Saturday, June 30, 2007

15.ಮಹಾಲಕ್ಷ್ಮಿಯೆ ಇಲ್ಲದ ವೈಕುಂಠ ವೈಭವವಿನ್ನೆಲ್ಲಿ…

ಮಹಾಲಕ್ಷ್ಮಿ ಇಲ್ಲದ ವೈಕುಂಠ ವೈಭವವಿನ್ನೆಲ್ಲಿ..? ಅದು ಉಡುಗಿ ಹೋಯಿತು. ಕಳಾಹೀನವಾಯಿತು. ಅಲ್ಲೆಲ್ಲವೂ ಶೂನ್ಯವೆನಿಸಿ ಬಿಕೋ ಎನ್ನತೊಡಗಿತು. ಶ್ರೀಲಕ್ಷ್ಮಿಯ ಅಗಲಿಕೆಯಿಂದ ವಿಷ್ಣುವೂ ಕೂಡ ಧರ್ಮ ಸಂಕಟಕ್ಕೆ ಸಿಲುಕಿದನು. ಸ್ವತಃ ಸಂರಕ್ಷಕನೆನಿಸಿಕೊಂಡಾತನನ್ನೂ ಸಂಕಷ್ಟಗಳು ಬಿಡಲಿಲ್ಲ. ಹೌದು, ಗೃಹಲಕ್ಷ್ಮಿಯೆ ಮುನಿಸಿಕೊಂಡು ಹೊರಟು ಹೋದಮೇಲೆ ಸ್ವರ್ಗ ಚ್ಯುತಿಯೂಗುವುದೂ ಖಚಿತವೇ. ಅಷ್ಟೇ ಅಲ್ಲದೇ, ಜಗದೈಕ ಸ್ವರೂಪಿಗೆ ಭೂಲೋಕ ಕೈಬೀಸಿ ಕರೆಯುತ್ತಿತ್ತು;ಕಲಿಯುಗದ ಜನತೆಗೆ ಕಲ್ಯಾಣಮಾಡಲಿಕ್ಕಾಗಿಯೆ.
ಗಂಗಾನದಿಯ ದಕ್ಷಿಣ ದಿಕ್ಕಿನಲ್ಲಿ ಹಲವಾರು ಹೋಜನಗಳು ಕ್ರಮಿಸಿ ಹೋದರೆ ಸುವರ್ಣಮುಖಿ ಎಂಬ ಪುಣ್ಯ ನದಿಯು ಸಿಗುವುದು. ಹಿಂದೆ ಪರಾಶರರ ಪುತ್ರ ವ್ಯಾಸನು ಶುಕಮುನಿಗೆ ವರ ನೀಡಿದ ತೀರವಿದು. ಅಂದಿನಿಂದ ಶುಕಮುನಿಗಳು ಈ ನದಿಗೆ ಸಮೀಪದಲ್ಲೇ ಆಶ್ರಮ ಕಟ್ಟಿಕೊಂಡು ವಾಸಿಸುತ್ತಿದ್ದರು. ಅಗಸ್ತ್ಯ ಋಷಿಗಳು ಈ ಸುಂದರ ತಾಣವನ್ನೂ, ಇಲ್ಲಿನ ಸುಪ್ರಶಾಂತತೆಯನ್ನೂ, ಎಲ್ಲ ದುಷ್ಕೃತಿಗಳನ್ನೂ ತೊಡೆದು ಮುದ ನೀಡುವ ಪ್ರಫುಲ್ಲತೆಯನ್ನೂ ಗ್ರಹಿಸಿ ಇದನ್ನೇ ಪೂಜನೀಯ ಪುಣ್ಯ ಭೂಮಿ ಎಂದು ಹೆಸರಿಸಿದರು.

ಸುವರ್ಣಮುಖಿ ನದಿಯ ಉತ್ತರ ದಿಕ್ಕಿನಲ್ಲಿ ಸಪ್ತಗಿರಿ ಧಾಮ! ಅಲ್ಲಿರುವುದೇ ವೆಂಕಟಾದ್ರಿ. ವೆಂಕಟಾದ್ರಿಯಲ್ಲಿ ಸ್ವಾಮಿ ಪುಷ್ಕರಣಿ ತೀರ್ಥವು ಬೇರೆಲ್ಲ ತೀರ್ಥಗಳಿಗಿಂತಲೂ ಶ್ರೇಷ್ಠವೆನಿಸಿದೆ. ಈ ತೀರ್ಥದ ಮಹಿಮೆಗಳು ಅಪಾರ. ಯಾವಾಗಲೂ ತುಂಬಿರುವ ಈ ತೀರ್ಥದಲ್ಲಿ ದೇವತೆಗಳೂ ಪ್ರತಿ ವರುಷ ಧನುರ್ಮಾಸದಲ್ಲಿ ಶುಕ್ಲದ್ವಾದಶಿಯ ಪ್ರಾತಃಕಾಲದಲ್ಲಿ ಮಿಂದು ಶುಭ್ರಸ್ನಾತರಾಗುವರೆನ್ನುವರು. ಅಂದಮೇಲೆ ಮಾನವರಿಗೆ ಈ ತೀರ್ಥ ಸ್ನಾನದ ವಿಶೇಷವು ಅರಿವಾಗದಿರದು. ಹಿಂದೆ ಪುರಂದರ ದಾಸರು ತಿರುಪತಿಗೆ ಬಂದಿದ್ದಾಗ ಅವರು ನಿತ್ಯವೂ ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನಮಾಡಿ, ಈ ಪುಷ್ಕರಣಿಯ ಆಗ್ನೇಯ ದಿಕ್ಕಿನಲ್ಲಿ ಆನ್ಹಿಕಕ್ಕೆ ಕೂರುತ್ತಿದ್ದರು. ಈಗಿನಂತೆ ಆಗ ಮಂಟಪಗಳು ಇರಲಿಲ್ಲ. ಶ್ರೀಕೃಷ್ಣದೇವರಾಯನು ಒಂದು ಶಿಲಾಮಂಟಪವನ್ನು ದಾಸರಿಗಾಗಿಯೆ ಕಟ್ಟಿಸಿಕೊಟ್ಟನು. ಆ ಮಂಟಪಕ್ಕೆ “ದಾಸ ಮಂಟಪ” ಎಂದು ಹೆಸರಾಯಿತು. ಯಾವ ದಾಸರೆ ಬರಲಿ, ಪುರಂದರ ದಾಸರು ಆನ್ಹೀಕಕ್ಕೇ ಕೂರುತ್ತದ್ದ ಸ್ಥಳವೆಂದು ತಾವೂ ಅಲ್ಲೇ ಪ್ರಾರ್ಥನೆ ಪೂಜಾದಿಗಳನ್ನು ನಡೆಸುವ ಸಂಪ್ರದಾಯವಿತ್ತು. ಈಗ ಅಲ್ಲೊಂದು ಕಛೇರಿ ಇದೆಯಷ್ಟೇ.

ಸ್ವಾಮಿ ಪುಷ್ಕರಣಿಯ ಪಶ್ಚಿಮ ದಿಕ್ಕಿನಲ್ಲಿ ಹಿಂದಿನ ಯುಗವೊಂದರಲ್ಲಿ ವರಹಾವತಾರಿ ಯಾಗಿದ್ದ ಶ್ರೀ ಹರಿಯೆ ಇಂದಿಗೂ ಅಶ್ವತ್ಥ ವೃಕ್ಷದ ಬಳಿ ನೆಲೆಯೂರಿ ನಿಂತಿರುವನು. ಮುಕ್ಕೋಟಿ ತೀರ್ಥಗಳ ಉಗಮಸ್ಥಾನವಾದ ಈ ವರಹಾಗಿರಿ ಮಹಾವಿಷ್ಣುವನ್ನೂ ಬೆರಗು ಗೊಳಿಸಿ ಆಕರ್ಷಿಸಿ ಬರಮಾಡಿಕೊಂಡಿತ್ತು. ಇಲ್ಲೊಂದು ವಿಶಾಲವಾಗಿ ಬೆಳೆದ ಹುಣಿಸೆ ಮರವಿತ್ತು. ಅದರ ಬುಡದಲ್ಲಿ ಒಂದು ದೈವಿಕ ನೆಲೆಯಾದ ಹುತ್ತವಿತ್ತು. ಇದೇ ಹುತ್ತವು ಶ್ರೀಮನ್ನಾರಯಣನಿಗೆ ತನ್ನ ಗೃಹಲಕ್ಷ್ಮಿಯ ಅಗಲಿಕೆಯ ಚಿಂತೆ ಕಳೆಯಲು, ಲೋಕೋತ್ತರವಾದ ಕಾರ್ಯಗಳಿಗೆ ಧನ್ಯತೆ ಕಾಣಿಸಲು ಆವಾಸ ಸ್ಥಾನವಾಯಿತು. ಆತನ ಮುಂದಿನ ಮಹತ್ತದ ಗಮ್ಯಕ್ಕೆ ಅದೇ ಮೂಲವೆನಿಸಿತು. ಇಲ್ಲೇ ಶ್ರೀಹರಿಯು ಧ್ಯಾನಮಗ್ನನಾಗಿ ಕುಳಿತನು. ಅಹರ್ನಿಶಿ ಇಹವನ್ನೇ ಮರೆತನು. ನಿಶ್ಚಲ ನಿರ್ವಿಕಲ್ಪಸಮಾಧಿ ಸ್ಥಿತಿಯಲ್ಲೇ ಸ್ಥಿತಿಯಲ್ಲೇಸ್ಥಿತಿಯಲ್ಲೇ ವರುಷಗಳನ್ನೇ ಕಳೆದನು.

ಶರೀರದ ಸುತ್ತಮುತ್ತ ಹುತ್ತವು ಗಿಡಗೆಂಟೆಗಳು ಆಳೆತ್ತರಕ್ಕೆ ಬೆಳೆದಿದ್ದವು. ಆ ದೇವನು ಅಲ್ಲಿರುವುದೇ ಯಾರಿಗೂ ತಿಳಿಯಾದಾಗಿತ್ತು. ಮತ್ತೂ ಅನೇಕ ವರುಷಗಳೆ ಸಂದವು. ಮಹಾವಿಷ್ಣುವಿನ ಈ ಘೋರ ತಪವನು ಭಂಗ ಮಾಡುವುದು ಶಕ್ಯವೇ? ಎಂದು ಬ್ರಹ್ಮನು ಪರಶಿವನಾದಿಯಾಗಿ ದೇವಾನು ದೇವತೆಗಳೆಲ್ಲರೂ ಗಾಢವಾಗಿ ಚಿಂತಿಸತೊಡಗಿದರು. ಲೋಕ ಕಲ್ಯಾಣವಾಗಬೇಕೆಂದರೆ ಈ ಲೋಕಪಾಲಕನನ್ನು ಪುನಃ ಯೋಗ ನಿದ್ರೆಯಿಂದ ಎಚ್ಚರಿಸಬೇಕಲ್ಲ! ಇಲ್ಲದಿದ್ದರೆ ಮುಂದೇನಾಗುವುದೋ. ಇದಕ್ಕೆ ಏನಾದರೊಂದು ಸಾತ್ವಿಕವಾದ ಮಾರ್ಗವನ್ನೇ ಹುಡುಕಬೇಕಾಗುವುದೆಂದು ಪರಶಿವನೂ ಬ್ರಹ್ಮನೂ ಸೇರಿ ಸುಧೀರ್ಘವಾಗಿಯೇ ಆಲೋಚಿಸಿದರು. ತಮ್ಮ ರಜೋ ಮತ್ತು ತಮೋಗುಣಗಳನ್ನು ಯಾವುದೋ ಗಳಿಗೆಯಲ್ಲಿ ಪ್ರದರ್ಶಿಸಿ ಪರಾಭವ ಹೊಂದಿದ್ದರೇನು! ಶ್ರೀವಿಷ್ಣುವಿನ ಅವತಾರ ಸ್ವರೂಪದಲ್ಲಿ ಜಗತ್ತಿಗೊಂದು ಸಂದೇಶ ಸಾರುವ ಈ ಘನ ಕಾರ್ಯದಲ್ಲಿ ತಾವೂ ಭಾಗಿಗಳೆ ಆಗುವುದರಿಂದ ತಮ್ಮ ಸತ್ವ ಗುಣವೂ ಸಂಪನ್ನವಾಗುವುದೆಂದು ಅರಿತರು. ಆದರೆ, ಶ್ರೀಲಕ್ಷೀಯ ಸಹಕಾರವಿಲ್ಲದೆ ಇದು ಸಾಧ್ಯವೇ ಎಂಬ ಸಂದೇಹ ಬೇರೆ ಕಾಡಿತ್ತು.

ಅದೇ ವೇಳೆಗೆ ತ್ತಿಕಾಲ ಜ್ಞಾನಿಗಳಾದ ನಾರದರು ದಯಮಾಡಿಸಿದ್ದರು. ಅವರು ಬ್ರಹ್ಮ ಮಹೇಶ್ವರರ ಸಂದೇಹ ನಿವಾಹರಣೆ ಮಾಡುತ್ತ ಲಕ್ಷೀದೇವಿಯು ಕೊಲ್ಹಾಪುರದಲ್ಲಿರುವಳೆಂದೂ ಶ್ರೀಮನ್ನಾರಯಣನನ್ನೆ ನೆನೆಯುತ್ತ ಧ್ಯಾನಮಗ್ನಳಾಗಿರುವಳೆಂದೂ ಹೇಳಿದರು. ನಾರಾಯಣನೂ ಸಾಮಾನ್ಯ ಮನುಷ್ಯನಂತಾಗಿ ನಿದ್ರಾಹಾರಗಳನ್ನು ಬಿಟ್ಟು ಕೃಶನಾಗಿರುವನು. ಆತನಿಗೀಗ ಶುಶ್ರೂಷೆ ತುಂಬಾ ಅಗತ್ಯವೆಂದೂ ಮಹಾಲಕ್ಷೀಗೆ ಈ ವಿಷಯ ತಿಳಿಸಿ ಕರೆತರುವುದು ಸೂಕ್ತವೆಂದರು. ಆಕೆಯನ್ನೊಲಿಸಲು ನೀವು ತಕ್ಷಣವೆ ಕಾರ್ಯ ಪ್ರವೃತ್ತರಾಗಬೇಕೆಂದರು.
ಆಗ ಎಲ್ಲರೂ ಮಹಾಲಕ್ಷಿ ಯನ್ನೇ ಪ್ರಾರ್ಥಿಸಿದರು.
ಆ ಲೋಕಮಾತೆಯ ಬಳಿಗೆ ಬ್ರಹ್ಮನೂ ಶಿವನೂ ಒಂದಾಗಿ ಹೊರಟು ಬಂದರು. ವೈಕುಂಠವನ್ನು ತ್ಯಜಿಸಿ ಬಂದಿದ್ದ ಆ ಶ್ರೀದೇವಿಯ ಭೂಲೋಕದ ಗೋದಾವರಿ ನದಿ ತೀರದ ಕೊಲ್ಹಾಪುರದಲ್ಲಿ ಆಶ್ರಮ ವಾಸಿಯಾಗಿದ್ದಳು. ಪರ್ಣಶಾಲೆಯೊಂದರಲ್ಲಿ ನಿತ್ಯವೂ ಧ್ಯಾನ ನಿರತಳಾಗಿದ್ದಳು. ಮಹಾತಮಸ್ವಿನಿಯೆ ಆಗಿದ್ದಳು.ಸೃಷ್ಟಿಕರ್ತನೂ ಪರಶಿವನೂ ಎದುರಿಗೇ ಬಂದು ನಿಂತರೂ ಆಕೆ ಕೂಡಲೆ ಕಣ್ತೆಯಲಿಲ್ಲ. ಪ್ರಸನ್ನ ಚಿತ್ತಳಾಗಲಿಲ್ಲ.

“ಓ, ಮಹಾಲಕ್ಷೀಯೆ ನಿನ್ನ ಕೋಪವು ಸ್ತ್ರೀ ಸಹಜವಾದುದೇ ಅದು ಅನರ್ಥಕಾರಿ ಆಗಬಾರದು ತಾಯೆ. ದಯಮಾಡಿ ಪ್ರಸನ್ನಳಾಗು” ಇಬ್ಬರೂ ಒಕ್ಕೊರಲಿನಿಂದ ಕೇಳಿಕೊಂಡರು.
ತುಸು ತಡೆದು ಮೆಲ್ಲನೆ ಕಣ್ತೆರೆದಳು ಶ್ರೀಕಾಂತೆ.
“ಓ ಸೃಷ್ಟಿಕರ್ತನೆ, ಸತ್ಯ ಶವಸುಂದರನೆ, ನನ್ನ ಕೋಪದಲ್ಲೂ ಅರ್ಥ ಹುಡುಕಲು ಬಂದಿರುವಿತೇನು? ನೀವು ಬಂದ ಕಾರ್ಯವಾದೂ ಏನು? ಮೊದಲು ಹೇಳಬಾರದೇ” ಕೇಳಿದಳು ಕಲ್ಯಾಣಕರ್ತೆ!

“ತಾಯೇ! ಜಗನ್ಮಾತೆ ಆದಿಶಕ್ತಿ ಸ್ವರೂಪಣಿ. ನೀನಲ್ಲವೆ? ಪ್ರಕೃತಿಯ ಮೂಲ ಪ್ರಧಾನ ತತ್ವ. ನಿನ್ನಲ್ಲೇ
ಆ ಮೂರು ಗುಣಗಳೂ ಅವ್ಯಕ್ತವಾಗಿರುವುದು. ಅದರಲ್ಲೆ ಒಂದಾದ ರಜೋಗುಣ ಪ್ರಭಾವದಿಂದ ನೀನು ಇಲ್ಲಿಗೆ ಬಂದೆಯಲ್ಲ. ಆದರೆ, ತಾಯೆ ನಿನ್ನ ಪ್ರಾಣ ಮಾತ್ರ ಇಂದಿಗೂ ನೀನು ಧ್ಯಾನಿಸುತ್ತಿರುವ ಆ ಮಹಾವಿಷ್ಣುವಿನ ವಕ್ಷಸ್ಥಳದಲ್ಲೆ ಇರುವುದಲ್ಲವೇ” ಬ್ರಹ್ಮದೇವನೆಂದರೆ,

ಪರಮೇಶ್ವರನು ಹೀಗೆಂದನು-
“ನಿನ್ನ ಪ್ರಾಣವಲ್ಲಭ ಇದೇ ಭೂಲೋಕದ ವರಹಾಗಿರಿಯಲ್ಲಿ ಶ್ರೀ ನಿವಾಸನಾಗಿ ಅವತಾರ ಸ್ವರೂಪಿಯಾಗಲಿರುವನು. ಆದರೇನೆಂದು ಹೇಳುವುದು ತಾಯೆ. ಇಡೀ ಜಗತ್ತೀಗೇ ನಿಗಮಗೋಚರನಾಗಬೇಕಾದವನು ಇನ್ನೂ ಅಲ್ಲಿನ ಹುತ್ತವೊಂದರಲ್ಲಿ ಯಾರಿಗೂ ಕಾಣದಂತೇ ಇರುವನು. ನೀರಾಹಾರವೊ ಇಲ್ಲದೆ ಕೃಶನಾಗಿ ಹೋಗಿರುವನು. ಇದೆಲ್ಲ ಕೇಳಿಯೂ ನಿನ್ನ ಹೃದಯ ಮಿಡಿಯುವುದಿಲ್ಲವೆ ಹೇಳು?... ಏಳು ಎದ್ದೇಳು, ನಮ್ಮೊಂದಿಗೆ ಈಗಲೇ ಸಹಕರಿಸು ತಾಯೆ.”

ತನ್ನ ಪತಿದೇವನು ಸಾಮಾನ್ಯನಂತೆ ಕಷ್ಟಪಡುತ್ತಿರುವುದನ್ನು ಕೇಳಿ ಮಹಾಲಕ್ಷೀಯು ಕರಗಿ ನೀರಾಗಿ ಹೋದಳು.
“ಈಗ ನಾನೇನು ಮಾಡಲಿ ಹೇಳಿ?...” ತೀರ ಅಮಾಯಕಳಂತೆ ಕೇಳಿದಳು.
“ಈಗ ಮಹಾವಿಷ್ಣುವಿಗೆ ಸ್ವಲ್ಪಕಾಲ ಪ್ರತಿದಿನವೂ ಹಾಲುಣಿಸುವ ಸೇವೆ ಮಾಡಬೇಕೆಂದಿದ್ದೇವೆ. ತಾಯೆ ನೀನು ಗೋಪಿಕೆಯ ವೇಷಧರಿಸಿ ಹಸು-ಕರುವನ್ನು ಚೋಳರಾಜನಿಗೆ ವಿಕ್ರಯಿಸಬೇಕಾಗುವುದು” ಬ್ರಹ್ಮನೆಂದನು.
“ಭಗವಂತನಿಗೇ ಹಾಲುಣಿಸುವಂಥ ಹಸು-ಕರುವೇ ಎಲ್ಲಿ ಸಿಗುವುದು ಹೇಳಿ?”
ಮಹಾಲಕ್ಷ್ಮಿ ಚಕಿತಳಾದಳು.

“ಹಸುಕರುಗಳೆ ನಿನ್ನ ಎದುರಿಗೇ ಇರುವುವು. ನಾವೇ ಅಂಥ ಹಸುಕರುಗಳಾಗುತೇವೆ. ನೀನೂ ಈ ಪುಣ್ಯಾಕಾರ್ಯದಲ್ಲಿ ಸಹಭಾಗಿಯಾಗು ತಾಯಿ. ಹಾಲು ಕುಡಿದು ಚೇತರಿಸಿಕೊಳ್ಳುವ ಮಹಾವಿಷ್ಣುವಿಗೆ ಒಂದು ದಿನ ಹುತ್ತದಿಂದ ಹೊರಬರುವಂತೆ ಆ ಚಿತ್ಶಕ್ತಿಯ ಪ್ರೇರಣೆಯಾಗುವುದು. ಅಂದು ಧರ್ಮ ಸಂರಕ್ಷಕನಾಗಿ ಬರು ವ ದೇವನ ಕಡೆಗೆ ಲೋಕದ ಗಮನವೂ, ಲೋಕದ ಕಡೆಗೆ ಆ ದೇವನ ದಾರ್ಶನಿಕ ದೃಷ್ಟಿಯೂ ಹರಿಯುವುದು. ನೀನು ಸಮ್ಮತಿಸಬೇಕು ತಾಯೆ”

-ಎಂದು ಪರಬ್ರಹ್ಮ ಮಹೇಶ್ವರರು ಒಂದಾಗಿ ಕೇಳಿಕೊಂಡಾಗ ಸಾತ್ವಿಕ ಸಂಪ್ರೀತೆ ಮಹಾಲಕ್ಷಿಯು ಸ್ವತಃ ಗೋಪಿಕೆಯಂತೇ ಆ ಹಸುಕರುಗಳನ್ನು ಹೊಡೆದುಕೊಂಡು ಚೋಳರಾಜನ ಆ ಸ್ಥಾನಕ್ಕೆಂದೇ ಹೊರಟು ಬಂದಳು. ಆಕೆ ಪತಿಯ ಮೇಲೆ ಮುನಿಸಿಕೊಂಡಿದ್ದರೇನು? ಆತನ ಮೇಲಿನ ಪರಮ ಭಕ್ತಿಯನ್ನೆಂದಿಗೂ ಬಿಟ್ಟುಕೊಡಲಾರಳಲ್ಲ. ಆ ದೇವನ ಪ್ರೀತ್ಯರ್ಥ ಕಲ್ಯಾಣಕಾರ್ಯದಲ್ಲಿ ಪರೋಕ್ಷವಾಗಿಯೆ ಭಾಗಿಯಾದಳು. ಎಷ್ಟೇ ಆಗಲಿ ಆಕೆ ಮಹಾಮಾಯಯೇ. ಮುಂದೆ ನಡೆಯಲಿರುವುದೇನೆಂದು ಬಲ್ಲವಳೇ. ಅಂತೇ ಹುಸುಕರುಗಳಿಗೆ ಗೋಪಿಕೆ ಯಾದಳು.

ಆ ಹಸುಕರುಗಳು ನೋಡಲು ದಷ್ಟಪುಷ್ಟವಾಗಿದ್ದು ಕಣ್ಕೊರೈಸುವಂತಿದ್ದವು. ಭೂಲೋಕದ ಹಸುಗಳ ಹಿಂಡಿನಲ್ಲೆ ಇಂಥ ಅತ್ಯಪೂರ್ವ ಜಾತಿಯ ದುರ್ಲಭವೆನಿಸಿತ್ತು. ಇವು ರಾಜನ ಪಶು ಸಂಗೋಪನಾಲಯದಲ್ಲೆ ಇರಲು ಯೋಗ್ಯವಾಗಿರುವುವು ಎಂದು ರಾಜ ಬೀದಿಯಲ್ಲಿ ಅವುಗಳೊಂದಿಗೆ ಗೋಪಿಕೆಯ ರೂಪದ ಈ ಶ್ರೀದೇವಿಯು ಬರುತ್ತಿದ್ದರೆ ಊರ ಜನರು ಆಡಿಕೊಂಡರು. ಅದಾಗಲೆ ಚೋಳರಾಜನ ಅರಮನೆಯು ಗೋಪಾಲಕರು ಈ ವಿಶಿಷ್ಟಜಾತಿಯ ಆಕಳು ಕರುವನ್ನು ನೋಡದಿರಲಿಲ್ಲ. ಅವು ರಾಜನಿಗೇ ವಿಕ್ರಯಿಸಲಿಕ್ಕಾಗಿ ಬಂದಿವೆಯೆಂದು ತಿಳಿದಾಗ ತಡಮಾಡದೆ ಆ ಗೋಪಿಕೆಯನ್ನು ರಾಜಸ್ತಾನಕ್ಕೇ ಕರೆತಂದರು. ಚೋಳರಾಜನು ಆತನ ಪತ್ನಿಯು ಈ ಹಸುಕರುಗಳ ಅಂದ ಚೆಂದಕ್ಕೆ ಮನಸೋತರು. ಕಾಮಧೇನುವಿನಂತೇ ಹಾಲು ಕರೆವುದೆಂದು ಕೇಳಿ ಬೆರಗಾದರು. ಗೋಪಿಕೆಯ ಮುಖ ಲಕ್ಷಣ ನೋಡಿ ಅವಳ ಮಾತನ್ನು ನಂಬಿದರು . ಅವಳು ಕೇಳಿದಷ್ಟು ಸ್ವರ್ಣ ಮುದ್ರಿಕೆ ವರಹಗಳನ್ನು ಕೊಟ್ಟು ಕೊಂಡುಕೊಂಡರು. ಚೋಳ ರಾಜನು, ತನ್ನ ರಾಣಿಯು ಇಚ್ಛಿಸಿದಂತೆ ಇಂದಿನಿಂದಲೆ ಈ ಹಸುವಿನ ಹಾಲು ಅಂತಃಪುರವನ್ನು ತಲುಪಬೇಕೆಂದು ಆಜ್ಞಹೊರಡಿಸಿದನು.

ಹೀಗೆ ಚೋಳರಾಜನಿಗೆ ಹಸುಕರುಗಳನ್ನು ವಿಕ್ರಯಿಸಿದ ಮೇಲೆ ಮಹಾಲಕ್ಷ್ಮಯು ತನ್ನ ಸ್ವಾಮಿಯು ವೆಂಕಟಾದ್ರಿಯ ಹುತ್ತದೊಳಗೆ ಹೇಗಿರುವನೋ ಎಂದು ಖಿನ್ನಳಾಗಿಯೆ ಕೊಲ್ಹಾಪುರದತ್ತ ಪಯಣಿಸುತ್ತಿರಲಾಗ ದೇವರ್ಷಿ ನಾರದರು ಆಕೆಗೆ ದರ್ಶನ ಕೊಟ್ಟರು.
“ಜಗನ್ಮಾ ಹೋದ ಕೆಲಸವಾಯೆತೇ?” ಕೇಳಿದರು.
“ಆಯಿರು ನಾರದ. ಆದರೆ ಏಕೊ ಸಮಾಧಾನವೆ ಇಲ್ಲವಾಗಿಗೆ...”

“ಯೋಚಿಸುವುದೇಕೆ ತಾಯೆ? ಮುಂದೆ ಶ್ರೀಮನ್ನಾರಾಯಣ ತನ್ನ ಕಲ್ಯಾಣ ಸಮಯದಲ್ಲಿ ನಿನ್ನನ್ನೂ ಕರೆಸಿಕೊಳ್ಳುವನು ತಾಯೇ. ಕಾಲಕೂಡಿ ಬರುವವರೆಗೆ ಕಾಯಬೇಕಷ್ಟೇ.” ನಾರದರೆಂದರು ನಗುತ್ತಾ.

“ಏನೆಂದೆ! ನನ್ನ ಸ್ವಾಮಿಗೆ ಕಲ್ಯಾಣ ಸಮಯವೇ…?” ಮಹಾಲಕ್ಷ್ಮಿಯ ಕಣ್ಗಳೆರಡೂ ಅಗಲವಾದವು. ತೀಕ್ಷ್ಣನೋಟ ಬೀರಿದವು.

“ಗಾಬರಿ ಏಗೆ ತಾಯೆ! ನಿನ್ನ ಸ್ವಾಮಿಯ ಕಲ್ಯಾಣವೆಂದರೆ ಜಗತ್ಕಲ್ಯಾಣವೇ...” ಈ ಮಹಾತಾಯಿಗೆ ತನ್ನ ಪತಿದೇವರ ಮಹಿಮೆ ತಿಳಿಯದೇ? ಎಂದು ನಾರದರು ಮತ್ತೆ ನಕ್ಕರು. ಆಕೆ ನೋಡುತ್ತಿದ್ದಂತೆಯೆ ‘ನಾರಾಯಣ ನಾರಾಯಣ’ ಎನ್ನುತ್ತ ಅಂತರ್ಧಾನರಾದರು.

ಇತ್ತ ಅರಮನೆಯ ಗೋಪಾಲಕನು ಹೊಸ ಹಸು ಕರುಗಳನ್ನು ನೂರಾರು ಸಂಖ್ಯೆ ಯಲ್ಲದ್ದ ಮಂದೆಯೊಡನೆ ವೆಂಕಟಾಚಲದ ಅರಣ್ಯಕ್ಕೆ ಹೊಡೆದುಕೊಂಡು ಹೋಗಿದ್ದನು. ಬ್ರಹ್ಮಸ್ವರೂಪಿ ಹಸುವು ಎಲ್ಲ ಹಸುಗಳೊಂದಿಗೆ ಮೇಯದೇನೆ ಮೆಲ್ಲನೆ ಗೋಪಾಲಕನ ಕಣ್ ತಪ್ಪಿಸಿ ಒಂಟಿಯಾಗೆ ಅಲೆಯುತ್ತ ಶ್ರೀಮನ್ನಾರಾಯಣನು ವಾಸಿಸುತ್ತಿದ್ದ ಬೃಹದಾಕಾರದ ಹುತ್ತವನ್ನು ಆಘ್ರಾಣಿಸಿ ಪತ್ತೆ ಹಚ್ಚಿತ್ತು. ಹುತ್ತದೊಳಗೆ ಕುಳಿತಿರುವ ಸ್ವಾಮಿಯ ಶ್ವಾಸೋಚ್ಚಾಸವನ್ನು ಗರುತಿಸಿತು. ಆದೇನು ಲೀಲಿಯೋ ಹುತ್ತದ ರಂಧ್ರಗಳು ಹಸುವು ಅಲ್ಲಿ ನಿಂತಿದ್ದರೆ ಆದರೆ ಕೆಚ್ಚಲಿನೆತ್ತರಕೆ ಸಮನಾಗಿದ್ದವು. ಹಸುವೂ ಅಲ್ಲೆ ಸರಿಯಾಗಿ ನಿಂತು ತನ್ನ ಕೆಚ್ಚಲಿನಿಂದ ತನ್ನಷ್ಟಕ್ಕೇ ತಾನೆ ಹಾಲನ್ನು ಹುತ್ತದೊಳಗೆ ಕರೆಯುವುದಕ್ಕಾರಂಭಿಸಿತು. ಆನಂತರವೆ, ಯಥಾಪ್ರಕಾರ ಮಂದೆಯನ್ನು ಸೇರುತ್ತಿತ್ತು. ಹೀಗೆ ಯಾರೂ ಕಂಡು ಕೇಳರಿಯದ ರೀತಿಯಲ್ಲಿ ಹುತ್ತದಲ್ಲಿದ್ದ ಶ್ರೀಮನ್ನಾರಾಯಣ ಸ್ವಾಮಿಗೆ ಕ್ಷೀರಪಾನ ಸೇವೆಯು ಬಹು ದನಗಳೇ ನಿರ್ವಿಘ್ನವಾಗಿ ನಡೆಯುತ್ತಿತ್ತು. ಇದೇ ಹಸುವು ರಾಜನ ಅರಮನೆಯಲ್ಲಿ ಒಂದು ತೊಟ್ಟೂ ಹಾಲು ಕೊಡದಾಗಿತ್ತು.

2 comments:

Kannada kanmani said...

ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
http://enguru.blogspot.com

Shivaram H said...

ನನ್ನ ಬ್ಲಾಗ್ ಬಗ್ಗೆ ನೀವು ಹೇಳುವುದೇನು ಇಲ್ಲವೆಂದ ಮೇಲೆ..?