Saturday, August 26, 2006

ಸಂಚಿಕೆ-11.ಸೃಷ್ಟಿಕರ್ತನ ಸತ್ಯವೇದಗಳಿಗೆ ಅಗ್ರಪೂಜೆ

ಭೃಗುಮಹರ್ಷಿ ಬ್ರಹ್ಮನ ವಂಶದಲ್ಲೆ ಹುಟ್ಟಿದವನು. ತೇಜಸ್ಸಿನಲ್ಲೂ ಓಜಸ್ಸಿನಲ್ಲೂ ಅದ್ವಿತೀಯನು. ಅನೇಕ ವರುಷಗಳೇ ತಪಸ್ಸು ಮಾಡಿ ಸಿದ್ಧಿಪುರುಷನೆನಿಸಿದ್ದನು. ದಾರ್ಶನಿಕ ಪ್ರಪಂಚದಲ್ಲಿ ತನ್ನ ವಿಶಿಷ್ಟ ತತ್ವ-ಸಿದ್ಧಾಂತಗಳಿಂದ ಭೃಗುವಿನ ಹೆಸರು ಹೊಸತರಂಗಗಳನ್ನೆಬ್ಬಿಸಿತ್ತು. ಆದರೇನು! ತಾನೆ ಬ್ರಹ್ಮರ್ಷಿ ಎಂದೂ ತನ್ನ ಬಲಅಂಗಾಲಿನಲಿ ಅತೀಂದ್ರಿಯ ನೇತ್ರಹೊಂದಿದ್ದೇನೆಂದೂ ನಿಂತಲ್ಲಿ ನಿಲ್ಲದೇನೆ ಭೂಮಿಯನ್ನೇ ಅಳೆದು ಬಿಡುವವನಂತೆ ನಿರ್ಲಕ್ಷ್ಯದಿಂದ ನಡೆಯುತ್ತಿದ್ದನು. ಮೂರನೆಯ ಜ್ಞಾನಸೂಕ್ಷ್ಮವನ್ನು ಅರಿತಿದ್ದರೇನು? ಆತನ ಅಹಂಕಾರದಂಧಕಾರವೆ ಅದನ್ನೂ ಮುಚ್ಚಿಹಾಕಿತ್ತು. ಮೂರುಲೋಕಗಳಲ್ಲಿಯೂ ಸರ್ವಶಕ್ತನಾದ ತಪಸ್ವಿ ತಾನೆಂದೂ, ತಾನೆ ಸಾತ್ವಿಕತೆಯ ಮಹಾನ್ ಸಾಧಕನೆಂದೂ ಹೆಮ್ಮೆಯಿಂದ ಬೀಗುತ್ತಿದ್ದನು. ಆದ್ದರಿಂದಲೆ ತನಗೆ ತ್ರಿಮೂರ್ತಿಗಳನ್ನೇ ಪರೀಕ್ಷಿಸುವ ಅಧಿಕಾರ ಲಭಿಸಿದೆ ಎಂದೇ ಭಾವಿಸಿದ್ದನು.

ಅಂದು ಸತ್ಯಲೋಕದಲ್ಲಿ ಎಂದಿನಂತೆಯೆ ಸಭೆ ಸೇರಿತ್ತು. ಬ್ರಹ್ಮದೇವನು ಸುವರ್ಣಖಚಿತ ಸಿಂಹಾಸನಾರೂಢನಾಗಿದ್ದನು. ಆ ತುಂಬಿದ ಸಭೆಯಲ್ಲಿ ಯಕ್ಷರು, ಕಿನ್ನರರು, ಸಪ್ತಮಹರ್ಷಿಗಳು, ಅಷ್ಟದಿಕ್ಪಾಲಕರು, ಸುರರೂ ತಮ್ಮ ತಮ್ಮ ಆಸನದಲ್ಲಿ ಕುಳಿತಿದ್ದರು. ಸಭಾಸದರೆಲ್ಲರೂ ಬ್ರಹ್ಮದೇವನ ಮಾತುಗಳನ್ನು ಆಲಿಸುತ್ತಿದ್ದರು. ನಾಲ್ಕು ವೇದಗಳ ಪಾರಂಗತನಾದ ಬ್ರಹ್ಮದೇವ, ಮಾನವನಿಗೆ ಇಂದ್ರಿಯಾತೀತವಾದ ಎಷ್ಟೋ ವಸ್ತು-ವಿಷಯಗಳನ್ನು,ಜಗತ್ತಿನ ಅತ್ಯದ್ಭುತವಾದ ಪ್ರಾಕೃತಿಕ ವಿಶೇಷಗಳನ್ನೂ, ಇಹಪರ ಸೌಖ್ಯಾದಿ ಕರ್ಮಫಲಗಳನ್ನೂ, ಪಾಪಪುಣ್ಯಗಳನ್ನೂ, ತನ್ನ ದಿವ್ಯ ಸಮಾಧಿಸ್ಥಿತಿಯಲ್ಲಿಯೆ ಕಂಡುಕೊಂಡ ತ್ರೈಲೋಕ್ಯವಿಧಿತ ಸಾಧಕ ಬಾಧಕಗಳನ್ನೂ ಸಭಾಸದರಿಗೆ ವಿವರಿಸುತ್ತಿದ್ದನು. ಸೃಷ್ಟಿಕ್ರಿಯೆಗಳಲ್ಲಿ ಉಂಟಾಗುವ ಬದಲಾವಣೆಗಳು, ಹಾಗೂ ಕಲ್ಪಾಂತರಗಳಲ್ಲಿ ಪುನರಜ್ಜೀವನಕ್ಕಾಗಿಯೆ ಮೂಡಿ ಬರುವ ಸಂದೇಶಗಳು ಹೇಗೆ ದೈವೇಚ್ಛೆಯಿಂದ ಕೂಡಿರತ್ತವೆ; ಸರ್ವಲೋಕಗಳಿಗೂ ಹಿತವನ್ನೇ ಕೋರುತ್ತವೆಂಬುದನ್ನು ತಿಳಿಯಪಡಿಸುತ್ತಿದ್ದನು.

ಆಗಲೆ ಭೃಗುಋಷಿಯ ಆಗಮನವಾಗಿತ್ತು. ಬ್ರಹ್ಮದೇವನು ಆತನನ್ನು ನೋಡಿಯೂ ನೋಡದವನಂತೆ ಪ್ರವರ್ತಿಸುವುದೇನು? ಭೃಗುವೂ ಕಡಿಮೆಯೇನು? ಬ್ರಹ್ಮನಿಗೆ ವಂದಿಸದೇ ಹೋದನು. ಮುಂದೆಹೋಗಿ ಸಭೆಯ ಮಧ್ಯೆ ಉನ್ನತಾಸನದಲ್ಲಿ ಕುಳಿತನು. ಭೃಗುವಿನ ಆಗಮನ ಕಂಡು ಸಂತೋಷಟ್ಟವರೆಲ್ಲರೂ ಇದೀಗ ಚಕಿತರಾದರು. ಸಭೆಯಲ್ಲಿ ಗುಸುಗುಸು ಸದ್ದಾಗತೊಡಗಿತು.
ಭೃಗು ತನ್ನ ವಂಶಜನೇ ಆದರೂ ಮಹಾಗರ್ವಿಷ್ಟನೆಂದೂ ಬ್ರಹ್ಮ ಕೇಳಿ ತಿಳಿದಿದ್ದನಲ್ಲವೇ, ತಾನೊಬ್ಬನೆ ಮಹಾಜ್ಞಾನ ಸಂಪನ್ನನೆಂದೂ, ಜ್ಞಾನಕ್ಕೆ ತಾನೆ ಅಧಿಪತಿ ಎಂದೂ ಭೂಲೋಕದಲ್ಲಿ ಮೆರೆಯುತ್ತಿದ್ದ ಈ ಭೃಗುವಿಗೆ ಸ್ವರ್ಗಲೋಕದ ಆದರೋಪಚಾರಗಳೇಕೆ? ಅಂದುಕೊಂಡ ಬ್ರಹ್ಮದೇವ ಆತನತ್ತ ತಿರಸ್ಕಾರದಿಂದ ನೋಡಿದನು.

ಭೃಗುವಿನ ಕಣ್ಣುಗಳು ಕೆಂಪಾದವು. ದೃಷ್ಟಿಯು ತೀಕ್ಷ್ಣವಾಯಿತು. ಬಳಿಗೆ ಬಂದವರನ್ನು ಕಂಡು ಮಾತನಾಡಿಸುವಷ್ಟೂ ವ್ಯವಧಾನವೂ ಈ ಸೃಷ್ಟಿಕರ್ತನಿಗೆ ಇಲ್ಲವಾಯಿತೇ... ಎಂದು ಆತ ಯೋಚಿಸುತ್ತಿರಲು,

ಬ್ರಹ್ಮದೇವ ಕ್ರೋಧ ತಪ್ತನಾಗಿ ಕೇಳಿದನು-
“ಭೃಗು ನನ್ನ ವಂಶಜ ನೀನು! ನಿನಗೆ ಧರ್ಮಾಧರ್ಮಗಳ ಪರಿಜ್ಞಾನ ಇರಬೇಡವೇ? ನೀನೆ ಮಹಾಜ್ಞಾನಿ ಎಂದು ಸಭೆಯ ಮರ್ಯಾದೆಯನ್ನು ಮರೆತು ವರ್ತಿಸುವುದೇನು? ಸಭಾಧ್ಯಕ್ಷರಿಗೆ ವಂದಿಸದೇ ಕುಳಿತೆ ಏಕೆ?”
ಭೃಗು ಋಷಿ ಉತ್ತರಿಸದೆ ಶಷ್ಕನಗೆ ನಕ್ಕನು.

ತನ್ನ ಸಹನೆ-ಸಂಯಮದ ಪರೀಕ್ಷೆ ಇದೆಂದು ಬ್ರಹ್ಮದೇವನಿಗೂ ತಿಳಿಯದೇಹೋಯಿತು.
“ಭೃಗು! ನೀನೆ ಬ್ರಹರ್ಷಿ ಎಂಬ ಅಹಂಕಾರವೇ? ತ್ರಿಮೂರ್ತಿಗಳನ್ನೂ ಹಸುಗೂಸುಗಳಂತೆ ಆಡಿಸಿದ ಅತ್ರಿ ಮಹಾಮುನಿಗಿಂತಲೂ ನೀನು ಅಧಿಕನೇ? ಸ್ವರ್ಗಲೋಕದ ಅಧಿಪತಿ ಇಂದ್ರನನ್ನೇ ಶಪಿಸಿದ ಗೌತಮನಿಗಿಂತಲೂ ಶ್ರೇಷ್ಠನೇ ನೀನು? ಜಮದಗ್ನಿಗಿಂತ ನೀನೇ ಶಕ್ತಿವಂತನೇನು?”

ಈಗಲೂ ಬ್ರಹ್ಮದೇವನ ಆವೇಶದ ಮಾತುಗಳಿಗೆ ಭೃಗುವು ಪ್ರತಿಕ್ರಿಯಿಸದೇ, ಇದು ರಜೋಗುಣ ಲಕ್ಷಣವಲ್ಲದೇ ಇನ್ನೇನು? ಅಂದುಕೊಂಡನು. ಅದೇ ವ್ಯಂಗ್ಯದ ನಗೆಯಲ್ಲಿ ನಿಟ್ಟಿಸಿದನು.

"ಭೃಗು ನಿನಗೆ ಇಷ್ಟೊಂದು ದುರಭಿಮಾನವೇನು ನೀನು ತಿಳಿಗೇಡಿಯಂತೆ ವರ್ತಿಸುವುದೇ? ನಿನಗೆ ಗರ್ವಭಂಗವಾಗದೇ ಇರುವುದಿಲ್ಲ” ಬ್ರಹ್ಮದೇವನೆಂದಾಗ,

ಭೃಗುವು ಚಟಕ್ಕನೆದ್ದು ನಿಂತು ಹೇಳೀದನು-“ಬ್ರಹ್ಮದೇವ! ನಿನ್ನೀ ಆವೇಶದ ಮಾತುಗಳನ್ನು ನಿಲ್ಲಿಸು. ನಿನ್ನ ಬಳಿಗೆ ಬಂದವರು ಯಾರೇ ಇರಲಿ, ಮೊದಲು ಅವರನ್ನು ಶಾಂತರೀತಿಯಿಂದ ಮಾತನಾಡಿಸಬೇಡವೇ? ಮರ್ಯಾದೆಯಿಂದಲೆ ಬಂದ ಕೆಲಸವೇನೆಂದು ವಿಚಾರಿಸಬೇಡವೇ? ನೀನೊಬ್ಬ ಮದಾಂಧ ರಾಜನಂತೆ ವರ್ತಿಸುವುದೇನು? ಒಂದು ಮಹಾಯಜ್ಞದ ಮಹತ್ಕಾರ್ಯ ನಿಮಿತ್ತ ಭೂಲೋಕದಿಂದ ಅನೇಕ ಮಹರ್ಷಿಗಳೆಲ್ಲರ ಅಪೇಕ್ಷೆಯಂತೆ ಇಲ್ಲಿಗೆ ಬಂದ ಈ ಮಹಾತಪಸ್ವಿಗೆ ನೀನು ಹೇಯವಾಗಿ ನಿಂದಿಸುವುದೇನು? ಪ್ರಜಾಪತಿ ಎನಿಸಿದ ನೀನು ಪರಾಮರ್ಶಿಸದೇ ಹೀಗೆ ನಿನ್ನ ರಜೋಗುಣವನ್ನೇ ಪ್ರದರ್ಶಿಸುವುದೇನು? ನಿನಂಥ ದೇವನಿಗೆ ಪೂಜೆಯೇಕೆ? ಇಂದಿನಿಂದ ಭೂಲೋಕವಾಸಿಗಳು ನಿನ್ನನ್ನು ಪೂಜಿಸದಂತಾಗಲಿ” ಎಂದು ಭೃಗುಮಹರ್ಷಿಯು ಬ್ರಹ್ಮನಿಗೆ ಶಪಿಸಿದನು.

ಬ್ರಹ್ಮದೇವನು ತತ್ ಕ್ಷಣವೇ ಪೀಠದಿಂದೆದ್ದು, “ಭೃಗುಮಹರ್ಷಿ...!” ಎಂದು ಆರ್ತನಾಗಿ ಕರೆದನು.

ಭೃಗುವು ಹಿಂದಿರುಗಿಯೂ ನೋಡದೇ ಬ್ರಹ್ಮನ ಸತ್ಯಲೋಕದಿಂದ ಸರಸರನೆ ನಡೆದಿದ್ದನು.

ಆಗ ದೇವಿ ಸರಸ್ವತಿಯು,
“ಸ್ವಾಮಿ, ನಿಮಗೆ ಮಾತ್ರ ಪೂಜೆ ಇಲ್ಲವೆಂದುದಷ್ಟೇ... ಪೂಜಾ ವಿಧಿಗಳಲ್ಲಿ ನಿಮ್ಮ ಸತ್ಯವೇದಗಳಿಗೆ ಸದಾ ಅಗ್ರಪೂಜೆ ಸಲ್ಲುತ್ತದೆಯಲ್ಲವೇ ? ಚಿಂತಿಸದಿರಿ ಸ್ವಾಮಿ..” ಎಂದು ನಸುನಗೆಯಲ್ಲೇ ಹೇಳಿದಳು ಆ ಜಗನ್ನಾತೆ.

0 comments: