ಭಗವದ್ ಭಕ್ತಿ –ಅಂತರಂಗದ ಶೋಧನೆ.

ಮನುಷ್ಯ ಗಾಳಿಗಿಂತ ವೇಗವಾದ ತನ್ನ ಮನಸ್ಸಿಗಂಜಿ ಗುಡಿಗೋಪುರಗಳನ್ನು ಕಟ್ಟಿದ್ದಾನೆ. ತನ್ನ ಏಕಾಗ್ರಚಿತ್ತತೆಯ ದೃಷ್ಟಿ ಕೇಂದ್ರೀಕರಿಸಲೆಂದೇ ಗರ್ಭಗುಡಿಯೊಳಗೆ ದೇವರ ಮೂರ್ತಿಯನ್ನು ಪ್ರಾಣಪ್ರತಿಷ್ಠಾಪನೆ ಮಾಡಿದ್ದಾನೆ. ಆ ದೇವರ ಶಿಲಾ ಮೂರ್ತಿಯಲ್ಲಿ ಆವಿರ್ಭವಿಸುವಂಥ ದೈವಿಕವಾದ ದಿವ್ಯವಾದ ತೇಜೋಮಯಿಯಾದ ಪ್ರಭಾವಳಿಯಲ್ಲಿ ಆಂತರಂಗಿಕ ಪ್ರಜ್ಞೆಯಲ್ಲಿ ತಾನೊಂದಾಗಿ ಅತೀವ ವ್ಯಾಕುಲಭಾವದಿಂದ ತನ್ಮಯತೆಯಿಂದ ಕೈಮುಗಿದು ಪ್ರಾರ್ಥಿಸುತ್ತಾನೆ. 
ಆದ್ದರಿಂದ, ದೇವರಲ್ಲಿ ಭಕ್ತಿ ಎಂದರೆ ಬರಿ ಮಂತ್ರ ಸ್ತೋತ್ರಗಳ ಪಠಣೆಯಷ್ಟೇ ಅಲ್ಲ, "ಮನನಾತ್ ತ್ರಾಯತೇ ಮಂತ್ರಃ" ಮನಸ್ಸಿನ ಮೇರೆಯನ್ನು ಮೀರಿ  ನಮ್ಮ ಜೀವಾತ್ಮನಲ್ಲಿ ಪರಮಾತ್ಮನನ್ನು ಕಾಣುವುದು. ಹಾಗೆ ನಾವು ಆಂತರಂಗಿಕವಾಗಿ ದೇವರಲ್ಲಿದ್ದವರಾದಾಗಲೆ ನಮ್ಮ ನಡೆನುಡಿಗಳು ಸರಿಯಾಗಿವೆಯೇ ? ಎಂದು ನಮ್ಮನ್ನು ನಾವು ಪರಾಮರ್ಶಿಸಿಕೊಳ್ಳುವುದು. ಹಾಗೆಯೇ ನಮ್ಮೊಳಗೇ ಎಲ್ಲ ಜ್ಞಾನದ್ವಾರಗಳೂ ತೆರೆದುಕೊಳ್ಳುವುವು. ಅಂದರೆ, ಭಕ್ತಿಮಾರ್ಗದ ಇನ್ನೊಂದು ಮುಖವೇ ಜ್ಞಾನಮಾರ್ಗ. ಅದೇ ಸತ್ವಗುಣಸಾಧನೆಯ ಸನ್ಮಾರ್ಗವಾಗಿದೆ.

ಆದಕಾರಣ, ಭಗವದ್ ಭಕ್ತಿ ಎಂಬುದು ಅಂತರಂಗದ ಶೋಧನೆ. ಅದು ಹೊರಗಿನಿಂದ ಅಲ್ಲ ನಮ್ಮೊಳಗಿನಿಂದ ಬರಬೇಕು. ಅದು ತಾಯಿ ಪ್ರೇಮದಿಂದ ಆರಂಭವಾಗಿ ಮನುಷ್ಯನ ಕೊನೆಯುಸಿರಿನಲ್ಲಿ ವಿಶ್ವಪ್ರೇಮದಲ್ಲಿ ಲೀನವಾಗುವುದು. ಯಾಕೆಂದರೆ, ಮಗು ತನ್ನ ಮೊದಲ ನೋಟದಲ್ಲೇ ಅಂತರಂಗದಲ್ಲಿ ತಾಯಿಪ್ರೇಮವನ್ನು ಕಾಣುತ್ತದೆ. ಆನಂತರ, ತಂದೆಯಲ್ಲೂ ಅದೇ ಮೂರ್ತ ಭಾವನೆ ಕಾಣತೊಡಗುತ್ತದೆ.

ಮನುಷ್ಯ ಯಾವುದೇ ವಸ್ತು ವಿಷಯಗಳನ್ನು ಭೌತಿಕ ಮತ್ತು ವೈಜ್ಞಾನಿಕವಾಗಿ ಚಿಂತಿಸುತ್ತಾ ಅದರಲ್ಲೇ ಇದೆ ಬದುಕಿನ ಜ್ಞಾನಮಾರ್ಗವೆಂದುಕೊಂಡರೆ, ವಿಚಾರಗಳ ಗೊಂದಲದಲ್ಲಿ ಬೀಳುವುದೇ ಹೆಚ್ಚು. 
ಆದಕಾರಣ, ಭೌತಿಕತೆ ಮತ್ತು ಭೌದ್ಧಿಕತೆ ನಡುವೆ ಆಂತರಿಕ ಪ್ರಜ್ಞೆಯೊಂದಿದೆಯಲ್ಲ! ಅದು ವೈಜ್ಞಾನಿಕತೆಯನ್ನೂ ಮೀರಿ ಅಂತರಾತ್ಮನಲ್ಲಿಗೆ ಕೊಂಡೊಯ್ಯುತ್ತದೆ. ಅದಕ್ಕೆ ಪೂರ್ವಾಗ್ರಹ ಪೀಡನೆಗಳಿಂದ ದೂರವಾದ ಸಹೃದಯತೆ ಸುವಿಶಾಲವಾದ ಜೀವನದೃಷ್ಟಿಯೊಂದಿರಬೇಕು. ಆ ದೃಷ್ಟಿಯಲ್ಲೇ ಮನಸ್ಸನ್ನು ಕೇಂದ್ರಿಕರಿಸಬೇಕಲ್ಲ...! ಅಂತಹ ಏಕಚಿತ್ತತೆಗಾಗಿಯೇ ನಿರ್ಮಿಸಲ್ಪಟ್ಟಿರುವ ಕೇಂದ್ರಗಳೇ ದೇವಮಂದಿರಗಳು!

ಜಾತಿಬೇಧ ಮತ್ತು ಕೀಳುರಾಜಕೀಯಗಳಿಂದ ಹೊರತಾಗಿದ್ದು, ನಮೋನಮಃ ಎಂದೇ ಶರಣಾಗಿ ಬರುವ ಮುಕ್ತಮನಸ್ಸಿನಿಂದ ಬರುವಂತಹ  ಆತ್ಮಗಳಿಗೆಲ್ಲಾ  ಮಾನವಾತೀತವಾದ ಅಲೌಕಿಕ ಶಕ್ತಿ ಸಂಚಲನೆಯನ್ನುಂಟುಮಾಡುವ, ಆ ಸನ್ನಿಧಿಗೆ ಬಂದಾಗ ಅನುಭಾವ ಅನುಭೂತಿಯಲಿ ತನ್ಮಯರಾಗುವಂತೆ ಮಾಡುವ ಸ್ವರ್ಗಸಾದೃಶ ಸ್ಥಾನಗಳೇ ಆ ದೇವಸ್ಥಾನಗಳಲ್ಲವೇ...?
ನಮ್ಮ ಆದಿ ಋಷಿ-ಮಹರ್ಷಿಗಳು ಮತ್ತು ದ್ವಿಜರು ವೇದ ಮಂತ್ರಗಳಿಂದ ದೇವರನ್ನು ಪ್ರಾರ್ಥಿಸಿದರೆ, ಅವುಗಳ ಕ್ಲಿಷ್ಟತೆ ಅರ್ಥವ್ಯಾಪ್ತಿ ಅರಿಯಲಾರದ ಜನಸಾಮಾನ್ಯರು ಭಕ್ತಿಮಾರ್ಗದಲ್ಲಿ, ಆಸಕ್ತರಾಗಲು ಶಿವಶರಣರು ವಚನಗಳಿಂದ, ಹರಿದಾಸರುಗಳು ಕೀರ್ತನೆಗಳಿಂದ ಅಲೌಕಿಕಶಕ್ತಿಯಲ್ಲಿ ದೇವರನ್ನು ಕಂಡುಕೊಳ್ಳುವಂತೆ ಧ್ಯಾನ ಮನನದಲ್ಲೇ ಸಮಾಜಚಿಂತನೆಯನ್ನೂ ಮಾಡಿದರು. ಹೀಗೇ ಜನಸಾಮಾನ್ಯರಲ್ಲೂ ಭಗವದ್ ಭಕ್ತಿಯ ಬೀಜಬಿತ್ತಿದರು. ಆದರೇನು! ಬರಬರುತ್ತಾ ಈ ತ್ರಿಗುಣಾತ್ಮಕ ಪ್ರಪಂಚದ ಬಹುಜನರಲ್ಲಿ ಕಾಣುತ್ತಿರುವುದೇನು? ಅವರುಗಳು ಕಂಡ ದೇವರನ್ನು ನಾವು ಕಾಣಲಾರೆವೇಕೆ...? ಎಂದು ಚಿಂತಿಸಲಾರರೇಕೆ...? ಸನ್ಮಾರ್ಗದಲ್ಲಿ ನಡೆಯುತ್ತಲೇ ಯುವ ಪೀಳಿಗೆಯ ಅಂತರಾತ್ಮಗಳು ಎಚ್ಚೆತ್ತುಕೊಳ್ಳಬಾರದೇಕೆ..?
ಯಾಕೆಂದರೆ, ಆತ್ಮನಿಲ್ಲ ಎನ್ನುವಾತನೊಳಗೂ ಒಬ್ಬ ಒಳಗಿನವನಿದ್ದಾನೆ.   
[ಇದು ಕೆಟ್ಟ ಉದಾಹರಣೆಯನ್ನಿ ಈ ಕಾಲಕ್ಕೆ ತಕ್ಕ ಉದಾಹರಣೆಯನ್ನಿ, ಸ್ನೇಹಿತ ರೊಡನೆ ಬಾರ್‍ನಲ್ಲಿ ಕುಳಿತು, ಗಂಟಲೊಳಗೆ ಒಂದೊಂದೇ ಪೆಗ್ ಹೋದಂತೆಲ್ಲ ತನ್ನೊಳಗಿನವನೊಬ್ಬ ಎಚ್ಚರಿಸುತ್ತಲೇ ಇರುತ್ತಾನೆಂಬುದನ್ನು ಬಲ್ಲವರು ಇಲ್ಲದಿಲ್ಲ ಅಲ್ಲವೇ..ಅವನಾರು...ಅವನೇ ಅಲ್ಲವೇ  ಅಂತರಾತ್ಮ..?] 


