Saturday, August 05, 2006

ಸಂಚಿಕೆ-5 ನಮ್ಮ ಸತ್ಕರ್ಮ ಫಲವು

ಎಲ್ಲಕಾಲಕ್ಕೂ ಕೆಟ್ಟದ್ದೆಂಬುದು ಎದ್ದು ತೋರುವುದು. ತನಗೆ ತಾನು ಹೆದರಿದಾಗಲೆ ಎಲ್ಲ ಧರ್ಮ ಸೂಕ್ಷ್ಮಗಳೂ ತಿಳಿಯುವುದು. ತನ್ನೊಳಗಣ ಸತ್ವಗುಣದ ಮರ್ಮವೇನೆಂದು ಹೊಳೆಯುವುದು. ಆ ಗುಣವೇ ಪೌರುಷೇಯವಾಗುವುದು. ಪೂರ್ವ ಸಂಸ್ಕಾರವೂ ಅರ್ಥ ಪಡೆಯುವುದು. ಹಾಗೂ ಐಹಿಕ ಸಾಧನೆಗಳೂ ಸಿದ್ಧಿಸುವುದು. ಒಳ್ಳೆಯ ಮತ್ತು ಕೆಟ್ಟ ಸಂಸ್ಕಾಗಳು, ಅವುಗಳಿಗೆ ತಕ್ಕಂತೆಯೆ ಕರ್ಮಫಲಗಳು. ಎಂದಿಗೂ ದೇವರ ಅವತಾರ ಸ್ವರೂಪಗಳಲ್ಲಿ ಕಂಡು ಬರುವ ಜೀವನ ಸಿದ್ಧಾಂತಗಳು ಅನುಸರಣೀಯವೇ....

ನಾರದರು ಆಸನಾರೂಢರಾಗುತ್ತಿದ್ದಂತೆಯೆ ಅದೇ ಘಳಿಗೆಯಲ್ಲಿ ಬ್ರಹ್ಮದೇವರು ಕಣ್ತೆರೆದರು,
“ಪಿತಾಮಹ, ಅದೇನು ಸುಧೀರ್ಘ ಚಿಂತೆಯಲ್ಲಿ ಮುಳುಗಿದ್ದೀರಿ?” ನಾರದರು ವಿನಮ್ರತೆಯಿಂದ ಕೇಳಿದರು.
“ನಾರದ, ನಿನಗೆ ತಿಳಿಯದಿರುವುದೇನಿದೆ? ಭೂಲೋಕದ ಸ್ಥಿತಿಗತಿಗಳು, ಅಲ್ಲಿ ದಿನ ನಿತ್ಯವೂ ಹೆಚ್ಚುತ್ತಿರುವ ಜನ ಸಂಖ್ಯೆಯೂ, ಜನರ ಅಜ್ಞಾನ-ಅಂಧಕಾರವೂ, ಧರ್ಮಕ್ಷಯಿಸುತ್ತಿರುವುದೂ, ಧರ್ಮ ಸಂಪೂರ್ಣ ನಾಶವಾದರೆ ಸೂರ್ಯ ದಿನವೂ ಅಸ್ತಮಿಸಲಾರ. ಉರಿಯುತ್ತಲೇ ಇರುತ್ತಾನೆ. ಆಗ ಜಗತ್ತೇ ಧಗಧಗಿಸೀತು! ಯಾಕೆಂದರೆ, ಜನರೋ ತಮ್ಮ ತಮಂಧದ ಕೇಡಿನಿಂದಲೇ ಲೋಕ ಕಂಟಕರಾಗುತ್ತಿದ್ದಾರೆ. ಜಗತ್ತಿನ ಪ್ರಕೃತಿಯಲಿ ಎನೆಲ್ಲ ವಿಕೃತಿ-ಅನಾಹುತಗಳಿಗೆ ಕಾಣರಾಗುತ್ತಿದ್ದಾರೆ...”
“ಪಿತಾಮಹ, ಈ ಭೂಲೋಕದ ಜನರು ರಾಗದ್ವೇಷಗಳಿಗೆ ವಶರಾಗಿ ಧನಬಲ ದೇಹಬಲವೇ ಸರ್ವಸ್ವವೆಂದು ಬಗೆದಿದ್ದಾರೆ. ತಾವೂ ಕಷ್ಟಪಡದೇ ಕಷ್ಟಪಡುವವರನ್ನೂ ಕರ್ತವ್ಯ ನಿಷ್ಠರಾಗಿರುವವರನ್ನೂ ಹಿಂಸೆ, ಶೋಷಣೆ, ವಂಚನೆಗಳಿಂದ ದೋಚು ತ್ತಿರುವವರು ಹೆಚ್ಚುತ್ತಿದ್ದಾರೆ. ಹೆಣ್ಣನ್ನು ಗೌರವಿಸದೆ ಭೋಗವಸ್ತುವೆಂದೇ ತಿಳಿಯುತ್ತಾರೆ. ಗೃಹಿಣಿಯರೂ ಕೂಡ ಗೃಹಶಾಂತಿ, ನೆಮ್ಮದಿ ಕಾಣದೇ ಹೋಗುತ್ತಿದ್ದಾರೆ. ಅನ್ಯಾಯ,ಅಪಚಾರ,ಅತ್ಯಾಚಾರಗಳಿಂದಲೆ ಸುಖದ ಫಲಾಪೇಕ್ಷೆ ಮಾಡುವ ಜನರೇ ಹೆಚ್ಚುತ್ತಿದ್ದಾರೆ’’ ನಾರದರೆಂದರು.
“ಹೌದು, ನಾರದ, ಸುಖದ ಫಲಾನುಭವಿಗಳಾದಷ್ಟೂ ಫಲಾಪೇಕ್ಷೆಯೆ ಅವರಿಗೆ. ಪರಮಾರ್ಥವೆ ಬೇಡವಾಗಿದೆ. ಹಿಂದೆ ದ್ವಾಪರ ಯುಗದಲ್ಲಿ ಶ್ರೀಕೃಷ್ಣ ತನ್ನ ಭಗವದ್ಗೀತೆಯಲ್ಲಿ- “ಕರ್ಮಣ್ಯೇವಾಧಿಕಾರಸ್ತೇ ಮಾಫಲೇಶು ಶುಕದಾಚನ’’ ಎಂದು ಬೋಧಿಸಿದ್ದರೂ ಈ ಜನರು ಎಚ್ಚೆತ್ತುಕೊಂಡಿಲ್ಲ... ತಮ್ಮಕರ್ಮಫಲಗಳಿಗೆ ತಾವೇ ಅಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಅವೆಂಥ ಕರ್ಮಗಳೆ ಆದರೂ ಪುಣ್ಯ ಫಲವನ್ನೇ ಅಪೇಕ್ಷಿಸುತ್ತಾರೆ.... ಹೀಗೇ ಆದರೆ, ಲೋಕ ಕಲ್ಯಾಣವಾಗುವುದಾದರೂ ಹೇಗೆ ನಾರದ...?”
“ಭಗವತ್ ಪ್ರೇರಣೆಯಿಂದ ಇದೇ ಉದ್ದೇಶಕ್ಕಾಗಿ ಭೂಲೋಕದಲ್ಲಿ ಅನೇಕ ತಪಸ್ವಿಗಳು, ಮಹಾಜ್ಞಾನಿಗಳೂ ಸೇರಿ ಒಂದು ಮಹಾಯಜ್ಞಕ್ಕೆ ಸಿದ್ಧತೆ ನಡೆಸಿದ್ದಾರೆ. ಆದರೆ, ನನಗೊಂದು ಸಂದೇಹ ಪಿತಾಮಹ’’ ನಾರದರೆಂದರು.
“ಅದೇನು ಹೇಳು ನಾರದ”
“ಮಹರ್ಷಿಗಳು, ಮಹಾಜ್ಞಾನಿಗಳು ಎಲ್ಲರೂ ಸೇರಿ ನಿಷ್ಕಾಮ ಕರ್ಮಿಗಳಾಗಿಯೆ ಲೋಕಕಲ್ಯಾಣಾರ್ಥವಾಗಿ ಮಹಾಯಜ್ಞವನ್ನೇನೋ ಮಾಡುತ್ತಾರೆ. ಆದರೆ, ಆ ಮಹಾಯಜ್ಞದ ಹವಿಸ್ಸನ್ನು ಎಲ್ಲ ದೇವಾನುದೇವತೆಗಳಿಗೆ ಅರ್ಪಿಸುವರೋ ಅಥವಾ ಸಮಷ್ಟಿಗೆ ಮೂಲಾಧಾರವಾದ ಏಕೈಕ ಸತ್ ಶಕ್ತಿ ಸ್ವರೂಪನು ಯಾರೆಂದು ತಿಳಿದೇ ತಮ್ಮ ಯಜ್ಞಫಲವನ್ನು ಆ ಒಬ್ಬ ದೇವನಿಗೆ ಅರ್ಪಿಸುವರೊ ಎಂಬುದೇ ನನಗೆ ಸಂದೇಹಾಸ್ಪದ ವಿಷಯವಾಗಿದೆ.”ನಾರದರೆಂದರು.
“ನಾರದ, ಒಂದೆಡೆ ನಿಷ್ಕಾಮ ಕರ್ಮಿಗಳು ತಾವು ಮಾಡುವ ಸತ್ಕಾರ್ಯದಿಂದ ಇಡೀ ಸಮಷ್ಟಿಗೆ ಒಳಿತಾದರೆ ಸಾಕೆಂದು ತಿಳಿಯುವರು. ಅದರ ಫಲ ಯಾವೊಂದು ಶಕ್ತಿ ಸ್ವರೂಪಕ್ಕೆ ಸಲ್ಲುವುದೆಂದೇನೂ ಚಿಂತಿಸಲಾರರು. ಇನ್ನೊಂದೆಡೆ ಪಾಪಭಿತಿಯೆ ಇಲ್ಲದ ಜನರು ತಮ್ಮ ಹೀನಕೃತ್ಯಗಳಿಗೇ ಪುಣ್ಯಕ್ಕೆ ಸಮನಾದ ಫಲವನ್ನೇ ಅಪೇಕ್ಷಿಸುವರು. ಆ ಫಲವೋ ಅದ್ಯಾವ ದೈತ್ಯ ಶಕ್ತಿಯಿಂದ ಲಭಿಸಿದರೂ ಸರಿಯೆ ಅವರಿಗೆ, ಭೂಲೋಕದ ವೈಚಿತ್ರ್ಯವೆ ಹೀಗೆ. ಆದರೆ,ನಾರದ ಯಾವೊಂದು ಸತ್ಶಶಕ್ತಿಯಿಂದ ಮಾತ್ರವೆ ಜಗತ್ತು ಇಂದಿಗೂ ಅಸ್ತತ್ವದಲ್ಲಿರುವುದೋ ಅದೇ ಶ್ರೇಷ್ಠವೆಂದೂ, ಆ ಸರ್ವಶಕ್ತಿಗಾಗಿಯೆ ಪ್ರೀತ್ಯರ್ಥವಾದ ನಮ್ಮ ಸತ್ಕರ್ಮಗಳ ಫಲವೂ ಆ ದಿವ್ಯಶಕ್ತಿಗೇ ಸಲ್ಲುವುದೆಂದು ತಿಳಿಯಲು, ಆ ಮಹಾವಿಷ್ಟು ಇನ್ನೊಂದು ಅವತಾರವನ್ನೆ ಮಾಡಬೇಕಾ ಗುವುದೇನೋ...”ಬ್ರಹ್ಮದೇವ ನಸುನಕ್ಕನು.
-ಎಚ್.ಶಿವರಾಂ, 5 ಆಗಸ್ಟ್ , 2006

0 comments: