೆಂದೇನೂ ಚಿಂತಿಸಲಾರರು. ಇನ್ನೊಂದೆಡೆ ಪಾಪಭಿತಿಯೆ ಇಲ್ಲದ ಜನರು ತಮ್ಮ ಹೀನಕೃತ್ಯಗಳಿಗೇ ಪುಣ್ಯಕ್ಕೆ ಸಮನಾದ ಫಲವನ್ನೇ ಅಪೇಕ್ಷಿಸುವರು. ಆ ಫಲವೋ ಅದ್ಯಾವ ದೈತ್ಯ ಶಕ್ತಿಯಿಂದ ಲಭಿಸಿದರೂ ಸರಿಯೆ ಅವರಿಗೆ, ಭೂಲೋಕದ ವೈಚಿತ್ರ್ಯವೆ ಹೀಗೆ. ಆದರೆ,ನಾರದ ಯಾವೊಂದು ಸತ್ಶಶಕ್ತಿಯಿಂದ ಮಾತ್ರವೆ ಜಗತ್ತು ಇಂದಿಗೂ ಅಸ್ತತ್ವದಲ್ಲಿರುವುದೋ ಅದೇ ಶ್ರೇಷ್ಠವೆಂದೂ, ಆ ಸರ್ವಶಕ್ತಿಗಾಗಿಯೆ ಪ್ರೀತ್ಯರ್ಥವಾದ ನಮ್ಮ ಸತ್ಕರ್ಮಗಳ ಫಲವೂ ಆ ದಿವ್ಯಶಕ್ತಿಗೇ ಸಲ್ಲುವುದೆಂದು ತಿಳಿಯಲು, ಆ ಮಹಾವಿಷ್ಟು ಇನ್ನೊಂದು ಅವತಾರವನ್ನೆ ಮಾಡಬೇಕಾ ಗುವುದೇನೋ...”ಬ್ರಹ್ಮದೇವ ನಸುನಕ್ಕನು.
-ಎಚ್.ಶಿವರಾಂ, 5 ಆಗಸ್ಟ್ , 2006

Friday, August 04, 2006

ಸಂಚಿಕೆ-4 ಮಾನವತ್ವದ ಅಳತೆಗೋಲು

ತ್ರಿಮೂರ್ತಿಗಳಾದ ಬ್ರಹ್ಮ,ವಿಷ್ಣು ಮಹೇಶ್ವರರಿಗೆ ಸತ್ವ ಪರೀಕ್ಷೆ! ಅಂದರೆ, ಈ ಮೂವರಲ್ಲಿ ಯಾರು ಸಾತ್ವಿಕ ಸಂಪನ್ನರು? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದರಿಂದಲೇ ಶ್ರೀ ವೆಂಕಟೇಶ ಪುರಾಣ ಕಥಾನಕದ ಆರಂಭ. ಮನುಷ್ಯರ ಜೀವನದಲ್ಲೂ ಅಡಿಗಡಿಗೆ ಸತ್ವ ಪರೀಕ್ಷೆಗಳು ಆಗುತ್ತಲೇ ಇರುತ್ತವೆಯಲ್ಲ...! ನಾವೆಲ್ಲರೂ ಸಾತ್ವಿಕ ಸಂಪನ್ನರೆಂದು ಘಂಟಾಘೋಷವಾಗಿ ಹೇಳಲಾರೆವಲ್ಲ... ಹಾಗೆಂದು ನಾವು ಸಭ್ಯರೇನಲ್ಲ ಎಂಬ ಅರ್ಥವಲ್ಲ. ಅಥವಾ ನಾವು ಸಭ್ಯರಾಗಿರಲು ಇಚ್ಛಿಸುವುದಿಲ್ಲವೆಂದೂ ನೇರವಾಗಿ ಹೇಳಿಬಿಡಲಾರೆವು. ಸಭ್ಯತೆಯ ಸೋಗಿನಲ್ಲಿ, ರಾಕ್ಷಸ ಕೃತ್ಯವೆಸಗುವವರಿಗಂತೂ ಕಡಿಮೆಯೇನಿಲ್ಲ. ತಮಗೆ ಸತ್ವಪರೀಕ್ಷೆ ಎದುರಾಯಿತೆಂದರೆ ಸಾಕು, ಎದುರಿಸಲಾಗದೇನೆ ಸಂಪೂರ್ಣವಾಗಿ ಸಾತ್ವಿಕಪ್ರವೃತ್ತಿಯಿಂದಲೆ ದೂರವಾಗಿ ಮೋಸ, ವಂಚನೆ, ನೀಚತನಕ್ಕಿಳಿಯುವವರೇ ಇದ್ದಾರೆ. ಎಷ್ಟೇ ಕಷ್ಟಕಾರ್ಪಣ್ಯಗಳು ಬಂದರೂ ಕೂಡ ತಮ್ಮ ಸಾತ್ವಿಕತೆ, ತತ್ವನಿಷ್ಠೆಯನ್ನು ಮೀರಿ ಹೋಗದ ಮಹಾನುಭಾವರು ಕಡಿಮೆ ಯಾದರೂ ಇಂದಿಗೂ ಇದ್ದಾರಲ್ಲ... ಅವರ ಸಂಖ್ಯ ನಾಮಾವಶೇಷವಾದರೆ ಜಗತ್ತಿನ ಗತಿಯೇನು....ಅದನ್ನೇ ಬ್ರಹ್ಮದೇವ ಚಿಂತಿಸ ತೊಡಗಿದ್ದಾನೆ.. ಬನ್ನಿ ಅವನ ಸತ್ಯಲೋಕದಲ್ಲೇನು ನಡೆಯುತ್ತದೆ ನೋಡೋಣ..

ಸೂರ್ಯೋದಯ ಸೂರ್ಯಾಸ್ತಗಳಲ್ಲಿ ಗ್ರಹಗಳ ನಿರಂತರ ಚಲನೆ. ಈ ಚಲನೆಯಲ್ಲಿ ನಿಖರವಾದ ಪರಿಕ್ರಮವೊಂದಿದೆ. ಇದನ್ನೇ ಋತ’ ವೆಂದು ವೇದಗಳಲ್ಲಿ ಹೇಳಿರುವುದು. ಚತುರ್ಮುಖ ಬ್ರಹ್ಮ ನಾಲ್ಕು ವೇದಗಳ ಉಪಾಸಕ. ತನ್ನದೇ ಸೃಷ್ಟಿಯಲ್ಲಿ ವೇದೋಪಾಸಕರಿಗೆಲ್ಲ ತಾನೂ ಉಪಾಸಕನೇ. “ಋತ”ವೆಂಬುದು ಋಜುವಾತಾಗಿರುವುದೂ “ಸತ್” ಶಕ್ತಿಯಿಂದಲೇ. ಯಾವಾಗಲೂ ನಾವು ನೆನಪಿನಲ್ಲಿಡಬೇಕು;ಜಗದ ವಿಷಮತೆಗೆ ದೇವನು ಹೊಣೆಯಾಗಲಾರ. ಇಲ್ಲಿ ಜೀವಿಗಳು ನಡೆಸುವ ಪಾಪಕರ್ಮಗಳೇ ಕಾರಣ. ನೋಡಿ, ಸಮಸ್ತರಿಗೂ ಬುವಿಯಲ್ಲಿ ಈ ಭವಬಂಧನ ಹರಿದೊಗೆಯಲಂತು ಇದೆ ಮುಕ್ತ ಅವಕಾಶ. ಆದರೆ, ಇಲ್ಲಿ ಹರಿದುಕೊಳ್ಳುವ ಬಗೆಯಲ್ಲಿ ಕೋಲಾಹಲಗಳು, ವಿಚಿತ್ರ, ವಿಲಕ್ಷಣಗಳು. ಜನರೋ ಬಹುತೇಕ ಪುಣ್ಯದ ಕೆಲಸ ಮಾಡುವುದಂತಿರಲಿ, ಸದಾ ಸುಖಾಪೇಕ್ಷೆಯಲ್ಲಿರುತ್ತಾರೆ; ಅದು ತಪ್ಪಲ್ಲ. ತಾವು ಮಾಡಿದ ತಪ್ಪುಗಳೆಷ್ಟೋ ಇದ್ದರೂ ಪುಣ್ಯಫಲಬೇಕವರಿಗೆ, ಪ್ರಯತ್ನಪೂರ್ವಕ ಪಾಪ ಕೂಪದಲ್ಲೇ ನಿರ್ಲಕ್ಷ್ಯದಿಂದ ಇರುವವರೆಷ್ಟೋ... ಹೌದು, ಇಲ್ಲಿ ಹಿಂಸೆ,ಶೋಷಣೆಯೆ ಮೇಲಾಗುತ್ತಿದೆಯಲ್ಲ... ಮಾನವತ್ವದ ಅಳತೆಗೋಲೆಂಬ ದೈವತ್ವವೇ ಕಾಣೆಯಾಗುತ್ತಿದೆಯಲ್ಲ... ಸಭ್ಯಜೀವನಕ್ಕಾಗಿ ಸದಾ ಸಾತ್ವಿಕ ಶಕ್ತಿಯು ಪ್ರಭಾವ ಬೀರುತ್ತಲೇ ಇರಬೇಕು; ತಾನಿದ್ದೇನೆ;ಭಯಪಡದಿರಿ ಎನ್ನಬೇಕಲ್ಲವೇ... ಹೀಗೆ ಬ್ರಹ್ಮದೇವ ಕಣ್ಮುಚ್ಚಿ ತನ್ನ ಸತ್ಯಲೋಕದಲ್ಲಿ ಚಿಂತಿಸುತ್ತಲೇ ಕುಳಿತಿದ್ದಾನೆ...

ಸರಸ್ವತಿಯ ವೀಣೆಯ ತಂತಿಗಳು ಅವ್ಯಾಹತವಾಗಿ ಝೇಂಕರಿಸಿವೆ. ಗಾಯನ ಪ್ರವಾಹ ಒಂದೇ ಸಮನೆ ಹರಿದಿದೆ. ಸಂಗೀತ ಸ್ವರಗಳ ಏರಿಳಿತದಲಿ ಸತ್ಯಲೋಕದ ಹೃದಯವೇ ಕಂಪಿಸಿದೆ. ಇಂದ್ರಾದಿ ದೇವತೆಗಳು, ಸಪ್ತ ಋಷಿಗಳು, ಅಷ್ಟದಿಕ್ಪಾಲಕರು ತಲ್ಲಣಿಸಿಹೋಗಿದ್ದಾರೆ. ಪದ್ಮಾಸನದಲ್ಲಿದ್ದ ಬ್ರಹ್ಮದೇವ ಸುಪ್ರಸನ್ನಃನಾಗಲಿಲ್ಲ; ಆತ ಇಲ್ಲಿದ್ದರೆ ತಾನೆ? ಜೀವಕೋಟಿಗಳ ಜಾಲದಲ್ಲಿ, ಅವುಗಳ ಉಳುವಿನ ಚಿಂತನೆಯಲ್ಲಿ ಮನುಷ್ಯರನ್ನು ಜಾಗೃತಗೊಳಿಸುವಲ್ಲಿ, ಭೂಲೋಕವನ್ನು ಸುವ್ಯಸ್ತಿತಗೊಳಿಸುವ ದೀರ್ಘಾಲೋಚನೆಯಲ್ಲಿಯೆ ಮುಳುಗಿ ಹೋಗಿದ್ದಾನೆ. ಭವಸಾಗರದಲ್ಲಿ ತಾನೂ ಮಿಂದು ತಳೆದಂಥ ಮೌನ ಮುದ್ರೆ! ಮೌನದ ಎಲ್ಲೆಯನ್ನು ಮೀರುವಂತಹ ಯೋಗ ಮುದ್ರೆ!! ಆದರೂ, ಅವ್ಯಕ್ತವಾದ ವ್ಯಾಕುಲವೇದನೆ; ಆತನ ಸತ್ಯಲೋಕದಲ್ಲೇ. ಅಲ್ಲಿಂದಲೆ ಆ ಸೃಷ್ಟಿಕರ್ತನಿಗೂ ಅರಿವಿಲ್ಲದಂತೆಯೆ ಮುಂದೊಂದು ಲೋಕಕಲ್ಯಾಣಾರ್ಥಕ್ಕೆ ನಾಂದಿಯಾಗುವಂತಹ ಸೂಚನೆ....

ಅದೇ ಸಮಯಕ್ಕೆ ನಾರದ ಪ್ರವೇಶ. ನಾರದರು ದೇವರ್ಷಿಗಳು, ತ್ರಿಕಾಲಜ್ಞಾನಿಗಳು, ಭೂತ ಭವಿಷ್ಯತ್ತುಗಳಿಗೆ ಭಾಷ್ಯ ಬರೆಯುವವರು. ಬ್ರಹ್ಮನ ವರ ಪುತ್ರರು. ಎಲ್ಲ ದೈವಿಕ ಹಾಗೂ ಪ್ರಾಪಂಚಿಕ ಪರಿವರ್ತನೆಯ ಮಾರ್ಗದಲ್ಲಿ ತ್ರಿಲೋಕ ಸಂಚಾರಿಗಳಾಗಿ ಅವ್ಯಕ್ತ ಪ್ರೇರಣೆ ಪಡೆಯುತ್ತಾ ಅದರಂತೆ ಕಾರ್ಯೋನ್ಮುಖರಾಗುವವರು. ಬ್ರಹ್ಮನ ಸತ್ಯ ಲೋಕ ಪ್ರವೇಶಿಸಿದ ನಾರದರು ಬ್ರಹ್ಮದೇವನಿಗೆ ಅಭಿವಾದನ ಮಾಡಿದರು. ಮಾತೆ ಸರಸ್ವತಿ ದೇವಿಗೂ ಕೂಡ. ಬ್ರಹ್ಮದೇವ ಕಣ್ತೆರೆಯಲಿಲ್ಲ. ನಾರದರೂ ಆದರ ಆತಿಥ್ಯವನ್ನು ಬಯಸಿ ಬಂದವರಲ್ಲವಲ್ಲ! ಎಷ್ಟೇ ಆಗಲಿ, ಬ್ರಹ್ಮದೇವ ಅವರಿಗೆ ಪಿತಾಮಹ. ಇಲ್ಲೆಂದಿಗೂ ತಮಗಿದೆ ತಮ್ಮದೇ ಆದ ಉಚಿತ ಗೌರವ. ತಾವು ತಂದೆಯ ಕೃಪಾದೃಷ್ಟಿಗಾಗಿಯೆ ಕಾಯಬೇಕಾಗುವುದೂ ನ್ಯಾಯಸಮ್ಮತವೇ ಎಂದು ನಾರದರು ಯೋಚಿಸಿದರು. ತಾವೇ ಸಭೆಯಲ್ಲಿ ಮುನ್ನಡೆದು ಆಸನಾರೂಢರಾದರು.
-ಎಚ್.ಶಿವರಾಂ, 4 ಆಗಸ್ಟ್, 2006

Thursday, August 03, 2006

ಸಂಚಿಕೆ-3 ದೇವರು ಎಲ್ಲಿದ್ದಾನೆ?

ದೇವರು ಎಲ್ಲಿದ್ದಾನೆ? ಇಲ್ಲ ಅವನು ಇದ್ದಿದ್ದರೆ ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ ಎಂದು ಹೇಳುತ್ತೇವೆ. ಅಂಥವರು ಈಗಾಗಲೇ ಹೇಳಿದಂತೆ ಈ ಜಗತ್ತಿನ ತ್ರಿಗುಣಾತ್ಮಕ ತತ್ವವನ್ನು ಮನಗಾಣಬೇಕಾಗುತ್ತದೆ. ಈಗ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಪರಮ ಪಾಪಿಗಳೂ ಹೆಚ್ಚುತ್ತಲೇ ಇದ್ದಾರಷ್ಟೇ... ಕೇವಲ ಕಾಲುಭಾಗ ಮಾತ್ರವೆ ಆದರೂ ಸಾತ್ವಿಕ ಶಕ್ತಿ ಯಾವಾಗಲೂ ಬೆಂಕಿ ಮುಚ್ಚಿದ ಕೆಂಡದಂತೆಯೆ ಇರುತ್ತದೆಯಲ್ಲ... ಅದು ಸಿಡಿದೆದ್ದ ಸಂದರ್ಭಗಳಲ್ಲೆಲ್ಲ ಪಾಪಿಗಳ ದಮನವಾಗುತ್ತಲೆ ಇರುತ್ತದೆಯಾದರೂ ನಾವು ಅವರ ಸಂಖ್ಯೆ ಹೆಚ್ಚುತ್ತಲೆ ಇರುವುದು ಇನ್ನೂ ನಡೆದೇ ತೀರುವುದರಿಂದ, ಎಷ್ಟೇ ದುಷ್ಟ ನಿಗ್ರಹವಾದರೂ ಕೂಡ ನಮಗೆ ತೃಪ್ತಿ ಇಲ್ಲವಾಗಿರುತ್ತದೆ.

ದೇವರಿಲ್ಲ ಎಂದು ಸುಲಭವಾಗಿ ಹೇಳಿಬಿಡುವ ವ್ಯಕ್ತಿ ತಾನು ಸ್ವತಃ ದೇವರೇ ಆಗಿರಬೇಕಷ್ಟೇ. ಆತನ ಅಪರಾಧಗಳಿಗೆ ಕ್ಷಮೆ ಎಂಬುದೇ ಇಲ್ಲವಲ್ಲ... ! ಹಾಗೆಯೆ, ದೇವರಿದ್ದಾನೆಂದು ಪರಮ ಭಕ್ತಿಯಿಂದ ಮಾಡಬಾರದ ಪಾತಕಗಳನ್ನೂ ಮಾಡುವ ವ್ಯಕ್ತಿ ಕೂಡ ಕ್ಷಮಾರ್ಹನಲ್ಲ; ಅವನಿಗೆ ಆ ದೇವರೇ ಅವನ ಜೀವಿತದಲ್ಲಿ ನಾವೇ ಕಾಣುವಂತೆ ಶಿಕ್ಷೆ ವಿಧಿಸದಿರಲಾರ. ಶಿಶುಪಾಲ ನೂರೊಂದು ತಪ್ಪು ಮಾಡುವವರೆಗೆ ಶ್ರೀ ಕೃಷ್ಣ ಕಾದು ಕುಳಿತವನಂತೆ ನಾವು ಅಂಥ ಪಾತಕಿಗಳ ಪಾಪದ ಕೊಡ ತುಂಬುವ ತನಕವೂ ಕಾಯುವುದು ಅನಿವಾರ್ಯ.....

ದೇವರು, ಮನುಷ್ಯನಿಗೆ ದೈವತ್ವದಲ್ಲಿ ನಂಬಿಕೆ ಎಂದರೆ-ಸತ್ಯ ಧರ್ಮ,ಪ್ರಾಮಾಣಿಕತೆ, ಇತರರಿಗೆ ಉಪದ್ರವ ಕೊಡದೇನೆ, ದ್ವೇಷಾಸೂಯೆಗಳಿಗೆ ಮನ ತೆರದೇನೆ, ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಲೇ ಬದುಕನ್ನು ನಿಭಾಯಿಸುವುದು. ಯಾವಾಗಲೂ, ಸಭ್ಯರಿಗೆ, ಜ್ಞಾನಿಗಳಿಗೇ ಈ ಜಗತ್ತಿನಲ್ಲಿ ತೊಂದರೆಗಳು ಅಧಿಕ. ಅದು ವಿಧಿ ನಿಯಮವೇ ಸರಿ. ಅದನ್ನು ಮೀರಿ ಅಡ್ಡ ದಾರಿ ಹಿಡಿಯುವುದೆಂದರೆ ಅಪಗತಿ ತಂದು ಕೊಂಡಂತೆಯೆ ಸರಿ. ಅಷ್ಟೇಕೆ ,ಮಾನವೀಯ ಪ್ರಜ್ಞೆಯೊಂದಿದ್ದರೆ, ಸಾಲದು ದೈವ ಶ್ರದ್ಧೆ ಇರಲೇಬೇಕು. ನೀವೇ ಯೋಚಿಸಿ; ಅದಿಲ್ಲದಿದ್ದರೆ, ಈ ಜಗತ್ತು ತನ್ನ ವ್ಯಾಪಾರ ವ್ಯವಹಾರದಲ್ಲಿಯೂ ನಂಬಿಕೆಯುಳ್ಳವರಿಲ್ಲದೇನೆ ಸ್ತಗಿತಗೊಳ್ಳುವುದಿಲ್ಲವೇ? ಇದೀಗ ಕಂಪ್ಯೂಟರ್ ಯುಗವಾದರೂ ಸಹ ವ್ಯವಹಾರದಲ್ಲಿ ಎಷ್ಟೇ ಲೆಕ್ಕಪತ್ರಗಳು, ದಾಖಲೆಗಳಿರಲಿ, ನಂಬಿಕೆಯ ಮೇಲೇ ಕೊಟ್ಯಂತರ ರೂ.ಗಳ ವಹಿವಾಟು ನಡೆಯುತ್ತಲೇ ಇರುವುದನ್ನು ಕಾಣುತ್ತಲೇ ಇದ್ದೇವೆ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು, ಬೃಹತ್ ಬಂಡವಾಳ ಶಾಹಿಗಳೂ ಇಂದಿನ ಉನ್ನತ ತಂತ್ರಜ್ಞಾನದಲ್ಲೂ ಕೂಡ ದೇವರನ್ನು ನಂಬದೇನೆ ತಮ್ಮ ಹಣ ಹೂಡಿಕೆ ಮಾಡದಿರುವವರು ವಿರಳವೇ ಸರಿ. ಕೋಟಿಗಟ್ಟಲೆ ಚೆಲ್ಲುವ ಚಿತ್ರೋದ್ಯಮಿಗಳಂತೂ,ದೇವರು ಹಾಗೂ ತಮ್ಮ ಭವಿಷ್ಯದಲ್ಲಿ ನಂಬಿಕೆ ಎಂದಿಗೂ ಬಿಡಲಾರರಲ್ಲ...!
*********

ಸಪ್ತಗಿರಿಯೊಡೆಯನ ಕಥಾನಕದಲ್ಲಿ ಸಾತ್ವಿಕತೆ ಮತ್ತು ಸಾತ್ವಿಕ ಶಕ್ತಿ ಏನೆಂಬುದನ್ನು ಆ ಶ್ರೀನಿವಾಸನ ಕಥೆಯ ಮೂಲಕವೇ ನಾವು ತಿಳಿಯೋಣ ಇನ್ನೊಮ್ಮೆ ಹೇಳುವೆ- ನೀವು ಈ ಹಿಂದೆ ಓದಿಕೊಂಡಿರಬಹುದಾದ ಶ್ರೀನಿವಾಸ ಕಲ್ಯಾಣ ಅಥವಾ ವೆಂಕಟೇಶ ಪುರಾಣ ಕಥೆಗೆ ಕಿಂಚಿತ್ ಲೋಪವಿಲ್ಲದೇನೆ ಆ ಭಗವಂತನ ಪ್ರೇರೇಪಣೆಯಂತೆಯೆ ನಾನು ಹೇಳಿರುವ ಈ ಕಥೆಯಲ್ಲಿ , ನಿಮಗೆ ಸತ್ವಗುಣದ ಹಿರಿಮೆಯನ್ನು ಸಾರುವ ಎಂದಿಗೂ ಸಾರ್ವಕಾಲಿಕವೆನಿಸುವ ಜೀವನ ಮೌಲ್ಯಗಳು ಪುಟಪುಟಗಳಲ್ಲೂ ಕಾಣಸಿಗುವುದಾದರೆ , ಅದೂ ಆ ದೇವ ದೇವನ ಮಹಿಮೆಯೇ ಅಲ್ಲದೆ ಇನ್ನೇನು! ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅವತಾರ ಮುಗಿದಿತ್ತು. ಆನಂತರವೇ ಕಲಿಯುಗದಲ್ಲಿ ಶ್ರೀನಿವಾಸನು ಕಾಣಿಸಿಕೊಂಡಿರುವುದು. ದಶಾವ ತಾರಗಳಲ್ಲಿ ಇದೊಂದು ಅವತಾರವೇನಲ್ಲ ಆದರೂ ಕಲಿಯುಗದ ಜನರಿಗೆ ಶ್ರೀನಿವಾಸ ಅವತಾರ ಸ್ವರೂಪಿಯೆ.

ಸೃಷ್ಟಿಕರ್ತನ ಬ್ರಹ್ಮಲೋಕದಿಂದ ಈ ಕಥಾನಕದ ಆರಂಭ. ಅಂದೊಮ್ಮೆ ಬ್ರಹ್ಮದೇವನಿಗೆ ಭವಲೋಕದ ಸ್ಥಿತಿಗತಿಗಳ ಕುರಿತು ದೊಡ್ಡ ಚಿಂತೆ. ಆತನ ಶೃತಿ ಸೂತ್ರಗಳು ಉತ್ತರಿಸದಿರಲಾರದೂ ಇದೆಯೇನು? ಸೃಷ್ಟಿಗೆ ಮೂಲಾಧಾರವಾದ, ಏಕಸೂತ್ರವಾದ ಒಂದು ಸಾಮರ್ಥ್ಯವಿದೆ. ಅದೇ “ಸತ್” ಚರಾಚರ ಜಗತ್ತಿನ ಅಸ್ತಿತ್ವಶಕ್ತಿ. ಅದಕ್ಕೆ ಹತ್ತಿರ ಹತ್ತಿರವಾಗತ್ತಾ ಬದುಕುವುದೇ ಮನುಷ್ಯನ ಐಹಿಕ ಸಾಧನೆ. ಆ ಪರಿಯಲ್ಲಿ ಯಥಾರ್ಥವನ್ನು ಮನಗಾಣವುದೇ ಜೀವಿತದ ಧರ್ಮ. ಸತ್ ಶಕ್ತಿಗೆ ತಲೆ ಬಾಗುವುದೆಂದರೇನೆ ಮಾನವ ಧರ್ಮ ಪಾಲಿಸಿದಂತೆ. ಧಾರ್ಮಿಕತೆ ಎಂದರೆ ಒಂದು ಜಾತಿ, ಪಂಗಡವಲ್ಲ; ಯಾವ ಜನಾಂಗದವರೇ ಆಗಲಿಎನ್ನುವುದರ ಬದಲು,ಯಾವ ಧರ್ಮೀಯರೆ ಆಗಲೆಂದು ಹೇಳುವುದು ನಿಜಕ್ಕೂ ತಪ್ಪಾಗುತ್ತದೆ. ನಾವು ದೈವತ್ವದ ಅಳತೆಗೋಲಾಗಿರುವ ದೈವಿಕತೆಗೆ ತಲೆಬಾಗುವುದೆಂದರೆ ಒಂದು ಜಾತಿ ಅಥವಾ ಪಂಗಡ ತೋರಿದ ಪದ್ಧತಿಗಳಿಗೆಂದೇನೂ ಅಲ್ಲ, ಯಾಕೆಂದರೆ, ದೈವಿಕತೆಯ ಇನ್ನೊಂದು ಮುಖವೇ ಧಾರ್ಮಿಕತೆ. ಎಲ್ಲ ಜಾತಿ-ಪಂಗಡದವರಿಗೂ ದೇವರೊಬ್ಬನೇ.. ಧಾರ್ಮಿಕತೆ ದೈವಿಕತೆಯೂ ಒಂದೇ ಅಂತೆಯೇ, ಎಲ್ಲ ಧರ್ಮೀಯರೂ ಎಂದು ಸಂಬೋಧಿಸಿದಾಗ ಎಲ್ಲ ಜಾತಿಯವರೂ ಎಂದೇ ತಿಳಿಯುವುದರಲ್ಲೇ ತಪ್ಪು ಮಾಡುತ್ತೇವಲ್ಲವೇ ಅಲ್ಲದೇ,ದೈವಿಕತೆ-ಧಾರ್ಮಿಕತೆ ಎಂಬುದು ಆಂತರಂಗಿಕವಾಗಿ ಒಂದೇ ಆಗಿದ್ದು,ಬಾಹೀಕವಾಗಿ ವಿವಿಧ ಪಂಗಡಗಳಲ್ಲಿ ಆಚರಣೆಗಳು ಮಾತ್ರ ಬೇರೆಯೆ ಆಗಿರುತ್ತವಷ್ಟೇ ಅಲ್ಲವೇ...
-ಎಚ್.ಶಿವರಾಂ, 3 ಆಗಸ್ಟ್, 2006

ಸಂಚಿಕೆ-2 ಭಾರತದಲ್ಲಿ ಭಗವಂತನೊಡನೆ..

ಜಗತ್ತಿನಲ್ಲಿ ತನ್ನ ಕಥೆಯಿಂದಲೆ ಸುಪ್ರಸಿದ್ಧನಾಗಿರುವ ದೇವರೆಂದರೆ ಶ್ರೀರಾಮ. ಹಾಗೆಯೆ ಜಗತ್ತಿನಲ್ಲಿ ತನ್ನ ದರ್ಶನವಾಗುತ್ತಿದ್ದಂತೆಯೆ ಅತಿ ಹೆಚ್ಚು ಜನರಿಂದ ಕೈಮುಗಿಸಿಕೊಳ್ಳುತ್ತಿರುವ ಸುಪ್ರಸಿದ್ಧ ದೇವರೆಂದರೆ ತಿರುಮಲೇಶ ಶ್ರೀ ವೆಂಕಟೇಶ್ವರನೇ. ದಶವತಾರಗಳಲ್ಲಿ ಶ್ರೀರಾಮನದೂ ಒಂದು ಅವತಾರವೆ. ಶ್ರೀನಿವಾಸ,ವೆಂಕಟೇಶ್ವರನೆಂದು ಕರೆಸಿಕೊಳ್ಳುವ ಈ ಕಲಿಯುಗದ ಸಪ್ತಗಿರಿಯೊಡೆಯ ಜನರಿಗೆ ಅವತಾರ ಸ್ವರೂಪಿಯೆ. ಈ ಸಪ್ತಗಿರಿಯಲ್ಲಿ ಪ್ರತಿದಿನವೂ ಹಲವು ಹತ್ತು ಸಹಸ್ರ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ಈ ಸ್ವಾಮಿಯು ಸಾತ್ವಿಕ ಸುಖ ಭಂಗಿಯಲ್ಲಿ ನಿಂತಿರುವನು. ತನ್ನ ಸನ್ನಿಧಿಗೆ “ದೇಹಿ” ಎಂದು ಬಂದವರನ್ನು ಆದರಿಸುವೆನೆಂದೇ ತನ್ನೆರಡೂ ಕೈಗಳನ್ನು ಕಟಿಬಂಧದ ಮೇಲೆ ಇರಿಸಿ ಬಲಗೈ ವರದ ಹಸ್ತವನ್ನು ಕೆಳಗಿಳಿಸಿ ಮುಂದೆ ಚಾಚಿ ಅಭಯ ಪ್ರದಾನ ಮಾಡುತ್ತಿರುವನು. ಹಾಗೆ ಬಳಿ ಬಂದವರ ಕಷ್ಟಕಾರ್ಪಣ್ಯಗಳನ್ನೆಲ್ಲ ತನ್ನ ಪದತಲದಲ್ಲೆ ಹಾಕಿಕೊಂಡು ಕೈ ಬಿಡದೆ ಕಾಪಾಡುವೆನೆಂದೇ ಎಡದ ಕಟಿ ಹಸ್ತವನ್ನು ತನ್ನ ಪಾದ ಪದ್ಮಗಳೆಡೆಗೆ ಬಾಗಿಸಿರುವನು. ಇದನ್ನೇ “ಕಟ್ಯವಲಂಬಿತ ಮುದ್ರೆ” ಎನ್ನುವರು. ಹೀಗೆ ದಿನವೂ ಶ್ರೀ ಸ್ವಾಮಿಯ ಸನ್ನಿಧಾನಕ್ಕೆ ಬರವ ಭಕ್ತ ಜನರು, ಕೆಲ ವಿಶೇಷ ಸಂದರ್ಭಗಳಲ್ಲಿ ಲಕ್ಷಕ್ಕೂ ಹೆಚ್ಚು ಜನರು ಬರಿಗೈಲಿ ಬರದೆ ತಮ್ಮ ಹರಕೆ-ಕಾಣಿಕೆಗಳನ್ನು ತಂದು ಒಪ್ಪಿಸುವರು. ಜಗತ್ತಿನಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಚರಣ ಕಮಲಗಳೆಡೆಯಲ್ಲಿ ಬಂದು ಬೀಳುವಷ್ಟು ದ್ರವ್ಯವೂ ಹಾಗೂ ಭಕ್ತರು ಹಿಂದಿರುಗುವಾಗ ತಮ್ಮ ಜೀವನೋಪಾಯಕ್ಕಾಗಿ ಆತ್ಮವಿಶ್ವಾಸದಿಂದ ಹೊತ್ತುಕೊಂಡು ಹೋಗುವಷ್ಟು ತುಂಬು ಭರವಸೆಯು ಬೇರೆಲ್ಲೂ ಕಾಣಸಿಗಲಾರದು.

ಮೊದಲ ಬಾರಿಗೆ ಶ್ರೀವೆಂಕಟೇಶ್ವರನ ದರ್ಶನ ಮಾಡುವ ಮುನ್ನವೇ ನನ್ನ ಮನಸ್ಸಿನಲ್ಲಿ ಈಗಾಗಲೆ ಹೇಳಿದಂತೆ ರಾಮಾಯಣ, ಮಹಾಭಾರತವನ್ನು ಹೊರತು ಪಡಿಸಿ ಬೇರೆ ಯಾವುದಾದರೂ ಪುರಾಣವನ್ನಾಧರಿಸಿ ನಾನೂ ಒಂದು ಹೊಸ ಪುರಾಣ ಕೃತಿಯನ್ನು ಬರೆಯಬೇಕೆಂದು ನಿರ್ಧರಿಸಿದ್ದೆನಲ್ಲವೇ? ಆದರೆ, ಅದು ವೆಂಕಟೇಶ ಪುರಾಣ ಕಥೆಯಾಗಿರುತ್ತದೆಂದು ಎಂದಿಗೂ ಭಾವಿಸಿರಲಿಲ್ಲ. ನಮ್ಮ ಕುಟುಂಬದ ಆರಾಧ್ಯದೈವ ಅವನೇ ಆಗಿದ್ದರೂ ಆ ಯೋಚನೆ ಎಂದೂ ನನಗೆ ಬಂದಿರಲಿಲ್ಲ... ಟೆಲಿಕಾಂ ಇಲಾಖೆ (ಇಂದಿನ ಬಿಎಸ್ ಎನ್ ಎಲ್)ಯಲ್ಲಿ ನೌಕರಿಯಲ್ಲಿದ್ದ ನಾನು ಪ್ರತಿ ಶನಿವಾರ ನಮ್ಮ ಪದ್ಧತಿಯಂತೆ ಪೂಜೆ ಮಾಡಬೇಕಾದವನು,“ಜಗತ್ತಿನಲ್ಲಿ ಕಳ್ಳಕಾಕರ ದುಡ್ಡೂ ಸೇರಿದಂತೆ,ಹೆಚ್ಚಿನ ದುಡ್ಡೆಲ್ಲ ಈ ಗೋವಿಂದನ ಪಾದಕ್ಕೇ ಹೋಗಿ ಬೀಳುತ್ತದೆ, ನನ್ನಂಥ ಸಾಮಾನ್ಯನು ಪೂಜೆ ಮಾಡಿದರೇನು ಬಿಟ್ಟರೇನು! ಕಛೇರಿಗೆ ಹೊತ್ತಾಯಿತು” ಎಂದು ಹೆಂಡತಿಗೆ ಹೇಳಿ ಹೊರಟು ಹೋಗಿ ಬಿಡುತ್ತಿದ್ದವನು ನಾನು. ಈಗ ಸಪ್ತಗಿರಿ ಸಂಪದದಂಥ ಪೌರಾಣಿಕ ಕೃತಿ ನಾನು ಬರೆಯುವುದೆಂದರೇನು ಎಂದೇ ಮೊದಲ ಬಾರಿಗೆ ಆ ದೇವನ ದರ್ಶನವಾದಂದಿನಿಂದ ಅವನೇ ಪ್ರೇರಣೆ ಮಾಡಿದ್ದರೂ, ವರ್ಷಗಳಿಂದಲೂ ಬರೆಯಲು ಹಿಂದೇಟು ಹಾಕುತ್ತಿದ್ದವನಿಂದ, ಆ ದೇವನೇ “ನಾ ನಿನ್ನಿಂದ ಬರೆಸಿಕೊಳ್ಳದೇ ಬಿಡೆನು” ಎಂದೇ ಈ ಕೃತಿಯನ್ನು ಬರೆಸಿಕೊಂಡಿದ್ದಾನೆಂದೇ ಇಂದಿಗೂ ಖಂಡಿತವಾಗಿ ಹೇಳುತ್ತಿದ್ದೇನೆ. ಇದೀಗ ಪ್ರತಿ ಶನಿವಾರ ಹಣೆಗೆ ಒಂದು ಕೆಂಪು ನಾಮ ಹಚ್ಚಿಕೊಂಡು ಪೂಜೆ ಮಾಡಿದನಂತರವೇ ಮನಸ್ಸಿಗೆ ನೆಮ್ಮದಿ. ಆನಂತರ,ಮನೆಯಿಂದ ಹೊರ ಬಿದ್ದರೆ ಹಣೆಯಲ್ಲಿ ನಾಮ ತಂತಾನೆ ಕಾಣೆಯಾಗಬೇಕಷ್ಟೇ. ನನ್ನ ಸ್ನೇಹಿತರ ವಲಯದಲ್ಲಿ ನನ್ನ ಹಣೆಯಲ್ಲಿ ನಾಮವಿದೆಯೆಂದರೆ,ಅದು ಶನಿವಾರವೆಂಬದು ಅವರಿಗೆ ಖಂಡಿತ ನೆನಪಾಗುತ್ತದೆ.

ಭಾರತದಲ್ಲಿ ಹಣವೆ ಮಾತನಾಡುವುದು ಎನ್ನುವವರಿದ್ದಾರೆ. ಆದರೂ ಇಲ್ಲಿ ಭಗವಂತನೊಡನೆ ಮಾತನಾಡುವವರಿಗೇನೂ ಕಡಿಮೆಯಿಲ್ಲ. ಕಡಿಮೆಯಾಗುವುದೂ ಇಲ್ಲ. ಇಲ್ಲಿ ದೇವರ ಹೆಸರಿನಲ್ಲಿ ಬೆದರಿಗೆ ಪತ್ರಗಳೂ ಹಾಗೂ ಸುಳ್ಳು ಸೃಷ್ಟಿಗಳಿಗೆ ಲೆಕ್ಕವಿಲ್ಲ. ಭಕ್ತರಿಗೆ ಸುಲಿಗೆಗಳೂ ನಿಲ್ಲುವುದಿಲ್ಲ. ದೇವರ ಹೆಸರಿನಲ್ಲೇ ಹಣ ಮಾಡುವವರೂ ಇರುವರಲ್ಲ! ಆದರೇನು! ಜಗತ್ತಿನಲ್ಲಿ ಮಾನವತ್ವದ ಭದ್ರ ಬುನಾದಿ ದೈವತ್ವವೇ ಆಗಿರುವುದು. ಆದುದರಿಂದ ದೇವರ ಪರಿಕಲ್ಪನೆ ಹುಸಿಯಲ್ಲ;ಅದೆಂದಿಗೂ ಅಳಿಯುವುದಿಲ್ಲ. ಮತ್ತೆ ಮತ್ತೆ ಈ ನೆಲದ ಮೇಲಿನ ಮನುಷ್ಯರ ಬದುಕಿನ ಜಂಜಡದ ಮಧ್ಯೆಯೆ
ಆ ದೈವತ್ವವೆಂಬುದು ಸಾಕಾರ ತಳೆಯುತ್ತಲೇ ಇರುತ್ತದೆ. ಹೌದು,ಭಾರತೀಯರಿಗೆಂದಿಗೂ ಭಗವಂತನನ್ನು ಕಾಣುವ ಬಗೆ ಅನೇಕಾನೇಕ. ಭಗವಂತನಿಲ್ಲದ ಕೋಟ್ಯಂತರ ಭಾರತೀಯರ ಬದುಕನ್ನು ನಾವು ಊಹಿಸಿಕೊಳ್ಳಲಾರೆವು. ಅವರ ಬಹಳಷ್ಟು ಭವರೋಗಗಳಿಗೆ ಆತನಲ್ಲೇ ದಿವ್ಯೌಷಧ ದೊರಕುವುದೂ ಕೂಡ. ಈ ದೈವ ಶ್ರದ್ಧೆ ,ನಂಬಿಕೆ ನಮ್ಮ ಸನಾತನ ಪರಂಪರೆಯಲ್ಲಿ ವಿಶ್ವವನ್ನೇ ಬೆರಗುಗೊಳಿಸಿದೆಯಲ್ಲ...!


ಸಾಮಾನ್ಯವಾಗಿ ನಮ್ಮ ಪುರಾಣ ಕಥೆಗಳಲ್ಲಿ ಭಕ್ತಿ ರಸವೇ ಪ್ರಧಾನವಾಗಿ ಎದ್ದು ತೋರುತ್ತದೆ. ಭಗವಂತನ ಲೀಲೆಗಳ ಸ್ವಾರಸ್ಯ,ರಹಸ್ಯ ಗ್ರಹಿಸುವುದೂ ಅಷ್ಟೇ ಅತ್ಯಗತ್ಯ. ಪೂರ್ವ ಜನ್ಮ ಸಿದ್ಧಾಂತದೊಂದಿಗೆ ನಮ್ಮ ಕರ್ಮಫಲಗಳ ಅವಲೋಕನ. ಬುದ್ಧನಿಗೆ ತನ್ನ ಹಿಂದಿನ ಐದು ನೂರು ಜನ್ಮಗಳ ನೆನಪಿತ್ತು ಎನ್ನುತ್ತಾರೆ. ಇಂದಿನ ವೈಜ್ಞಾನಿಕ ಜಗತ್ತಿನಲ್ಲೂ ಪೂರ್ವಜನ್ಮ ಸ್ಮರಣೆಯಂಟಾದವರ ಉದಾಹರಣೆಗಳೆಷ್ಟಿಲ್ಲ...! ಯಾಕೆಂದರೆ, ಶ್ರೀವೆಂಕಟೇಶ ಪುರಾಣದಲ್ಲಿ ಪೂರ್ವ ಜನ್ಮ ಸ್ಮರಣೆಯ ಸಂಗತಿಗಳು ಬರುತ್ತವೆ. ಶ್ರೀ ಕೃಷ್ಣಾವತಾರದಲ್ಲಿ ತಾಯಿ ಯಶೋಧೆ “ಕೃಷ್ಣಾ ಈ ಜನ್ಮದಲ್ಲಿ ನಿನ್ನ ಕಲ್ಯಾಣ ನೋಡುವ ಭಾಗ್ಯವೊದಗಲಿಲ್ಲ ನನಗೆ” ಎನ್ನುತ್ತಾಳೆ.“ಮುಂದೆ ಕಲಿಯುಗದಲ್ಲಿ ಶ್ರೀನಿವಾಸನಾಗಿ ಬರುವೆನಮ್ಮಾ.. ಆಗ ಈ ಶ್ರೀನಿವಾಸನ ಕಲ್ಯಾಣವನ್ನು ಕಣ್ತುಂಬ ನೋಡುವಿಯಂತೆ” ಎಂಬುದಾಗಿ ತಾಯಿಯಾಸೆ ಪೂರೈಸುವ ವಾಗ್ದಾನ ಮಾಡುತ್ತಾನೆ ಕೃಷ್ಣ. ಆದರೇನು! ಶ್ರೀನಿವಾಸನ ಕಲ್ಯಾಣವನ್ನು ತಾನು ಬಕುಳಾದೇವಿಯಾಗಿ ಬಂದು ನೋಡಲು ಯಶೋಧೆ ಒಂದು ಯುಗವನ್ನೇ ಕಾಯಬೇಕಾಗುತ್ತದೆ. ಇನ್ನು ದೇವರನ್ನೇ ಗಂಡನಾಗಿ ಪಡೆಯಲು ವೇದವತಿ ಎರಡು ಯುಗಗಳನ್ನೇ ಕಳೆಯಬೇಕಾಗುತ್ತದೆ.

ಇನ್ನು ಕಲಿಯುಗದಲ್ಲಿ ದೇವರಂಥ ಗಂಡ ಸಿಗಬೇಕೆಂದರೆ ಸುಲಭವೇನು? ದೇವರೇ ಗಂಡನಾಗಿ ಬರುವುದೆಂದರೆ ಎರಡು ಯುಗಗಳೇ ಕಾಯಬೇಕಾಗಿ ಬಂದರೂ ಆಶ್ಚರ್ಯವೇನಿಲ್ಲ. ಹೌದು,ದೇವರಂಥ ಗಂಡ,ದೇವರಂಥ ಅಳಿಯ,ಮಹಾಲಕ್ಮ್ಷಿಯಂಥ ಗೃಹ ಲಕ್ಮ್ಷಿಯೆ ಸಿಗಬೇಕಾದರೆ ಜನ್ಮ ಜನ್ಮಗಳ ಪುಣ್ಯ ಫಲವೇ ಸರಿ.

ಸಪ್ತಗಿರಿಯೊಡೆಯನ ಸಂದೇಶ ಸತ್ವಗುಣದ ಹಿರಿಮೆಯೆ... ಆ ದೇವನ ಪುಣ್ಯ ದರ್ಶನದಿಂದ ಪ್ರೇರಿತನಾಗಿ ನಾನು ಬರೆದ ಭಕ್ತಿಗೀತೆ :-
ಮಹಾವಿಷ್ಣು ಧರೆಗೆ ಬಂದ ಮಹಾ ಪುಣ್ಯ ನಮಗೆ ತಂದ.
ಬನ್ನಿ ಬನ್ನಿ ಭಕ್ತರೆ ಇಲ್ಲೇ ಇದೆ ಸ್ವರ್ಗವು|
ಪಾಪ ಕರ್ಮ ಕಳೆಯುವ ಭೂವೈಕುಂಠವು ||ಪ||

ಋಷಿ ಪುಂಗವರಿಚ್ಛೆಯಂತೆ ಯಜ್ಞಫಲವನರ್ಪಿಸಲು
ಬ್ರಹ್ಮ ವಿಷ್ಣು ಮಹೇಶ್ವರಗೆ ಸತ್ವ ಪರೀಕ್ಷೆಯಾಗಲು
ಸ್ವಾಮಿಗೆ ಅಪಚಾರವಾಗೆ ಮಹಾಲಕ್ಮ್ಷಿ ಮುನಿದಳು
ಭಗವಂತನ ತೊರೆದಳು ಕೊಲ್ಹಾಪುರ ಸೇರಿದಳು ||1||

ಗೃಹಲಕ್ಷ್ಮಿಯೆ ತಾಮುನಿಯೆ ಸಂತನಂತೆ ಶ್ರೀಹರಿಯು
ಶೇಷಗಿರಿಗೆ ಬಂದನು ವಲ್ಮೀಕದಿ ಕುಳಿತನು
ಜಗದ ಚಿಂತೆ ಹೊತ್ತನು ಘೋರ ತಪವಗೈದನು
ಧರ್ಮ ಸಂರಕ್ಷಣೆಗೆ ಶ್ರೀನಿವಾಸನಾದನು ||2||

ಶ್ರೀಲಕ್ಮ್ಷಿಯ ಅಂಶಜಳೆ ಪದ್ಮಾವತಿ ಬಂದಳು
ಶ್ರೀಕಾಂತನ ವರಿಸುತಲಿ ಶ್ರೀನಿಧಿಯೆ ಆದಳು
ಜಗದ ಜನರ ಕಲ್ಯಾಣಿ ನೇಮ ನಿಷ್ಠೆಗೊಲಿವಳು
ಸಾತ್ವಿಕ ಸಂಪ್ರೀತೆ ನಿತ್ಯವಂದೆಯಾದಳು ||3||

ಸತ್ವಗುಣದ ಹಿರಿಮೆಗೆ ರಜೋಗುಣದ ಹಿಡಿತಕೆ
ತಮೋಗುಣದ ಅಳಿವಿಗೆ ವೈವಾಹಿಕ ಜೀವನಕೆ
ಆದರ್ಶದ ಉಳಿವಿಗೆ ಸಾರುತಿಹನು ಸಂದೇಶ
ಇಂದ್ರಿಯ ಕಲ್ಯಾಣದಲಿ ಲೋಕ ಕಲ್ಯಾಣಕೆ ||4||

ಸಂಕಟಗಳ ಕಳೆಯುವ ಶ್ರೀ ವೆಂಕಟೇಶನು
ನಂಬಿಕೆಯ ನಾಕದಲಿ ಸರ್ವರನು ಕಾಯವನು
ಕಲ್ಕಿರೂಪಿ ಕಾರಣನು ಸಪ್ತಗಿರಿಯ ಒಡೆಯನು
ಸಂಪದವ ಕರುಣಿಸುವ ಸಾತ್ವಿಕ ಸಂಪನ್ನನು ||5||


-ಎಚ್.ಶಿವರಾಂ, ಜುಲೈ26, 2006

Wednesday, August 02, 2006

ಸಂಚಿಕೆ-1ಸಪ್ತಗಿರಿ ಸಂದೇಶ(ಭವಿಷ್ಯೋತ್ತರ ಪುರಾಣ)

ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |

ಶ್ರೀಮದ್ವೆಂಕಟನಾಥಾಯ ಶ್ರೀನಿವಾಸಾಯತೇನಮಃ ||

ಜಗತ್ತು ತ್ರಿಗುಣಾತ್ಮಕವಾಗಿದೆ. ಇಲ್ಲಿ ಮೂರು ಭಾಗ ಜಲಾವೃತವಾಗಿದೆ. ಒಂದು ಭಾಗ ಮಾತ್ರ ಭೂಮಿ. ಈ ಒಂದು ಭಾಗ ಭೂಮಿಯಲ್ಲಿ ಮೂರು ಭಾಗ ಪರಮ ಪಾಪಿಗಳೆ ತುಂಬಿದ್ದಾರೆ. ಹೌದು, ಪರಮ ಪಾಪಿಗಳಿಗೇ ಸುಭಿಕ್ಷ ಕಾಲವೆಂದರು ನಮ್ಮ ಹರಿದಾಸರು 15ನೇ ಶತಮಾನದಲ್ಲಿಯೆ. ಈಗ ಜನ ಸಂಖ್ಯೆ ಹೆಚ್ಚುತ್ತಲೇ ಇದೆ ಪರಮ ಪಾಪಿಗಳೂ ಹೆಚ್ಚುತ್ತಲೆ ಇದ್ದಾರೆ. ಹೌದು, ಮೂರು ಭಾಗ ಪರಮ ಪಾಪಿಗಳಾದರೆ, ಇನ್ನೊಂದು ಭಾಗದಲ್ಲಿ ಸಾತ್ವಿಕರು. ಈ ಸಾತ್ವಿಕರಿಂದಲೇ ಇಡೀ ಜಗತ್ತು ಅಸ್ತಿತ್ವದಲ್ಲಿರುವುದು; ಚಲನೆಯಲ್ಲಿರುವುದು. ಜಗತ್ತಿನಲ್ಲಿ ಸಾತ್ವಿಕ ಶಕ್ತಿಯೆ ಮೇಲು. ನಾವು ಯಾರ ಜೊತೆ ಬದುಕ ಬೇಕೆಂಬುದ ನಮ್ಮ ಆಯ್ಕೆಗಷ್ಟೇ ಎದಿರಾಗಿ ಬಿಡುವುದು ಒಂದು ಸವಾಲು ಅಲ್ಲವೇ...?

ತಿರುಪತಿ ತಿರುಮಲೇಶ ಸಂಪತ್ತಿನ ಸ್ವಾಮಿ, ಬಡ್ಡಿ ಕಾಸಿನವನೆಂದೇ ಭಾವಿಸುವುದಲ್ಲ. ಅವನು ಸಾತ್ವಿಕ ಸಂಪನ್ನ. ಇಡೀ ಜಗತ್ತಿಗೆ ಸಾತ್ವಿಕ ಶಕ್ತಿ ಸಾರಲೆಂದೇ ಭೂಮಿಗಿಳಿದು ಬಂದ ಭಗವಂತನವನು ಎಂಬ ಸತ್ಯ ತಿಳಿದವರೂ ಕಡಿಮೆಯೆ . ಭಕ್ತಿ ಭಾವದಿಂದ ಅವನಿಗೆ ಹರಕೆ ಕಾಣಿಕಗಳನ್ನೊಪ್ಪಿಸಿದರೆ ಸಾಕು, ತಮ್ಮ ಇಷ್ಟಾರ್ಥಗಳು ಸಿದ್ಧಿಸುವುವೆಂದು ನಂಬಿರುವ ಸಮುದಾಯ ಬಹಳ ದೊಡ್ಡದು. ಸಾಮಾನ್ಯವಾಗಿ ರಾಮಾಯಣ ,ಮಹಾಭಾರತ ಈ ಎರಡು ಮಹಾ ಪುರಾಣ ಕಥೆಗಳು ಎಲ್ಲಕಾಲಕ್ಕೂ ಸಮಕಾಲೀನ ಜೀವನ ಮೌಲ್ಯಗಳನ್ನು ಒದಗಿಸುತ್ತವೆ ಎಂಬ ಭಾವನೆಯೆ ಪ್ರಚಲಿತದಲ್ಲಿದೆ.. ಇವುಗಳನ್ನು ಹೊರತು ಪಡಿಸಿ ಬೇರೆ ಯಾವುದಾದರೂ ಪುರಾಣ ಕಥೆ ನಮ್ಮ ಬದುಕಿಗೆ ಮೌಲಿಕ ವೆನಿಸೀತೇ.... ಸಾರ್ವಕಾಲಿಕ ಸತ್ಯವನ್ನು ತೆರೆದಿಡಬಲ್ಲದೇ ಎಂಬ ಶೋಧನೆಯಲ್ಲಿ ನಾನಿದ್ದಾಗ ಮೂಡಿ ಬಂದ ಕೃತಿ “ಸಪ್ತಗಿರಿ ಸಂಪದ”. ಮಹಾಭಾರತದಷ್ಟು ವಿಸ್ತಾರವಾದ ವಿಸ್ತೃತವಾದ ಭೂಮಿಕೆಯಲ್ಲಿ ಜೀವನಮೌಲ್ಯಗಳನ್ನು ಈ ಕೃತಿ ಒದಗಿಸಲಾರದು. ಮಹಾಭಾರತದ ವಿಧುರ,ಧರ್ಮರಾಜ,ವಿಭೀಷಣ ಹಾಗೂ ರಾಮಾಯಣದ ಸಾತ್ವಿಕ ಪ್ರಭು ಶ್ರೀರಾಮಚಂದ್ರನ ಪಾತ್ರಗಳಲ್ಲಿ ಸತ್ವಗುಣದ ಹಿರಿಮೆಯನ್ನೇ ಈ ಕೃತಿಯಲ್ಲೂ ಕಾಣಬಹುದು. ಹೌದು,ಸತ್ವಗುಣಾಧಿಕ್ಯ ಹೊಂದುವುದರಿಂದಲೇ ಮನುಷ್ಯ ರಾಜೋ ಮತ್ತು ತಮೋಗುಣವನ್ನು ಹಾಗೂ ಅರಿಷಡ್ವರ್ಗಗಳನ್ನೂ ಗೆಲ್ಲಬಹುದು. ಮನುಷ್ಯ ಸಭ್ಯನಾಗಿರುವುದು, ಸಭ್ಯಗೃಹಸ್ಥನಾಗಿ ಬದುಕುವುದೇ ಮುಖ್ಯವಲ್ಲವೇ...?

1998ರಲ್ಲಿ ಪ್ರಕಟವಾದ ಈ ನನ್ನ ಪೌರಾಣಿಕ ಕೃತಿ ಸಾಕಷ್ಟು ಜನ ಮನ್ನಣೆ ಗಳಿಸಿತಾದರೂ , ತಿರುಪತಿ ಪುಣ್ಯಕ್ಷೇತ್ತ್ರದ ಗಣ್ಯರ ಗಮನಕ್ಕೆ ಇನ್ನೂ ಬಂದಿಲ್ಲ. ಈ ಪ್ರಚಾರ ಪ್ರಪಂಚದಲ್ಲಿ ನನ್ನಂಥ ಸಾಮಾನ್ಯ ಲೇಖಕನಿಗೆ ಅದು ಸಾಧ್ಯವೂ ಆಗದ ಮಾತಲ್ಲವೇ... ಈ ಬರಹಗಾರನ ಬದುಕಿನಲ್ಲೊಂದು ಮಹತ್ವದ ಕೃತಿಯಾಗಿರುವ ಈ “ಸಪ್ತಗಿರಿ ಸಂಪದ” ವನ್ನು ಅಂತರ್ಜಾಲದಲ್ಲಿ ಪೌರಾಣಿಕ ಕಥಾನಕವಾಗಿ ಬ್ಲಾಗ್ ಮಾಡ ಬಯಸಿದ್ದೇನೆ. ದಯವಿಟ್ಟು ಇದನ್ನೊಂದು ಧಾರ್ಮಿಕ ಕೃತಿಯೆಂದು ನೀವು ಖಂಡಿತ ಊಹಿಸಿದಿರಿ. ಮುಖ್ಯವಾಗಿ ಇಂದಿನ ಪೀಳಿಗೆಯ ಎಲ್ಲ ಧರ್ಮೀಯರೂ ಇಷ್ಟ ಪಡುವಂತಹ ಸಾರ್ವಕಾಲಿಕವಾದ ಸಾಮಾಜಿಕ ಮೌಲ್ಯಗಳು ಈ ಕೃತಿಯಲ್ಲಿದೆ. ಜಗತ್ತಿನಲ್ಲಿ ಸಭ್ಯನಾಗಿರುವುದು ಸಭ್ಯಗೃಹಸ್ತನಾಗಿ ಬದುಕುವುದನ್ನು ಬಿಟ್ಟರೆ ಬೇರೇನಿದೆ ಎಂದು ಹೇಳಿದರೆ ಏನೂ ಹೇಳಿದಂತಾಗದು..... ಈ ಸಪ್ತಗಿರಿ ಸಂಪದದ ಸ್ವಾರಸ್ಯ ಮತ್ತು ಸಾರವಿರುವುದೇ ಸಾತ್ವಿಕತೆ ಮತ್ತು ಸಾತ್ವಿಕ ಶಕ್ತಿ ಸಂದೇಶದಲ್ಲಿ.


ನೀವೂ ತಿರುಪತಿ ಪುಣ್ಯ ಕ್ಷೇತ್ರವನ್ನು ಸಂದರ್ಶಿಸಿರಬಹುದು. ನಾನು ಮೊದಲ ಬಾರಿಗೆ ಭೇಟಿ ಕೊಟ್ಟಾಗ (1993)ಯಾಕೆ ಇಲ್ಲಿ ಜನ ತಂಡೋಪತಂಡವಾಗಿ ಬರುತ್ತಾರೆ. ತಮ್ಮ ಹರಕೆ ಕಾಣಿಕೆಗಳನ್ನೊಪ್ಸಿದ ಈ ಜನ ತಮ್ಮ ಮುಂದಿನ ಬದುಕಿಗೆ ಅದೇನನ್ನು ಕೊಂಡೊಯ್ಯುತ್ತಾರೆಂದು ತುಂಬ ತಲೆ ಕೆಡಿಸಿಕೊಂಡವನು. ಅಲ್ಲಿ ಸಿಗುವ ಮಗ್ಗಿ ಪುಸ್ತಕಗಳ ಮಾದರಿಯ ಸ್ಥಳ ಪುರಾಣ ಕಥೆಯಿಂದ ಬದುಕಿಗೆ ಭಕ್ತಿಯೊಂದನ್ನು ಹೊರುತು ಪಡಿಸಿ ಬೇರೇನನ್ನೂ ಕಾಣದವನಾಗಿ ಚಡಪಡಿಸಿದವನು. ಅಷ್ಟೇ ಅಲ್ಲ, ಜಗತ್ತಿನಲ್ಲಿ ಈ ದೇವರ ದರ್ಶನ ಮಾಡುತ್ತಿದ್ದಂತೆ ಪಾಮರರೂ ,ಪಾಪಿಗಳು, ಜ್ಞಾನಿಗಳೆಲ್ಲರೂ ಒಕ್ಕೊರಲಿನಿಂದ “ಗೋವಿಂದಾ” ಎಂದು ಕೈಮುಗಿಯುವುದೇಕೆಂದು ಚಿಂತಾಕ್ರಾಂತನಾದವನು. ಇಲ್ಲಿ ಸಹಸ್ರಾರು ಜನರು ಪ್ರತಿದಿನವೂ ದೇವರ ದರ್ಶನಕ್ಕಾಗಿ ಬರುತ್ತಿದ್ದಾರೆಂದರೆ, ಇಲ್ಲಿ ಅದೆಂಥ ಚುಂಬಕ ಶಕ್ತಿ ಇದ್ದೀತು! ಅದು ಸಾತ್ವಿಕ ಶಕ್ತಿಯೆ...?

ಭೃಗು ಮಹರ್ಷಿಯಿಂದ ಪರೀಕ್ಷೆಗೊಳಗಾದ ಶ್ರೀಹರಿ ತಾನೇ ಸಾತ್ವಿಕನೆಂದು ಶೃತ ಪಡಿಸುತ್ತಾನಲ್ಲವೇ..?, ಆ ಶ್ರೀಹರಿಯ ಸಾತ್ವಿಕ ಸಂದೇಶವು ಆ ಮೂರು ಲೋಕಗಳಿಗೆ ಮಾತ್ರ ಸೀಮಿತವೆನಿಸುತ್ತದೆ. ಆನಂತರ, ಭಕ್ತಿರಸವಷ್ಟೇ ಪ್ರಧಾನವಾಗಿಬಿಡುತ್ತದೆ. ಆದರೆ, ಇಡೀ ಜಗತ್ತಿಗೆ ಸಾತ್ವಿಕ ಸಂದೇಶವನ್ನು ಆ ಸಾತ್ವಿಕ ಶಕ್ತಿಯೇ ಮೇಲೆಂದು ಸಾರಲು ಶ್ರೀಹರಿಯು ಶ್ರೀನಿವಾಸನಾಗಿ ಧರೆಗೆ ಬಂದನೆಂಬುದನ್ನು ಪುಟಪುಟಗಳಲ್ಲಿಯೂ ನಾವು ಕಾಣಬಹುದಾಗಿದೆ. ಅದೇ ಸಾಮಾನ್ಯವಾಗಿ ಲಭ್ಯವಿರುವ ಸ್ಥಳಪುರಾಣ ಕಥೆ ಪುಸ್ತಕಗಳಲ್ಲಿ ಕಾಣಸಿಗಲಾರದು.

ಇಂದಿನ ಯುವ ಪೀಳಿಗೆಯು ಏನೆಲ್ಲವನ್ನೂ ಪ್ರಾಕ್ಟಿಕಲ್ ಲೈಫ್ ಗೆಂದೇ ಹೋಲಿಸಿನೊಡುವಂತಹ ಈ ಕಾಲಮಾನದಲ್ಲಿ ಬದುಕುತ್ತಿರುವ ಹಿರಿಯರಾದ ನಾವು, ಅವರ ಅಂತಹ ಉಪಯುಕ್ತತೆ ಏನಿದೆ ಪುರಾಣ ಕಥೆಗಳಲ್ಲಿ ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ಖಂಡಿತ ಸಾಧ್ಯವಿದೆ ಎಂಬುದೇ ನಮ್ಮ ಸಾಂಸ್ಕೃತಿಕ ಹಗ್ಗಳಿಕೆಯಾಗಿದೆ.

ಶ್ರೀ ವೆಂಕಟೇಶ ಪುರಾಣವನ್ನು ಪುರಾಣ ಕಥೆಯನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ ಶೋಧನೆಗಿಳಿದಾಗ ನಮ್ಮ ಆದಿ ಋಷಿಗಳು ಎಂಥಹ ಮಹಾಜ್ಞಾನಿಗಳು. ಅವರು ಯುಗಪ್ರವರ್ತಕರು. ಪ್ರಗತಿಗಾಮಿಗಳು. ದೂರದೃಷ್ಟಿಯುಳ್ಳವರು. ಮನುಕುಲಕೆ ಮಾರ್ಗದರ್ಶಕರು. ಅವರು ತಮ್ಮ ಕೃತಿ ರಚನೆಯಲ್ಲಿ ಭಕ್ತಿಭಾವದಿಂದಲೇ, ಮಾನವೀಯ ಪ್ರೀತಿ ಪ್ರೇಮದ ಪರಿಯಲ್ಲೇ ನಮ್ಮೆಲ್ಲರ ಇಂದ್ರಿಯ ಕಲ್ಯಾಣದ ಶಿಷ್ಟ ಸಂಸ್ಕೃತಿಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿರುವರು ಎಂಬುದು ವೇದ್ಯವಾಗುತ್ತದೆ.
ಆದ್ದರಿಂದ, ಇಂತಹ ಸ್ಥಳ ಪುರಾಣಗಳಷ್ಟೋ ಇವೆಯಲ್ಲ... ಅವೆಲ್ಲ ಕಂದಾಚಾರದ ಮೌಢ್ಯತುಂಬಿದವುಗಳಲ್ಲ. ಭಕ್ತಿಮಾರ್ಗದ ಇನ್ನೊಂದು ಮುಖವೇ ಜ್ಞಾನಮಾರ್ಗ ಎನ್ನುತ್ತಾರೆ. ನಮ್ಮ ಮಹರ್ಷಿಗಳ ಪರಂಪರೆಯೇ ಅಂತಹದು. ಆ ಮಹರ್ಷಿಗಳು ತಮ್ಮ ದಾರ್ಶನಿಕ ದೃಷ್ಟಿಯಲ್ಲೇ ದೇವರ ದರ್ಶನವನ್ನೂ ಮಾಡಿಸಿರುವ ದ್ರಷ್ಟಾರರು.
ಇದೇ ಯುಗದಲ್ಲಿ ಆಗಿ ಹೋದ ಮಹಾನ್ ಯೋಗಿಗಳು, ಪ್ರಗಲ್ಭಜ್ಞಾನಿಗಳು, ದಾಸವರೇಣ್ಯರೂ ಯಾವೊಂದೂ ಫಲಾಪೇಕ್ಷೆಯಿಲ್ಲದೆಯೆ ಅವರು ಕಂಡಂಥ ದೇವರನ್ನು ನಾವು ಸ್ವತಃ ಕಾಣಲಾರವೇಕೆ? ಅನಿಸಿದಾಗ ನಾವು ವೇದಕಾಲದ ಆ ದಾರ್ಶನಿಕರ ಪ್ರಪಂಚಕ್ಕೇ ಹೋಗಬೇಕಾಗುತ್ತದೆ. ಅದು ವ್ಯಷ್ಟಿ-ಸಮಷ್ಟಿಯನ್ನು ನೈತಿಕ ಮತ್ತು ಅಧ್ಯಾತ್ಮಿಕ ಶಕ್ತಿಗಳೇ ನಿಗ್ರಹಿಸುತ್ತಿದ್ದ ಕಾಲ. ಆ ಕಾಲವನ್ನು ನಾವು ಒಳ ಹೊಕ್ಕು ನೋಡಬೇಕಾಗುತ್ತದೆ...

ಅಂತಹ ಒಂದು ಪ್ರಯತ್ನವನ್ನೊಳಗೊಂಡಿದೆ; ತಿರುಮಲೇಶನ ಸ್ಥಳ ಈ ಪುರಾಣ ಕಥೆ "ಸಪ್ತಗಿರಿ ಸಂಪದ". ಸುಮಾರು ಏಳುವರ್ಷಗಳೇ ಈ ಕೃತಿಯ ಬಗ್ಗೆ ಚಿಂತಿತನಾಗಿ ಚಿಂತನೆಗಿಳಿದವನು ನಾನು. ನಾನು ಇಲ್ಲಿ ಮಾಡಿರುವುದು ಶೋಧನೆಯೋ ಅಥವಾ ಆ ದೇವ ದೇವ ಗೋವಿಂದನ ಪ್ರೇರಣೆಯಲ್ಲಿ ಈ ಕೆಲಸ ಮಾಡಿದ್ದೇನೆಂದೇ ನನ್ನ ನಂಬಿಕೆ. ದಯವಿಟ್ಟು, ನೀವೂ ಬನ್ನಿ ಈ ವೆಂಕಟೇಶ ಪುರಾಣ ಕಥೆಯಲ್ಲೇ ಮತ್ತೊಮ್ಮೆ ಒಳ ಹೊಕ್ಕು ನೋಡಬನ್ನಿ,
ಆ ಭಗವಂತನ ಪ್ರೇರಣೆಯಿಂದ ಮೊದಲು ಕನ್ನಡದಲ್ಲಿ ಬರೆದ ಕೃತಿ "ಸಪ್ತಗಿರಿ ಸಂಪದ" 1998 ರಲ್ಲಿ ಪ್ರಕಟವಾಯಿತು (ಕೃತಿಗಳು ಲಭ್ಯವಿಲ್ಲ)

ದಯವಿಟ್ಟು ಕ್ಷಮಿಸಿಬಿಡಿ, ಖಂಡಿತ ನಾನು ಪ್ರಚಾರ ಪ್ರಿಯನಲ್ಲ.
"ಬಿನ್ನಹಕೆ ಬಾಯಿಲ್ಲವಯ್ಯ; ಅನಂತ ಅಪರಾಧ ನನ್ನಲ್ಲಿ ಇರಲಾಗಿ"
ಎಂಬ ದಾಸರ ವಾಣಿಯೂ ಏಕೋ ನೆನಪಾಗುತ್ತಿದೆಯಲ್ಲ....

ಹಾಂ, ಏಳು ವರುಷಗಳೇ ಕಳೆದರೂ ಈ ಕೃತಿ ಇನ್ನೂ ಗಣ್ಯರ ಗಮನಕ್ಕೆ ಬಂದಿಲ್ಲವೆಂದರೆ, ನಾನು ಮಾಡಿದ ಅಪರಾಧವೇನು ಎಂಬುದಾದರೂ ತಿಳಿಯಬಾರದೇ...? ಯಾಕೆಂದರೆ, ಇದೇ ಕೃತಿಯನ್ನು ಇತ್ತೀಚೆಗೆ ಇಂಗ್ಲೀಷ್ ನಲ್ಲೂ(ಸಂಪೂರ್ಣ ಉಚಿತ ಇ-ಪುಸ್ತಕ ಲಭ್ಯವಿದೆ The Message from Seven Hills) ಬರೆದು ಇನ್ನೊಂದು ಮಹಾಪರಾಧವನ್ನೇ ಮಾಡಿದೆನೇನೋ....(ನನ್ನ ಅಭಿಪ್ರಾಯದಲ್ಲಿ ಇಂಗ್ಲೀಷ್ ನಲ್ಲಿ ಇನ್ನಷ್ಟು ಮೌಲಿಕ ಅಂಶಗಳು ಮೂಡಿ ಬಂದಿದ್ದು ಅಚ್ಚರಿಯುಂಟು ಮಾಡಿದೆ; ಈಗ ಮತ್ತೊಮ್ಮೆ ಕನ್ನಡದಲ್ಲಿ ಬರೆಯುವ ಉತ್ಕಟೇಚ್ಛೆ ಯೂ ಇದೆ. ಈ ಪ್ರಯತ್ನದಲ್ಲಿ ನನಗೊಂದಿಷ್ಟು ಸಮಾಧಾನ ಸಿಕ್ಕಿರುವುದಂತೂ ನಿಜ).
ಅಷ್ಟಕ್ಕೂ, ನಮ್ಮ ಪುರಾಣ ಕಥೆಗಳಲ್ಲಿ ಇಲ್ಲದ ಹುಳುಕನ್ನು ಹೆಕ್ಕಿ ತೆಗೆದು ಪ್ರಚಾರಗಿಟ್ಟಿಸಿದವರಿಗೇನು ಕಡಿಮೆಯಿಲ್ಲವಲ್ಲ! ಆದರೆ, ಒಂದು ಪುರಾಣ ಕಥೆಯಲ್ಲಿ ಸಮಕಾಲೀನ ಜೀವನ ಮೌಲ್ಯಗಳನ್ನು ಶೋಧಿಸುವುದೆಂದರೆ ಅದು ಸುಲಭವೇನಲ್ಲವೆಂದರೆ ಉತ್ಪ್ರೇಕ್ಷೆಯಾಗಲಾರದು.
(ಸೂಚನೆ:ತಿದ್ದಿ ತಿದ್ದಿ ಬರೆದ ಬರಹವೇ ಅತ್ಯುತ್ತಮವಾಗುವುದು ಎಂದು ನಮ್ಮ ಹಿರಿಯ ಸಾಹಿತಿ ಶಿವರಾಮ ಕಾರಂತರು ಹೇಳಿದ್ದಾರೆ. ಈ ನನ್ನ ಪುರಾಣ ಕಥೆಯ ಬರವಣಿಗೆಯನ್ನು ಅದೆಷ್ಟು ಬಾರಿ ತಿದ್ದಿದ್ದೇನೆಯೋ ಆ ಸಪ್ತಗಿರಿಯೊಡೆಯ ಗೋವಿಂದನಿಗೆ ಅದೇನು ಪ್ರೀತಿಯೋ.. .)

-ಎಚ್ .ಶಿವರಾಂ, 25,ಜಲೈ 2006 , 05,ಡಿಸೆಂಬರ್ 2010