ಹೌದು, ನಾವು ಭಕ್ತಿಮಾರ್ಗದಲ್ಲಿ ಚಿಂತನಶೀಲರಾಗಬೇಕು. ಯಾಕೆಂದರೆ, ದೈವಸಾಕ್ಷಾತ್ಕಾರವೆಂಬುದು ಅಸಮಾನ್ಯವಾದರೂ ಅಸಾಧ್ಯವೇನಲ್ಲ. ಬುದ್ಧಿವಂತರು ವಿದ್ಯಾವಂತರಿಗಿಂತ ಹೆಚ್ಚಾಗಿ ಮುಗ್ಧಜನರಲ್ಲೇ ನಾವು ದೇವರ ಭಕ್ತಿಯನ್ನು ಕಾಣುತ್ತೇವಲ್ಲದೇ ಅವರ ದೈವ ನಂಬಿಕೆಗೆ ಮೂಕವಿಸ್ಮಿತರಾಗುತ್ತೇವೆ. ಕಲ್ಲಿನ ಮೂರ್ತಿಗೇ ಪ್ರಶ್ನೆ ಕೇಳುವ ಉತ್ತರ ಪಡಯುವ ಅವರ ನಡೆ ಪ್ರಶ್ನಾತೀತವೇ ಅಲ್ಲವೇ...?
ಆಧ್ಯಾತ್ಮ ಮಾರ್ಗದಲ್ಲಿ ಧ್ಯಾನ-ಯೋಗಸಾಧನೆಯಲ್ಲಿ ದೈವಾನುಭೂತಿ ದೈವಾನುಗ್ರಹ ಹೊಂದಿದವರಾಗಿ ಏಕಕಾಲದಲ್ಲಿ ಬೇರೆಬೇರೆ ಕಡೆ ಕಾಣಿಸಿಕೊಂಡ  ಮಹಾನ್ ಸಂತರುಗಳಿದ್ದಾರೆ. ಅವರಲ್ಲಿ ಅನಕ್ಷರಸ್ಥರೂ ಇದ್ದು “ಯೋಗದಲ್ಲಿ ಎಲ್ಲವೂ ಇದೆ” ಎನ್ನೋದನ್ನ “ಯೇಗ್ದಾಗೆಲ್ಲ ಐತೆ” ಎಂದೇ  ಉಚ್ಛಾರಣೆ ಮಾಡುವಂತಹ ಮುಕುಂದೂರು ಸ್ವಾಮಿಗಳಂತಹ ಮಹಾನುಭಾವರನ್ನು ಕಂಡವರಿದ್ದಾರೆ.
ಈ ಹೈಟೆಕ್ ಯುಗದಲ್ಲಿ ಬದ್ಧಿವಂತಿಕೆ ದೆವ್ವದ ಕಾರ್ಯಾಗಾರವಾಗಿದೆ(Intellect is the Devils workshop). ಬುದ್ಧಿವಂತರು ವಿದ್ಯಾಂತರೆಲ್ಲರೂ ಹಾಗೇನಿಲ್ಲ ಬಿಡಿ. ಬುದ್ಧಿವಂತಿಕೆಯೇ ಭಗವಂತನ ದೇವಾಲಯ (Intellect is the Temple of God) ಎಂಬ ನಾಣ್ಣುಡಿಯೆ ಇದೆ.

ನೋಡಿ, ಈ ಲೋಕದಲ್ಲಿ ದೇವರನ್ನು ನಂಬಿದವ ಆಸ್ತಿಕ. ಅವನೊಳಗೇ ಕಾಣುವನು ನಾಕ. ಅವನಿಗೆಲ್ಲಿದೆ ಶೋಕ...?  ಕಷ್ಟಸಂಕಷ್ಟಗಳಲ್ಲಿ ಅವನಿಗೆ ದೇವರ ಮಂತ್ರವೇ ತಾರಕ! ದೇವರನ್ನು ನಂಬದವ ನಾಸ್ತಿಕ. ಅವನೊಳಗೇ ಕಾಣಬಲ್ಲನೇ ನಾಕ- ಸುಖ. ಅವನು ಒಳಗೆ ಹೊರಗೆ ಕಾಣುವುದೆಲ್ಲವೂ ಬರೀ ಯಾಂತ್ರಿಕ. ಮಂತ್ರವಿಲ್ಲದ ಯಂತ್ರ ತಂತ್ರಗಳಿದ್ದರೇನು ಬಿಟ್ಟೂಬಿಡದು ಶೋಕ!
ಹಾಗೆಂದರೆ, ನಾಸ್ತಿಕ ಹೇಳುತ್ತಾನೆ- ತನ್ನದೆಲ್ಲವ ವೈಜ್ಞಾನಿಕ. ತಾನಲ್ಲ ಭಾವುಕ. ತನಗೇಕೆ ಶೋಕ?

ಆಗ ಮತ್ತೆ ಉತ್ತರಿಸುತ್ತಾನೆ ಆಸ್ತಿಕ- ಈ ದೇಹವೊಂದು ಉಸಿರಾಡುವ ಯಂತ್ರವಲ್ಲವೇ? ಅದು ಒಂದು ವೇಳೆ ಕೆಟ್ಟು ಯಾವೊಂದು ವೈದ್ಯಕೀಯ ವಿಜ್ಞಾನದಿಂದ ದುರಸ್ತಿಯಾಗದೇ ಹೋದರೆ ಇನ್ನೇನು? ಇರುವುದೊಂದೇ ಕಡೆಯ ಆಯ್ಕೆ ಅದೇ ಆ ಗೋವಿಂದನ ತಾರಕ ಮಂತ್ರವಲ್ಲವೇ..?

ಹಾಗೆ ನೋಡಿದರೆ, ಈ ಪ್ರಪಂಚದಲ್ಲಿ ದೇವರನ್ನು ನಂಬಿದವ ಸುಖಿ. ದೇವರನ್ನೇ ಪೂರ್ಣ ಅವಲಂಬಿಸಿದವ ಅಸುಖಿ. ದೇವರು ಇಲ್ಲ ಎಂದವ ಬೇಡವೆಂದರೂ ಯಾವಾಗಲೂ ಸುಖದ ಹುಡುಕಾಟದಲ್ಲೇ ಇರುತ್ತಾನೆ.

ಮನುಷ್ಯನ ದೇಹವೊಂದು ಯಂತ್ರವೇ ಆದರೂ, ಪ್ರಾಕೃತಿಕವಾಗಿ ಪಂಚಭೂತಗಳಿಂದಾಗಿದೆ. ಅದು ಪ್ರತಿ ಬೆಳಗಿನಲ್ಲೂ ಪುನಶ್ಚೇತನಗೊಳ್ಳುವುದೂ ಅನಿಕೇತನದಲ್ಲಿ; ಅಗೋಚರಶಕ್ತಿಯಲ್ಲಿ. ಅದೇನೂ ಕೇವಲ ಯಾಂತ್ರಿಕವಲ್ಲವಲ್ಲ. ಅದು ವೈದ್ಯಕೀಯದಲ್ಲೂ ದೃಢಪಟ್ಟಿದೆ.  ಇಲ್ಲದಿದ್ದರೆ, ಯಾವುದೇ ವಯಸ್ಸಿನಲ್ಲಿ ವ್ಯಕ್ತಿ ಸತ್ತರೇನು! ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಈ ಪ್ರಪಂಚದಲ್ಲಿ ವೈದ್ಯರು ಮೃತ ದೇಹವನ್ನೂ ಶಸ್ತ್ರಚಿಕಿತ್ಸೆಯಿಂದ ಪೂರ್ಣ ರಿಪೇರಿ ಮಾಡಿ, ಆ ಕೂಡಲೇ ರಿಚಾರ್ಜ್ ಮಾಡಿಬಿಡುತ್ತಿದ್ದರು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